ಜಿಟಿಟಿಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಯಶಸ್ವಿ
ಕನ್ನಡಪ್ರಭ ವಾರ್ತೆ ದಾಂಡೇಲಿಸೇವಾ ಸಂಕಲ್ಪ ತಂಡ ಮತ್ತು ಭಗತ್‌ಸಿಂಗ್ ಯುವ ಬಳಗ ದಾಂಡೇಲಿ ಇವರ ಆಶ್ರಯದಡಿ ನಗರದ ಜಿಟಿಟಿಸಿ ಕಾಲೇಜು, ಎಸ್‌ಡಿಎಂ ಆಸ್ಪತ್ರೆ ಧಾರವಾಡ ಮತ್ತು ದಾಂಡೇಲಿ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಅಂಬೇವಾಡಿಯ ಜಿಟಿಟಿಸಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಶಿಬಿರ ಉದ್ಘಾಟಿಸಿ ಮಾತನಾಡಿದ ಜಿಟಿಟಿಸಿ ಕಾಲೇಜಿನ ಪ್ರಾಚಾರ್ಯ ದತ್ತಾತ್ರೇಯ, ದಾನಗಳಲ್ಲಿ ರಕ್ತದಾನ ಪವಿತ್ರ, ರಕ್ತದಾನದಿಂದ ಹಳೆ ರಕ್ತದ ಬದಲಾಗಿ ಹೊಸ ರಕ್ತವು ಉತ್ಪತ್ತಿಯಾಗುತ್ತದೆ. ನೀವು ಕೊಡುವ ರಕ್ತ ಇನ್ನೊಬ್ಬರ ಜೀವ ಉಳಿಸುತ್ತದೆ ಎಂದರು.ಶಿಬಿರ ಆಯೋಜಕ ಸುಧೀರ ಶೆಟ್ಟಿ ಮಾತನಾಡಿ, ರಕ್ತವು ಮನುಷ್ಯನ ದೇಹದಲ್ಲಿರುವ ಒಂದು ಅದ್ಬುತ ಸೃಷ್ಟಿ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ದಾನ ಮಾಡಿದರೇ ಮಾತ್ರ ಇನ್ನೊಬ್ಬರ ಜೀವ ಉಳಿಸಲು ಸಾಧ್ಯ ಎಂದರು.
ನಮ್ಮ ಸಂಘಟನೆಯಿಂದ ಇದು 16ನೇ ರಕ್ತದಾನದ ಶಿಬಿರವಾಗಿದೆ. ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರಿಂದ ಅವಿರತ ಪ್ರಯತ್ನದಿಂದ ಇಂದು 144 ಯುನಿಟ್ ರಕ್ತದ ಸಂಗ್ರಹ ಈ ಶಿಬಿರದಲ್ಲಿ ಆಗಿದೆ ಎಂದರು.
ಈ ಸಂದರ್ಭ ಸೇವಾ ಸಂಕಲ್ಪ ತಂಡ ಮತ್ತು ಭಗತ್‌ಸಿಂಗ್ ಯುವ ಬಳಗದ ಅರ್ಜುನ ಗವಾಸ, ವಿನಯ ಹುಕ್ಕೇರಿ, ರಾಜೇಶ ಗುಜ್ಜರ, ಪ್ರಕಾಶ ಗೊನಿ, ಸುಮೇರ ಜೈನ, ಪ್ರತಾಪ ರಜಪುತ, ಮಾವೀರ ಟೊಪ್ಪನ್ನವರ, ಪ್ರಭು ಅರುಟಗಿ, ಸಾರ್ವಜನಿಕ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಅರುಣಕುಮಾರ, ರಿಯಾಜ ಸಿಂಧೆ, ರುಕ್ಮೀಣಿ ಕಡೆಮೆನಿ, ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ಪಿಆರ್‌ಓ ಪ್ರಶಾಂತಕುಮಾರ, ಡಾ. ಜಿತೇಶ, ಡಾ. ಪೂಜಾ, ಡಾ. ಹಿಬಾ, ಜಿಟಿಟಿಸಿ ಕಾಲೇಜಿನ ವಾಸುದೇವ ಮಿರಾಶಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.