ರಕ್ತದಾನ ಮಾನವೀಯತೆಯ ಸಂಕೇತ: ಕೆ.ಟಿ.ಹನುಮಂತು

| Published : Dec 13 2024, 12:48 AM IST

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಅತಿ ಹೆಚ್ಚು ಯೂನಿಟ್ ರಕ್ತದಾನ ಮಾಡಿ ಪ್ರತಿ ವರ್ಷ ಶೀಲ್ಡ್ ತೆಗೆದುಕೊಳ್ಳುತ್ತಿದೆ. ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು, ತಂದೆ- ತಾಯಿಗಳು, ಬಂದುಬಳಗ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳು ಎಲ್ಲಾ ದಾನಗಳಿಗಿಂತ ಮಹತ್ವ ಹೊಂದಿರುವ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ತಿಳಿಸಿದರು.

ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಆವರಣದ ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ಯುವ ರೆಡ್ ಕ್ರಾಸ್ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಜಿಲ್ಲಾ ಸರ್ಕಾರಿ ರಕ್ತ ನಿಧಿ ಕೇಂದ್ರ ಆಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಅತಿ ಹೆಚ್ಚು ಯೂನಿಟ್ ರಕ್ತದಾನ ಮಾಡಿ ಪ್ರತಿ ವರ್ಷ ಶೀಲ್ಡ್ ತೆಗೆದುಕೊಳ್ಳುತ್ತಿದೆ. ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು, ತಂದೆ- ತಾಯಿಗಳು, ಬಂದುಬಳಗ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಕೆ.ಟಿ.ಹನುಮಂತು ಮಾತನಾಡಿ, ರಕ್ತದಾನ ಮಾನವೀಯತೆಯ ಸಂಕೇತ. ಪ್ರತಿ ಒಂದು ಭಾರಿ ರಕ್ತದಾನ ಮಾಡಿದರೆ ಮೂರರಿಂದ ನಾಲ್ಕು ಜನರ ಪ್ರಾಣ ಉಳಿಸಬಹುದು. ಆದರಿಂದ ವಿದ್ಯಾರ್ಥಿ ದೆಸೆಯಲ್ಲಿ ರಕ್ತದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಹೊಸ ಹೊಸ ರಕ್ತದಾನಿಗಳನ್ನು ಹುಟ್ಟು ಹಾಕಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರ ನಡೆದಾಗ ಭಾಗವಹಿಸುವ ಮೂಲಕ ರಕ್ತದಾನ ಮಾಡಿ ಎಂದರು.

ರಕ್ತಕ್ಕೆ ಪರ್ಯಾಯ ವಸ್ತು ಜಗತ್ತಿನಲ್ಲಿ ಸಂಶೋಧನೆ ಮಾಡಲು ಸಾಧ್ಯವಾಗಿಲ್ಲ. ದೇಶದಲ್ಲಿ ರಕ್ತದ ಕೊರತೆ ಹೆಚ್ಚು ಇದ್ದು 5 ಕೋಟಿ ಯೂನಿಟ್ ರಕ್ತದಲ್ಲಿ ಮೂರುವರೆ ಕೋಟಿ ಯೂನಿಟ್ ರಕ್ತ ಸಿಗುತ್ತಿದ್ದು, ಇನ್ನೂ ಎರಡುವರೆ ಕೋಟಿ ಯೂನಿಟ್ ರಕ್ತದ ಕೊರತೆ ಇದೆ ಎಂದರು.

ಈ ವೇಳೆ ಕಾಲೇಜು ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪ ಪ್ರಾಂಶುಪಾಲ ಡಾ.ವಿನಯ್, ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಯುವ ರೆಡ್ ಕ್ರಾಸ್ ಘಟಕ ಕಾರ್ಯಕ್ರಮಾಧಿಕಾರಿಗಳಾದ ಡಾ.ಎಚ್.ಸಿ.ಚರಣ್ ಕುಮಾರ್, ಡಾ.ಜಿ.ರಜಿನಿ, ಘಟಕದ ಅಧ್ಯಕ್ಷ ತುಷಾಂತ್, ಉಪಾಧ್ಯಕ್ಷ ಸರ‍್ಯಕಶ್ಯಪ್, ಯಶವಂತ್, ರೋಹನ್, ದೀನ್, ನಿಶ್ಚಿತಾ, ಬಿಂದು, ಪ್ರೀತಿ, ಶರಣ್ಯ ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕರಾದ ಟಿ.ನಾರಾಯಣ ಸ್ವಾಮಿ, ಷಡಕ್ಷರಿ, ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಸಿಬ್ಬಂದಿ ರಾಜಣ್ಣ, ಜಗದೀಶ್, ರಾಮು ಹಾಜರಿದ್ದರು.