ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಸರ್ಕಾರವು ಆರ್ ಎಸ್‌ಎಸ್ ಕುಮ್ಮಕ್ಕಿನಿಂದ ಸಂವಿಧಾನದ ಆಶಯಗಳನ್ನು ತಿರುಚುವ ಮತ್ತು ಸಂವಿಧಾನವನ್ನು ಬದಲಿಸುವ ಕುತಂತ್ರಕ್ಕೆ ಮುಂದಾದರೆ ದೇಶದಾದ್ಯಂತ ರಕ್ತಕ್ರಾಂತಿ ನಡೆಯಲಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಎಚ್ಚರಿಸಿದರು.ಆರ್ ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದಲ್ಲಿರುವ ಜಾತ್ಯಾತೀತ ಮತ್ತು ಸಮಾಜವಾದ ಪದಗಳನ್ನು ತೆಗೆದು ಹಾಕಬೇಕು ಎಂದು ಹೇಳಿದ್ದಾರೆ. ಆದರೆ, ದೇಶದ ಬಹುಜನರು ಜಾತ್ಯಾತೀತ ಮತ್ತು ಸಮಾಜವಾದ ಮಾತ್ರವಲ್ಲ ಸಂವಿಧಾನದ ಒಂದು ಪದವನ್ನೂ ತೆಗೆಯಲು ಬಿಡುವುದಿಲ್ಲ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಂವಿಧಾನ ನೀಡುತ್ತಿರುವ ಕೊಡುಗೆ ಬಗ್ಗೆ ನಾವು ಚರ್ಚೆಗೆ ಬರುತ್ತೇವೆ. ದೇಶಕ್ಕೆ ಮನುಸ್ಮೃತಿಯ ಕೊಡುಗೆ ಏನು? ಎಂಬ ವಿಚಾರದ ಬಗ್ಗೆ ಆರ್ ಎಸ್‌ಎಸ್ ನವರು ಚರ್ಚೆಗೆ ಬರಲಿ. ಆರ್ ಎಸ್‌ಎಸ್ ಮತ್ತು ಬಿಜೆಪಿಯವರು ಸಂವಿಧಾನದ ಬಗ್ಗೆ ಪದೇ ಪದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಬಹುಜನರನ್ನು ಪ್ರಚೋದಿಸುತ್ತಿದ್ದಾರೆ. ಶೋಷಿತ ಸಮುದಾಯಗಳ ತಾಳ್ಮೆಯನ್ನು ಪರೀಕ್ಷೀಸುತ್ತಿದ್ದಾರೆ ಎಂದರು.ಆದರೆ, ಸಂವಿಧಾನವನ್ನು ಬದಲಿಸುವ ಆರ್ ಎಸ್‌ಎಸ್‌ನ ಕುತಂತ್ರ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮುಂದೆ ನಡೆಯುವುದಿಲ್ಲ. ಸಂವಿಧಾನದ ವಿರುದ್ಧ ಮಾತನಾಡುವವರ ಬಾಯಿಗೆ ಹೇಗೆ ಬೀಗ ಹಾಕಬೇಕು ಎಂಬುದು ನಮಗೂ ತಿಳಿದಿದೆ. ಭಾರತವನ್ನು ಒಂದು ಜಾತಿ, ಒಂದು ಧರ್ಮ ಮತ್ತು ಒಂದು ಪಕ್ಷದ ಸ್ವತ್ತಾಗಲು ಬಹುಜನರು ಎಂದಿಗೂ ಅವಕಾಶ ಕೊಡುವುದಿಲ್ಲ. ಆರ್ ಎಸ್‌ಎಸ್ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
ದಲಿತ ಹಿರಿಯ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ, ಸಮಾನತೆ, ಸ್ವಾತಂತ್ರ್ಯದ ಜೊತೆಗೆ ಸಮಾಜವಾದ ಮತ್ತು ಧರ್ಮನಿರಪೇಕ್ಷ (ಜಾತ್ಯಾತೀತ) ಎಂಬ ಪರಿಕಲ್ಪನೆಗಳನ್ನು ಆಧಾರವಾಗಿಟ್ಟುಕೊಂಡು ಸಂವಿಧಾನವನ್ನು ರಚಿಸಿದ್ದಾರೆ. ಸಮಾಜವಾದ ಎಂಬ ಪರಿಕಲ್ಪನೆ ಸಂಪತ್ತಿನ ಸಮಾನ ಹಂಚಿಕೆಯನ್ನೂ, ಜ್ಯಾತ್ಯಾತೀತ ಎಂಬ ಪರಿಕಲ್ಪನೆಯು ಸರ್ವರೂ ಸಮಾನವಾಗಿ ಬದುಕಬೇಕು ಎಂಬ ಆಶಯಗಳನ್ನು ಹೊಂದಿವೆ. ಹೀಗಾಗಿ, ಡಾ. ಅಂಬೇಡ್ಕರ್ ಅವರು ಸಮಾಜವಾದ ಮತ್ತು ಜ್ಯಾತ್ಯಾತೀತ ಎಂಬ ಆಶಯಗಳ ಮೇಲೂ ನಂಬಿಕೆ ಇಟ್ಟಿದ್ದರು ಎಂದು ತಿಳಿಸಿದರು.ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದರು ಎಂಬುದನ್ನು ಬಿಜೆಪಿಯವರು ಟ್ರಂಪ್ ಕಾರ್ಡ್ ಮಾಡಿಕೊಂಡಿದ್ದಾರೆ. ಆದರೆ, ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಬಡವರ ಕಲ್ಯಾಣಕ್ಕಾಗಿ ಬಳಸಿಕೊಂಡರು. 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದರು. ಇದರಿಂದ ದೇಶದ ಕೋಟ್ಯಾಂತರ ಬಡ ಜನರು ಮತ್ತು ಶೋಷಿತ ಸಮುದಾಯಗಳು ಬದುಕುಳಿದರು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿಯ ಮೂಲಕ ದೇಶದ ಜನರನ್ನು ಹಿಂಶಿಸುತ್ತಿದೆ ಎಂದು ಅವರು ಆರೋಪಿಸಿದರು.
ಸಾಹಿತಿ ಸಿದ್ಧಸ್ವಾಮಿ, ಸೋಮಯ್ಯ ಮಲೆಯೂರು, ಸಿ. ಹರಕುಮಾರ್, ಅಶೋಕಪುರಂ ದೊಡ್ಡಗರಡಿ ಅಧ್ಯಕ್ಷ ಮಹೇಶ್, ಆದಿ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸಿದ್ದರಾಜು, ನಾಗರಾಜು ಮೊದಲಾದವರು ಇದ್ದರು.