ಮಣಿಪಾಲ ಮ್ಯಾರಥಾನ್‌ನೊಂದಿಗೆ ರಕ್ತ ಕಾಂಡ ಕೋಶ ದಾನ ಅಭಿಯಾನ

| Published : Feb 10 2024, 01:46 AM IST

ಸಾರಾಂಶ

18ರಿಂದ 55 ವರ್ಷದೊಳಗಿನ ಯಾರೂ ಕೂಡ ಈ ರಕ್ತ ಕಾಂಡ ಕೋಶ ದಾನ ಮಾಡಬಹುದಾಗಿದೆ. ಇದರಿಂದ ಸಾಕಷ್ಟು ಪ್ರಾಣಗಳನ್ನು ಉಳಿಸಬಹುದಾಗಿದೆ. ಈ ದಾನಿಗಳನ್ನು ಗುರುತಿಸಿ ನೋಂದಾಯಿಸಿಕೊಳ್ಳಲು ಈ ಮ್ಯಾರಥಾನ್ ಅತ್ಯುತ್ತಮ ವೇದಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಫೆ.11ರಂದು ನಡೆಯುವ ಜಾಗತಿಕ ಮಟ್ಟದ ಮಣಿಪಾಲ್ ಮ್ಯಾರಥಾನ್‌ ಸಂದರ್ಭ ರಕ್ತದ ಕ್ಯಾನ್ಸರ್ ವಿರುದ್ಧ ಜಾಗೃತಿ ಕೆಲಸ ಮಾಡುತ್ತಿರುವ ಡಿಕೆಎಂಎಸ್ -ಬಿಎಂಎಸ್ ಟಿ ಫೌಂಡೇಶನ್, ರಕ್ತ ಕಾಂಡ ಕೋಶ (ಬ್ಲಡ್ ಸ್ಟೆಮ್ ಸೆಲ್) ದಾನಿಗಳನ್ನು ನೋಂದಾಯಿಸು ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಬಗ್ಗೆ ಶುಕ್ರವಾರ ಮಣಿಪಾಲ ಗ್ರೀನ್ಸ್‌ನಲ್ಲಿ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾಹಿತಿ ನೀಡಿದರು.

18ರಿಂದ 55 ವರ್ಷದೊಳಗಿನ ಯಾರೂ ಕೂಡ ಈ ರಕ್ತ ಕಾಂಡ ಕೋಶ ದಾನ ಮಾಡಬಹುದಾಗಿದೆ. ಇದರಿಂದ ಸಾಕಷ್ಟು ಪ್ರಾಣಗಳನ್ನು ಉಳಿಸಬಹುದಾಗಿದೆ. ಈ ದಾನಿಗಳನ್ನು ಗುರುತಿಸಿ ನೋಂದಾಯಿಸಿಕೊಳ್ಳಲು ಈ ಮ್ಯಾರಥಾನ್ ಅತ್ಯುತ್ತಮ ವೇದಿಕೆಯಾಗಿದೆ ಎಂದರು.

ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಫೌಂಡೇಶನ್ ಆರೋಪಿ ತ್ರಿಪಾಠಿ, ದೇಶದಲ್ಲಿ ಪ್ರತಿವರ್ಷ 1 ಲಕ್ಷಕ್ಕೂ ಅಧಿಕ ಮಂದಿ ರಕ್ತದ ಕ್ಯಾನ್ಸರ್‌ಗೆ ಒಳಗಾಗುತ್ತಾರೆ. ಅವರಿಗೆ ರಕ್ತ ಕಾಂಡ ಕಸಿಯೊಂದೇ ಪರಿಹಾರವಾಗಿದ್ದು, ದುರಾದೃಷ್ಟ ಎಂದರೇ ನಮ್ಮ ದೇಶದಲ್ಲಿ ಕೇವಲ ಶೇ.0.03 ಮಾತ್ರ ದಾನಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಿಂದ ಸಾಕಷ್ಟು ಮಂದಿ ರೋಗಿಗಳು ಚಿಕಿತ್ಸೆ ಸಾಧ್ಯವಾಗದೇ ಬಳಲುತಿದ್ದಾರೆ. ಆದ್ದರಿಂದ ಈ ಜಾಗೃತಿ ಅಭಿಯಾನವನ್ನು ಆಯೋಜಿಸಿದ್ದೇವೆ ಎಂದರು.

ಈವರೆಗೆ ಡಿಕೆಎಂಎಸ್-ಬಿಎಂಎಸ್‌ಟಿ ಇಂಡಿಯಾ ಒಂದು ಲಕ್ಷಕ್ಕೂ ಹೆಚ್ಚು ದಾನಿಗಳನ್ನು ದೇಶದಲ್ಲಿ ನೋಂದಣಿ ಮಾಡಿದೆ. 2010ರಿಂದ ಇದುವರೆಗೆ 110ಕ್ಕೂ ಹೆಚ್ಚು ಕಸಿಗಳನ್ನು ಮಾಡಿದೆ. ಸಾಧ್ಯವಾದಷ್ಟು ರೋಗಿಗಳಿಗೆ ಜೀವದಾನ ನೀಡುವುದಕ್ಕಾಗಿ ಭಾರತದಲ್ಲಿ ಹೆಚ್ಚು ಹೆಚ್ಚು ದಾನಿಗಳನ್ನು ನೋಂದಣಿ ಮಾಡಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದರು.

ಮಣಿಪಾಲದಲ್ಲಿ ಸುಮಾರು 1000ಕ್ಕೂ ಹೆಚ್ಚ ಮಂದಿ ರಕ್ತ ಕಾಂಡ ಕೋಶ ದಾನಿಗಳು ಹೆಸರು ನೋಂದಾಯಿಸಿಕೊಂಡಿದ್ದರೂ, ರೋಗಿಯ ರಕ್ತದ ಜೊತೆ ಹೊಂದಾಣಿಕೆಯಾಗದೇ ಕೇವಲ ಒಬ್ಬರು ಮಾತ್ರ ತಮ್ಮ ರಕ್ತ ಕಾಂಡ ಕೋಶ ದಾನ ಮಾಡುವುದು ಸಾಧ್ಯವಾಗಿದೆ. ಆದ್ದರಿಂದ ಇನ್ನೂ ಹೆಚ್ಚಿನ ದಾನಿಗಳ ಅಗತ್ಯವಿದೆ ಎಂದರು.

ಮಣಿಪಾಲದ ರಕ್ತ ಕಾಂಡ ಕೋಶ ದಾನಿ ಅಕ್ಷಯ್ ಕುಮಾರ್ ತಮ್ಮ ಅನುಭವವನ್ನು ಹಂಚಿಕೊಂಡರು. ಮಾಹೆಯ ಉಪಕುಲಪತಿಗಳಾದ ಡಾ. ನಾರಾಯಣ ಸಭಾಹಿತ್ ಮತ್ತು ಡಾ.ಶರತ್ ರಾವ್, ಕುಲಸಚಿವ ಡಾ.ಗಿರಿದರ್ ಕಿಣಿ, ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಮತ್ತಿತತರು ಉಪಸ್ಥಿತರಿದ್ದರು.