ಕನ್ನಡಪ್ರಭ ವಾರ್ತೆ ವಿಜಯಪುರ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ಪ್ರಸ್ತುತ ಜಾರಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜೂನ್ 30ರಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಆನಂದ.ಕೆ ತಿಳಿಸಿದ್ದಾರೆ.

ಜೂ.30 ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಲಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅಧಿಕಾರಿಗಳು ಎನ್ಯೂಮರೇಷನ್ ಫಾರ್ಮ್ ಗಳನ್ನು ದ್ವಿ-ಪ್ರತಿಯಲ್ಲಿ ಪ್ರತಿಯೊಬ್ಬ ಮತದಾರರಿಗೆ ನೀಡಲಿದ್ದಾರೆ. ಮತದಾರರು ಈ ಫಾರ್ಮ್‌ಗಳನ್ನು ಭರ್ತಿ ಮಾಡಿ, ಮರಳಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಹಿಂದಿರುಗಿಸುವಂತೆ ತಿಳಿಸಿದ್ದಾರೆ.

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕುರಿತು ಹೆಚ್ಚಿನ ಮಾಹಿತಿ ಮತ್ತು ವಿವರವನ್ನು ಚುನಾವಣಾ ಆಯೋಗದ ಅಧಿಕೃತ ಅಂತರ್ಜಾಲ ತಾಣಗಳಾದ ವೋಟರ್ಸ್‌ ಸರ್ವಿಸ್‌ ಪೋರ್ಟಲ್‌: https://voters.eci.gov.in/ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಇವರ ಜಾಲತಾಣ ceokarnataka.gov.in ಹಾಗೂ ವಿಜಯಪುರ ಜಿಲ್ಲಾ ವೆಬ್ ಪೋರ್ಟಲ್ https://vijayapura.nic.in/en/ ವೀಕ್ಷಿಸಬಹುದಾಗಿದೆ. ಯಾವುದೇ ಅಗತ್ಯ ಮಾಹಿತಿ, ಸಲಹೆಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮತದಾರರ ಸಹಾಯವಾಣಿ: 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದವರು ಕೋರಿದ್ದಾರೆ.

ಎಸ್‌ಐಆರ್ ನಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಿ: ಯತ್ನಾಳ


ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್‌) ನಿಮಿತ್ತ ಮತಗಟ್ಟೆ ಮಟ್ಟದ ಅಧಿಕಾರಿಗಳು ಜೂನ್ 30ರಿಂದ ನಗರದಲ್ಲಿ ಮನೆ ಮನೆಗೆ ಭೇಟಿ ನೀಡಲಿದ್ದು, ಅವರು ನೀಡುವ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಮತದಾರರ ಪಟ್ಟಿಯಲ್ಲಿ ಹೆಸರು ಡಿಲಿಟ್ ಆಗಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಸರ್ಕಾರಿ ಸೌಲಭ್ಯಗಳು, ನಿಗಮ ಮಂಡಳಿಗಳ ಸಾಲ ಸೌಲಭ್ಯಗಳು, ಹೊಸ ಆಶ್ರಯ ಮನೆ ಹೊಂದಲು, ಡ್ರೈವಿಂಗ್ ಲೈಸನ್ಸ್ ಪಡೆಯಲು, ನಳದ ಸಂಪರ್ಕ ಪಡೆಯಲು, ಗಂಗಾ ಕಲ್ಯಾಣ ಕೊಳವೆ ಬಾವಿ ಹೊಂದಲು, ಪಡಿತರ ಕಾರ್ಡ್, ಆಯುಷ್ಮಾನ್ ಸೇರಿದಂತೆ ಇತರೆ ಆರೋಗ್ಯ ಯೋಜನೆಗಳು, ಪಾಸಪೋರ್ಟ್, ಪಾನಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಲು ಮತದಾರರ ಗುರುತಿನ ಚೀಟಿಯ ಅವಶ್ಯಕತೆಯಿದೆ. ಆದ್ದರಿಂದ ಎಸ್.ಐ.ಆರ್‌ ಮಾಡಲು ಜೂನ್ 30 ರಿಂದ ಜುಲೈ 29ರ ಒಳಗಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ) ಪ್ರತಿ ಮನೆಗೆ ಆಗಮಿಸುತ್ತಾರೆ. ಮತದಾರರು ಸುಗಮವಾಗಿ ಭಾಗವಹಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ಕ್ಯಾಂಪ್ ಗಳನ್ನು ಸಹ ಸ್ಥಾಪಿಸಲಾಗುತ್ತದೆ. ಕ್ಯಾಂಪಿನಲ್ಲಿ ಅಥವಾ ಬಿ.ಎಲ್.ಒ ಗಳು ಮನೆಗೆ ಬಂದಾಗ ಕುಟುಂಬದ ಸದಸ್ಯರೊಬ್ಬರಾದರೂ ಮನೆಯಲ್ಲಿದ್ದು ಅವರು ಕೊಡುವ ಅರ್ಜಿ ಫಾರ್ಮ್ ಪಡೆದು ಅಗತ್ಯ ದಾಖಲೆಗಳಾದ 2002ರ ಮತಪಟ್ಟಿಯಲ್ಲಿ ತಮ್ಮ ಅಥವಾ ತಮ್ಮ ತಂದೆ, ತಾಯಿ, ಅಜ್ಜ, ಅಜ್ಜಿ ಹೆಸರಿರುವ ಮತದಾರರ ಗುರುಚಿನ ಚೀಟಿಯ ಎಪಿಕ್ ನಂಬರ್‌, ಮೊಬೈಲ್ ನಂಬರ್‌, ಪ್ರತಿ ಮತದಾರರ ಒಂದು ಐಡೆಂಟಿಟಿ ಕಲರ್‌ ಫೋಟೋ ಅರ್ಜಿಗೆ ಲಗತ್ತಿಸಬೇಕು ಹಾಗೂ ಪ್ರಸ್ತುತ ವಾಸವಿರುವ ಸ್ಥಳದ ವಿಳಾಸವನ್ನು ಅರ್ಜಿಯಲ್ಲಿ ನಮೂದಿಸಬೇಕು.

ಪ್ರತಿ ಮತದಾರರಿಗೆ ಬಿ.ಎಲ್.ಒ ಗಳು 2 ಫಾರ್ಮಗಳನ್ನು ನೀಡುತ್ತಾರೆ. ಎರಡನ್ನೂ ತುಂಬಿದ ನಂತರ ಮನೆಯಲ್ಲಿ ಇರುವ ಯಾರಾದರೊಬ್ಬರೂ ಸಹಿ ಮಾಡಬೇಕು. ಅದರಲ್ಲೊಂದು ಫಾರ್ಮ ಬಿ.ಎಲ್.ಒ ಗೆ ನೀಡಿ, ಇನ್ನೊಂದಕ್ಕೆ ಅವರ ಸಹಿ ಪಡೆದು ಮನೆಯಲ್ಲಿ ಇಟ್ಟುಕೊಳ್ಳಬೇಕು. ಆಗ ತಮ್ಮ ಮತ್ತು ಕುಟುಂಬದ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳಲಿವೆ. ಆಕಸ್ಮಿಕ ಮತದಾರರ ಪಟ್ಟಿಯಲ್ಲಿ ಹೆಸರು ಬರದಿದ್ದರೆ, ತಮ್ಮಲ್ಲಿರುವ ಅರ್ಜಿ ಪ್ರತಿಯ ಮೂಲಕ ಸರಿಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ. ಫಾರ್ಮ್ ಕಾಯ್ದಿಟ್ಟುಕೊಳ್ಳಬೇಕು ಎಂದರು.

ವಿಶೇಷವಾಗಿ ವಿಜಯಪುರ ನಗರದ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆ ಹಿತದೃಷ್ಠಿಯಿಂದ ಪ್ರತಿಯೊಬ್ಬ ಹಿಂದು ಕುಲಭಾಂಧವರ ಒಂದೂ ಮತ ಕೂಡ ಮತದಾರರ ಪಟ್ಟಿಯಿಂದ ಕೈ ತಪ್ಪದಂತೆ ನೋಡಿಕೊಳ್ಳುವುದು ಅತೀ ಅವಶ್ಯವಿದೆ. ಹೀಗಾಗಿ ನಗರದ ಜನತೆ ಕಡ್ಡಾಯವಾಗಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಭಾಗವಹಿಸಬೇಕು. ಕಾರ್ಯಕರ್ತರು ಎಸ್.ಐ.ಆರ್‌ ಬಗ್ಗೆ ನಗರ ನಾಗರಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಶಾಸಕ ಯತ್ನಾಳ ವಿನಂತಿಸಿದ್ದಾರೆ.