ಕನ್ನಡಪ್ರಭ ವಾರ್ತೆ ಅಥಣಿ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಾರ್ವಜನಿಕದಲ್ಲಿ ಜನಜಾಗೃತಿ ಮೂಡಿಸಲು ಅಥಣಿ ತಾಲೂಕ ಸ್ವೀಪ್ ಸಮಿತಿಯಿಂದ ಜನಜಾಗೃತಿ ಜಾಥಾ ನಡೆಸಲಾಯಿತು.ಇಲ್ಲಿನ ತಾಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಆಯೋಗದ ನಿರ್ದೇಶನದಂತೆ ಜೂ.30ರಿಂದ ಜುಲೈ 29ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು ಹಾಗೂ ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪರಿಷ್ಕರಣೆ ಅವಧಿಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ ಮನೆಗೆ ಭೇಟಿ ನೀಡಿ ಗಣತಿದಾರರ ನಮೂನೆ ಹಾಗೂ ಘೋಷಣಾ ಪತ್ರ ವಿತರಿಸಲಿದ್ದಾರೆ. ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಹೆಸರುಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಮಹತ್ವದ ಅಂಶವಾಗಿದೆ ಎಂದು ಹೇಳಿದರು.
ತಾಲೂಕ ಪಂಚಾಯತಿ ಕಚೇರಿಯಿಂದ ಆರಂಭವಾದ ಜನಜಾಗೃತಿ ಜಾಥಾ ವಿಕ್ರಂಪೂರ್, ರಾಘವೇಂದ್ರ ಮಠದ ರಸ್ತೆಯ ಮಾರ್ಗವಾಗಿ ಸಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಚೇರಿ ಆವರಣದಲ್ಲಿ ಮುಕ್ತಾಯವಾಯಿತು. ಜಾಥಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ, ತಾಲೂಕ ಪಂಚಾಯತಿ ಕಚೇರಿ ಸಿಬ್ಬಂದಿ, ಕಂದಾಯ ಇಲಾಖೆಯ ಚುನಾವಣಾ ವಿಭಾಗದ ಸಿಬ್ಬಂದಿ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಜನ ಜಾಗೃತಿಯಲ್ಲಿ ಭಾಗವಹಿಸಿದ್ದರು.