ಸಾರಾಂಶ
ಕಾರಟಗಿ:
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರಟಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿ ಹೊಸ ಅಭಿವೃದ್ಧಿ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಪಟ್ಟಣ ಪುರಸಭೆಯ ಕಸ ವಿಲೇವಾರಿ ಮಾಡುವ ೧ ಟ್ರ್ಯಾಕ್ಟರ್ ಹಾಗೂ ಕಸ ಸಂಗ್ರಹಿಸುವ ೨ ಆಟೋ ಟಿಪ್ಪರ್ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.
ಜೂರಟಗಿಯಿಂದ ಆರಂಭಿಸಿ ಎಪಿಎಂಸಿ ವರೆಗೆ ರಸ್ತೆ ಅಗಲೀಕರಣ ಮಾಡಿ, ವಿಭಜಕ ನಿರ್ಮಿಸಿ ಬೀದಿ ದೀಪ ಅಳವಡಿಸುವ ಮೂಲಕ ರಸ್ತೆಯ ಸೌಂದರ್ಯೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿ ಅಂದಾಜು ವೆಚ್ಚದ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಇತ್ತ ಕಡೆ ಬೂದಗುಂಪಾ ರಸ್ತೆ ಮತ್ತು ನವಲಿ ರಸ್ತೆಯಲ್ಲಿಯೂ ಇದೇ ಮಾದರಿ ವಿಭಜಕ ನಿಮಿರ್ಸಿ ಬೀದಿ ದೀಪ ಅಳವಡಿಸಲಾಗುವುದು ಎಂದರು.ನವಲಿ ವೃತ್ತದಲ್ಲಿ ಕನಕದಾಸ ಮೂರ್ತಿ ಸ್ಥಾಪಿಸಲಾಗುವುದು. ರಸ್ತೆ ಅಗಲೀಕರಣದ ವೇಳೆ ಎರಡು ಬದಿಯ ವ್ಯಾಪಾರಿಗಳು ಸಹಕಾರ ನೀಡಬೇಕು. ಕಾರಟಗಿಯ ಪ್ರಮುಖ ನಾಲ್ಕು ರಸ್ತೆಗಳನ್ನು ಅಗತ್ಯ ಬಿದ್ದರೆ ಅಗಲೀಕರಣ ಮಾಡಿ ಅಭವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ದಿನೇ ದಿನೇ ಬೆಳೆಯುತ್ತಿರುವ ಪಟ್ಟಣದ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ವಾಹನಗಳ ಕೊರತೆ ಹಿನ್ನೆಲೆಯಲ್ಲಿ ನೂತನ ವಾಹನ ಖರೀದಿಸಲಾಗಿತ್ತು. ಈಗ ಹೊಸದಾಗಿ ೧೫ನೇ ಹಣಕಾಸು ಯೋಜನೆಯಡಿ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಲು ₹ ೧೮ ಲಕ್ಷ ವೆಚ್ಚದಲ್ಲಿ ೨ ಆಟೋ ಟಿಪ್ಪರ್, ಕಸ ವಿಲೇವಾರಿಗೆ ₹ ೧೨ ಲಕ್ಷ ವೆಚ್ಚದಲ್ಲಿ ಟ್ರ್ಯಾಕ್ಟರ್ ಖರೀದಿಸಲಾಗಿದೆ. ಪಟ್ಟಣದ ನಾಗರಿಕರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಸುಂದರ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.ಈ ವೇಳೆ ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಸದಸ್ಯರಾದ ಮಂಜುನಾಥ ಮೇಗೂರು, ಹಿರೇಬಸ್ಪಪ ಸಜ್ಜನ, ದೊಡ್ಡಬಸವರಾಜ ಬೂದಿ, ಸೋಮಶೇಖರ ಬೇರಿಗೆ, ಬಸವರಾಜ ಕೊಪ್ಪದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಅಯ್ಯಪ್ಪ ಉಪ್ಪಾರ, ಮುಖಂಡರಾದ ಶಶಿಧರಗೌಡ ಪಾಟೀಲ್, ಕೆ. ಸಿದ್ದನಗೌಡ, ರುದ್ರಗೌಡ ನಂದಿಹಳ್ಳಿ, ರಾಜಶೇಖರ ಆನೆಹೊಸೂರು, ಖಾಜಾ ಹುಸೇನ್ ಮುಲ್ಲಾ, ಅಮ್ಜದ್, ಅಮ್ರುಲ್ ಸೇರಿದಂತೆ ಇಂಜಿನಿಯರ್ ಮಂಜುನಾಥ ನಾಯಕ, ಅಕ್ಷತಾ ಕಮ್ಮಾರ, ಮಲ್ಲಮ್ಮ, ನಾಗರಾಜ ತಳವಾರ ಇನ್ನಿತರರು ಇದ್ದರು.