ಮಂಡ್ಯದ ನೆಲದವರಾದ ಬಿಎಂಶ್ರೀ ಅವರು ಕನ್ನಡವನ್ನು ಕಟ್ಟುವ ಕೆಲಸದ ಜೊತೆಯಲ್ಲೇ ಪ್ರತಿಯೊಬ್ಬರಿಗೂ ಭಾಷೆಯ ಮಹತ್ವವನ್ನು ತಿಳಿಸಿದರು. ಅದಕ್ಕಾಗಿ ಅವರನ್ನು ಆಚಾರ್ಯಪುರುಷ ಎಂದು ಕರೆದರು. ಅವರಿಗೆ ಇಂಗ್ಲಿಷ್‌ನಲ್ಲಿ ಎಷ್ಟೇ ಪಾಂಡಿತ್ಯವಿದ್ದರೂ ಕೂಡ ಎದೆಯ ಭಾಷೆಯಾದ ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡಕ್ಕಾಗಿಯೇ ಬದುಕಿದವರು ಬಿ.ಎಂ.ಶ್ರೀಕಂಠಯ್ಯ. ತಾವು ಸಂಪಾದಿಸಿದ ಸಂಪತ್ತನ್ನು ಕನ್ನಡದ ಕೆಲಸಕ್ಕಾಗಿ ಸಮರ್ಪಿಸಿ ಕನ್ನಡದ ಕಣ್ವ ಎನಿಸಿಕೊಂಡರು ಎಂದು ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಹೇಳಿದರು.

ಮಂಡ್ಯ ಜಿಲ್ಲಾ ಬಬ್ಬೂರು ಕಮ್ಮೆ ಸೇವಾ ಬಳಗದ ವತಿಯಿಂದ ಕನ್ನಡದ ಕಣ್ವ ಆಚಾರ್ಯ ಬಿಎಂಶ್ರೀ ಅವರ ೧೪೨ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಿ ಪೋಷಿಸಿದವರಲ್ಲಿ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು ಪ್ರಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಂಶ್ರೀ ಅವರನ್ನು ನಾಡಿನ ಜನತೆ ನಿತ್ಯ ನಿರಂತರವಾಗಿ ಸ್ಮರಿಸಬೇಕು ಎಂದು ಸಲಹೆ ನೀಡಿದರು.

ಶ್ರೀಕಂಠಯ್ಯ ಅವರು ತಮ್ಮ ಜೀವನದ ಉದ್ದಕ್ಕೂ ಹಲವಾರು ಕಷ್ಟ- ಸಂಕೋಲೆಗಳನ್ನು ಎದುರಿಸಿದ್ದರು. ಆದರೂ ಕೂಡ ಧೃತಿಗೆಡದೆ ಕನ್ನಡ ಕಟ್ಟುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರು. ಕನ್ನಡವನ್ನು ಮತ್ತು ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯಲು ನಿರ್ಧರಿಸಿ, ತಮ್ಮ ಇಡೀ ಜೀವನವನ್ನು ಕನ್ನಡಕ್ಕಾಗಿಯೇ ಮುಡಿಪಾಗಿಟ್ಟರು, ೧೯೨೬- ೧೯೩೦ ರವರೆಗೆ ನಾಲ್ಕು ವರ್ಷಗಳ ಕಾಲ ಕುಲಸಚಿವರಾಗಿದ್ದರು, ೧೯೨೮ರಲ್ಲಿ ಗುಲ್ಬರ್ಗದಲ್ಲಿ ನಡೆದ ೧೪ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, ೧೯೩೮- ೧೯೪೨ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ, ೧೯೩೮ರಲ್ಲಿ ಮೈಸೂರಿನ ಮಹಾರಾಜರಿಂದ ರಾಜ ಸೇವಾಸಕ್ತ ಎಂಬ ಬಿರುದನ್ನು ಪಡೆದಿದ್ದರು ಎಂದು ತಿಳಿಸಿದರು.

ಲೇಖಕಿ ಶುಭಶ್ರೀ ಪ್ರಸಾದ್ ಮಾತನಾಡಿ, ಮಂಡ್ಯದ ನೆಲದವರಾದ ಬಿಎಂಶ್ರೀ ಅವರು ಕನ್ನಡವನ್ನು ಕಟ್ಟುವ ಕೆಲಸದ ಜೊತೆಯಲ್ಲೇ ಪ್ರತಿಯೊಬ್ಬರಿಗೂ ಭಾಷೆಯ ಮಹತ್ವವನ್ನು ತಿಳಿಸಿದರು. ಅದಕ್ಕಾಗಿ ಅವರನ್ನು ಆಚಾರ್ಯಪುರುಷ ಎಂದು ಕರೆದರು. ಅವರಿಗೆ ಇಂಗ್ಲಿಷ್‌ನಲ್ಲಿ ಎಷ್ಟೇ ಪಾಂಡಿತ್ಯವಿದ್ದರೂ ಕೂಡ ಎದೆಯ ಭಾಷೆಯಾದ ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಬಣ್ಣಿಸಿದರು.

ನಾವು ಕನ್ನಡ ಭಾಷೆಯನ್ನು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟು ಎತ್ತರಕ್ಕೆ ಬೆಳೆಯಲಿದೆ. ಕನ್ನಡಿಗರು ಎಲ್ಲಾ ಭಾಷೆಯನ್ನು ಕಲಿಯಬೇಕು. ಆದರೆ, ಕನ್ನಡದ ಬಗ್ಗೆ ಬದ್ಧತೆ ಇರಬೇಕು ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ ಕಬ್ಬನಹಳ್ಳಿ, ಶಂಭು, ಬಬ್ಬೂರು ಕಮ್ಮೆ ಬಳಗದ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಪದ್ಮ ಶ್ರೀನಿವಾಸ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.