ಆನೇಕಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರಿಕೆಟ್ ಕ್ರೀಡಾಂಗಣ ಸೇರಿ ಕ್ರೀಡಾ ಸಮುಚ್ಛಯಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ.
ಬೆಂಗಳೂರು : ಆನೇಕಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರಿಕೆಟ್ ಕ್ರೀಡಾಂಗಣ ಸೇರಿ ಕ್ರೀಡಾ ಸಮುಚ್ಛಯಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ.
ಆನೇಕಲ್ ಕಡೆಗೆ ಕೊಂಡೊಯ್ಯಲು ಉದ್ದೇಶ
ಬನ್ನೇರುಘಟ್ಟ ರಸ್ತೆಯಲ್ಲಿ ಹಾದು ಹೋಗುವ ಕಾಳೇನ ಅಗ್ರಹಾರ ಹಾಗೂ ಕಾಡುಗೋಡಿ ಸಂಪರ್ಕಿಸುವ 68 ಕಿ.ಮೀ ಮೆಟ್ರೋ ಮಾರ್ಗವನ್ನು ಜಿಗಣಿಯಿಂದ ಕವಲೊಡೆಸಿ 3-4 ಕಿ.ಮೀ ವರೆಗೆ ಆನೇಕಲ್ ಕಡೆಗೆ ಕೊಂಡೊಯ್ಯಲು ಉದ್ದೇಶಿಸಲಾಗಿದೆ. ಇದರಿಂದ ಬನ್ನೇರುಘಟ್ಟ ಮತ್ತು ಆನೇಕಲ್ ಕಡೆಯಿಂದ ಬರುವ ಜನರು ಆನೇಕಲ್ ಸೂರ್ಯ ಸಿಟಿಯಲ್ಲಿ ನಿರ್ಮಾಣ ಆಗಲಿರುವ ಕ್ರೀಡಾ ಸಂಕೀರ್ಣಕ್ಕೆ ತಲುಪಲು ಅನುಕೂಲ ಆಗಲಿದೆ. ಮುಖ್ಯ ಮಾರ್ಗವು ತನ್ನ ಹಾದಿಯಲ್ಲಿ ಮುಂದುವರಿಯಲಿದೆ. ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ಸರ್ಕಲ್ ಹಾಗೂ ವರ್ತೂರು ಕೋಡಿ ಸಂಪರ್ಕಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಬಹುಕ್ರೀಡಾ ಸಂಕೀರ್ಣ ನಿರ್ಮಿಸುವ ಯೋಜನೆ
ಕಳೆದ ಜೂನ್ ತಿಂಗಳಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ನಂತರ ಗೃಹ ಮಂಡಳಿ, ಆನೇಕಲ್ ತಾಲೂಕಿನ ಸೂರ್ಯನಗರ 4 ನೇ ಹಂತದಲ್ಲಿ 75 ಎಕರೆ ಪ್ರದೇಶದಲ್ಲಿ ಸುಮಾರು ₹ 1650 ಕೋಟಿ ವೆಚ್ಚದಲ್ಲಿ ಕ್ರಿಕೆಟ್ ಸ್ಟೇಡಿಯಂ ಸೇರಿದಂತೆ ಬಹುಕ್ರೀಡಾ ಸಂಕೀರ್ಣ ನಿರ್ಮಿಸುವ ಯೋಜನೆ ರೂಪಿಸಲು ನಿರ್ಧರಿಸಿದೆ.
ಮೆಟ್ರೋ ಸಂಪರ್ಕದ ಸಂಬಂಧ ದೆಹಲಿ ಮೂಲದ ಇಟ್ರೋಸಾಫ್ಟ್ ಸಲ್ಯೂಶನ್ಸ್ ಪ್ರೈ.ಲಿ. ಈ ಸಂಬಂಧ ಕಾರ್ಯಸಾಧ್ಯತಾ ವರದಿ ರೂಪಿಸಿದೆ. ಮಾರ್ಗದ ವಿನ್ಯಾಸ, ಪ್ರಯಾಣಿಕರ ಬೇಡಿಕೆ, ಭೂಸ್ವಾಧೀನ, ಯೋಜನಾ ವೆಚ್ಚ, ಮಾರ್ಗದ ನಡುವಿನ ನಿಲ್ದಾಣಗಳು ಸೇರಿ ಇತರೆ ಅಂಶಗಳ ಕುರಿತ ವರದಿಯನ್ನು ಸಲ್ಲಿಸಲಾಗಿದೆ.
3.5 ಕಿ.ಮೀ ಇರಲಿರುವ ಈ ಮಾರ್ಗವನ್ನು ಕ್ರೀಡಾ ಸಮುಚ್ಛಯಕ್ಕೆ ಸಂಪರ್ಕಿಸಲಾಗುತ್ತಿದೆ. ಇದರಿಂದ ಒಟ್ಟಾರೆ ಈ ಮಾರ್ಗದ ಉದ್ದ 72 ಕಿ.ಮೀ ಆಗಲಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.


