ಅರಣ್ಯ, ವನ್ಯಜೀವಿ ರಕ್ಷಣೆಗೆ ಮಂಡಳಿ ಬದ್ಧ!

| Published : Oct 17 2025, 01:01 AM IST

ಸಾರಾಂಶ

ಪ್ರಸ್ತಾವಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅನುಮೋದನೆ ನೀಡುವುದಿಲ್ಲ. ಈ ಯೋಜನೆ ಜಾರಿಗೆ ಬಂದರೆ ಈ ಪ್ರದೇಶದ ಸಸ್ಯ ಮತ್ತು ಪ್ರಾಣಿಗಳಿಗೆ ಹಾನಿಕಾರಕವಾಗುತ್ತದೆ ಮತ್ತು ಪರಿಸರ ಸೂಕ್ಷ್ಮ ಆವಾಸ ಸ್ಥಾನಗಳಿಗೆ ತೀವ್ರ ಹಾನಿಯಾಗುತ್ತದೆ.

ಧಾರವಾಡ:

ಇತ್ತೀಚೆಗೆ ಅರಣ್ಯ ಪ್ರದೇಶ ಹಾಗೂ ಅಲ್ಲಿನ ವನ್ಯಜೀವಿಗಳು ಅತಿಕ್ರಮಣ, ರಿಯಲ್‌ ಎಸ್ಟೇಟ್‌ ಹಿತಾಸಕ್ತಿಗಳು ಹಾಗೂ ರೆಸಾರ್ಟ್‌ಗಳಿಂದ ನಲುಗುತ್ತಿವೆ. ಆದ್ದರಿಂದ ಅರಣ್ಯ ಪ್ರದೇಶ ರಕ್ಷಿಸಲು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಹಲವು ಕ್ರಮ ಕೈಗೊಂಡಿದೆ ಎಂದು ಮಂಡಳಿ ಸದಸ್ಯೆ ವೈಶಾಲಿ ವಿನಯ ಕುಲಕರ್ಣಿ ಹೇಳಿದರು.

ಧಾರವಾಡ ಜರ್ನಲಿಸ್ಟ್‌ ಗಿಲ್ಡ್‌ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಹೆಸರಘಟ್ಟ ಮತ್ತು ಶಿವಮೊಗ್ಗದ ಶೆಟ್ಟಿಹಳ್ಳಿ ಅರಣ್ಯ ಪ್ರದೇಶವನ್ನು ಮೀಸಲು ಅರಣ್ಯಗಳಾಗಿ ಘೋಷಿಸಲು ಸಿದ್ಧತೆ ನಡೆಯುತ್ತಿವೆ. ಈಗಾಗಲೇ ಈ ಕುರಿತು ಹಲವು ಸಭೆ ನಡೆದಿದ್ದು ಶೀಘ್ರ ಇಲ್ಲಿಯ ಅರಣ್ಯ ಪ್ರದೇಶದ ಉಳಿವಿಗೆ ಬೇಕಾದ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅನುಮೋದನೆ ನೀಡಲ್ಲ:

ಪ್ರಸ್ತಾವಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅನುಮೋದನೆ ನೀಡುವುದಿಲ್ಲ. ಈ ಯೋಜನೆ ಜಾರಿಗೆ ಬಂದರೆ ಈ ಪ್ರದೇಶದ ಸಸ್ಯ ಮತ್ತು ಪ್ರಾಣಿಗಳಿಗೆ ಹಾನಿಕಾರಕವಾಗುತ್ತದೆ ಮತ್ತು ಪರಿಸರ ಸೂಕ್ಷ್ಮ ಆವಾಸ ಸ್ಥಾನಗಳಿಗೆ ತೀವ್ರ ಹಾನಿಯಾಗುತ್ತದೆ. ಆದ್ದರಿಂದ, ಮಂಡಳಿಯು ಈ ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸುತ್ತದೆ ಎಂದ ಅವರು, ಐದು ದಶಕಗಳಷ್ಟು ಹಳೆಯ ಪ್ರಸ್ತಾವನೆಯಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವು ದಟ್ಟ ಅರಣ್ಯ ಪ್ರದೇಶಗಳ ಮೇಲೆ ಉಂಟಾಗುವ ಸಂಭಾವ್ಯ ಪರಿಣಾಮದಿಂದಾಗಿ ಪದೇ ಪದೇ ವಿರೋಧ ಎದುರಿಸುತ್ತಿದೆ ಎಂದರು.

ಶರಾವತಿ ಜಲ ವಿದ್ಯುತ್‌ ಯೋಜನೆ ಕುರಿತು ಪ್ರಶ್ನೆಯೊಂದಕ್ಕೆ, ಶರವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯ ಬಗ್ಗೆ ಮಂಡಳಿಯು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದೆ. ಇದೊಂದು ಪ್ರಮುಖ ಇಂಧನ ಕ್ರಮವಾದರೂ ಅದು ಉಂಟು ಮಾಡುವ ಪರಿಸರ ವಿನಾಶ ಬಹಳಷ್ಟಿದೆ. ಹಲವಾರು ಅಪರೂಪದ ಪ್ರಾಣಿ ಪ್ರಭೇದಗಳು ಆ ಪ್ರದೇಶದಲ್ಲಿ ವಾಸಿಸುತ್ತವೆ ಮತ್ತು ಯಾವುದೇ ಅಡಚಣೆಯು ಅವುಗಳನ್ನು ಅಳಿವಿನಂಚಿಗೆ ತಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ವನ್ಯಜೀವಿ ಮಂಡಳಿಯು ಅರಣ್ಯ ಅಧಿಕಾರಿಗಳು ಮತ್ತು ಪರಿಸರ ಕಾರ್ಯಕರ್ತರೊಂದಿಗೆ ಸಮನ್ವಯದಿಂದ ರಾಜ್ಯಾದ್ಯಂತ ಪರಿಸರ ಹಾನಿಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದೆ. ಆದಾಗ್ಯೂ ತ್ವರಿತ ನಗರೀಕರಣವು ವನ್ಯಜೀವಿ ಆವಾಸ ಸ್ಥಾನಗಳಿಗೆ ಮಾನವ ಪ್ರವೇಶಿಸುತ್ತಿದ್ದಾನೆ. ಮಾನವ-ಪ್ರಾಣಿ ಸಂಘರ್ಷದ ಘಟನೆಗಳು ಹೆಚ್ಚುತ್ತಿವೆ. ಇದನ್ನು ಕಡಿಮೆ ಮಾಡಲು ಮಂಡಳಿ ಜಾಗೃತಿ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಅಕ್ರಮ ಹೋಂಸ್ಟೆಗಳ ಗೂಡು ದಾಂಡೇಲಿ:

ರಾಜ್ಯದಲ್ಲಿಯೇ ಅತೀ ಹೆಚ್ಚು ದಾಂಡೇಲಿಯಲ್ಲಿ ಹೋಂ ಸ್ಟೇಗಳ ಉಲ್ಲಂಘನೆಗಳಾಗುತ್ತಿವೆ. ಹಲವಾರು ಹೋಂ ಸ್ಟೇಗಳು ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ, ಇದು ಹಾರ್ನ್‌ಬಿಲ್‌ ಮತ್ತು ಇತರ ಸೂಕ್ಷ್ಮ ಪ್ರಭೇದಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ಈ ಹೋಂ ಸ್ಟೇಗಳಿಗೆ ಅನುಮತಿ ನೀಡುತ್ತಿದ್ದು, ಮಂಡಳಿ ಮಧ್ಯಸ್ಥಿಕೆ ವಹಿಸಲಾಗುತ್ತಿಲ್ಲ. ಇಲ್ಲಿಯ ರೆಸಾರ್ಟ್‌ ಮತ್ತು ಹೋಂ ಸ್ಟೇಗಳು ತ್ಯಾಜ್ಯ ಆಹಾರವನ್ನು ತೆರೆದ ಸ್ಥಳದಲ್ಲಿ ವಿಲೇವಾರಿ ಮಾಡುವ ವಿಧಾನವನ್ನು ಅವರು ಟೀಕಿಸಿದರು. ಜನರು ವಾಣಿಜ್ಯ ಲಾಭಕ್ಕಾಗಿ ಪ್ರಕೃತಿ ಬಳಸಿಕೊಳ್ಳುವ ಬದಲು ಅದರ ಬಗ್ಗೆ ಹೆಚ್ಚು ಸಂವೇದನಾಶೀಲರಾಗಿರಬೇಕು ಎಂಬ ಎಚ್ಚರಿಕೆಯನ್ನು ವೈಶಾಲಿ ಕುಲಕರ್ಣಿ ನೀಡಿದರು.

ಕಾಡು ಪ್ರಾಣಿಗಳ ದಾಳಿಗೆ ಬಲಿಯಾದವರಿಗೆ ಪರಿಹಾರದ ವಿಷಯದಲ್ಲಿ ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ಪರಿಹಾರ ನೀಡುತ್ತಿದೆ ಎಂದ ವೈಶಾಲಿ, ಕಾಡು ಪ್ರಾಣಿಗಳ ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ₹ 10 ಲಕ್ಷ ನೀಡಲಾಗುತ್ತಿದೆ. ಜತೆಗೆ ಗಾಯಗೊಂಡವರು ಅಥವಾ ಶಾಶ್ವತವಾಗಿ ಅಂಗವಿಕಲರಿಗೆ ಪರಿಹಾರ ಸಹ ನೀಡಲಾಗುತ್ತದೆ ಎಂದ ಅವರು, ಬೇಟೆಯಾಡುವಿಕೆ ವಿರೋಧಿ ಶಿಬಿರಗಳು ತಮ್ಮ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುತ್ತಿವೆ. ಪೂರ್ವಭಾವಿ ಗಸ್ತು ಮತ್ತು ಕಣ್ಗಾವಲು ಪ್ರಯತ್ನಗಳಿಂದಾಗಿ ಶೇ. 90ರಷ್ಟು ಬೇಟೆಯಾಡುವಿಕೆ ಘಟನೆಗಳನ್ನು ತಡೆಯಲಾಗಿದೆ ಎಂದರು.

ನಿತ್ಯದ ಆರೋಪಕ್ಕೆ ಉತ್ತರ ಎಲ್ಲಿ?

ತಂದೆ ವಿನಯ ಕುಲಕರ್ಣಿ ಮಾಜಿ ಸಚಿವರು, ಶಾಸಕರು ಸೇರಿದಂತೆ ಹತ್ತಾರು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ತಮಗೆ ಗೊತ್ತಿರುವಂತೆ ಅವರ ಮೇಲೆ ಹಲವಾರು ಆರೋಪಗಳಿವೆ. ಈಗಲೂ ನಿತ್ಯ ಆರೋಪಗಳು ಬರುತ್ತವೆ. ಎಲ್ಲ ಆರೋಪಗಳಿಗೂ ಸ್ಪಷ್ಟನೆ ನೀಡುವುದು ಅಸಾಧ್ಯ. ಆದರೆ, ಹಳ್ಳಿಗೇರಿ ಗಿಡಗಳ ಕಟಾವು ಮಾತ್ರ ತಾವು ಮಾಡಿಲ್ಲ. ಈ ಘಟನೆ ನಂತರ ಅಲ್ಲಿಯ ಜಾಗವನ್ನು ನಾವು ಖರೀದಿಸಿದ್ದೇವೆ ಎಂದು ವೈಶಾಲಿ ಕುಲಕರ್ಣಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜತೆಗೆ ತಮ್ಮ ರಾಜಕೀಯ ಪ್ರವೇಶಕ್ಕೆ ಇನ್ನೂ ಕಾಲಾವಕಾಶ ಇದೆ ಎಂಬ ಮಾತನ್ನು ಹೇಳಿದರು.