ಸಾರಾಂಶ
ರಾಯಬಾಗ ತಾಲೂಕಿನ ಕುಡಚಿ ಸೇತುವೆ ಬಳಿ ಜಾಕ್‌ವೆಲ್ ದುರಸ್ತಿಗೆ ತೆರಳಿದ್ದ ವೇಳೆ ಕೃಷ್ಣಾ ನದಿ ನೀರಲ್ಲಿ ಎನ್‌ಡಿಆರ್‌ಎಫ್ ತಂಡದ ಬೋಟ್ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಅದರಲ್ಲಿದ್ದ 6 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಯಬಾಗ ತಾಲೂಕಿನ ಕುಡಚಿ ಸೇತುವೆ ಬಳಿ ಜಾಕ್‌ವೆಲ್ ದುರಸ್ತಿಗೆ ತೆರಳಿದ್ದ ವೇಳೆ ಕೃಷ್ಣಾ ನದಿ ನೀರಲ್ಲಿ ಎನ್‌ಡಿಆರ್‌ಎಫ್ ತಂಡದ ಬೋಟ್ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಅದರಲ್ಲಿದ್ದ 6 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಡಚಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಜಾಕ್‌ವೆಲ್ ಮುಳುಗಡೆಯಾಗಿದ್ದು, ಬುಧವಾರ ನೀರು ಪೂರೈಕೆ ನಿಂತಿತ್ತು. ಹಾಗಾಗಿ, ಎನ್‌ಡಿಆರ್‌ಎಫ್ ತಂಡದ ಜೊತೆಗೆ ಸ್ಥಳೀಯ ವಾಟರ್‌ಮೆನ್ ಮತ್ತು ಲೈನ್ ಮೆನ್ ಸೇರಿ ಒಟ್ಟು 6 ಜನರು ಬೋಟ್ ಮೂಲಕ ಜಾಕ್‌ವೆಲ್ ದುರಸ್ತಿಗೆ ತೆರಳುತ್ತಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಬೋಟ್ ಪಲ್ಟಿಯಾಗಿ ಅದರಲ್ಲಿದ್ದ ಆರು ಜನ ಕೃಷ್ಣಾ ನದಿ ನೀರಲ್ಲಿ ಉರುಳಿದರು. ಎಲ್ಲರೂ ಲೈಫ್ ಜಾಕೆಟ್ ಬಳಸಿದ್ದರಿಂದ ನದಿಯಲ್ಲಿ ತೇಲುತ್ತ ನದಿಯಲ್ಲಿನ ಮರಗಳನ್ನು ಹಿಡಿದು ಜೀವ ಉಳಿಸಿಕೊಂಡರು.ದಡದಲ್ಲಿದ್ದ ಇನ್ನೊಂದು ಎನ್‌ಡಿಆರ್‌ಎಫ್ ತಂಡ ತಕ್ಷಣವೇ ಕಾರ್ಯಪ್ರವೃತ್ತರಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಆರು ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ನಂತರ ಜಾಕ್ ವೆಲ್ ದುರಸ್ತಿ ಮಾಡಿ ಸಿಬ್ಬಂದಿ ಹಿಂದುರುಗಿದರು.