ಸಾರಾಂಶ
ಅಂತಿಮ ಹಂತದ ಸಿದ್ಧತೆ ಪರಿಶೀಲನೆ: ಉತ್ಸಾಹದಿಂದ ಕಾಣಿಕೆ ನೀಡಿದ ಭಕ್ತಾದಿಗಳುಕನ್ನಡಪ್ರಭ ವಾರ್ತೆ ಸಿರಿಗೆರೆ
ಐತಿಹಾಸಿಕ ಭರಮಣ್ಣ ನಾಯಕನ ಕೆರೆ ಏತ ನೀರಾವರಿ ಯೋಜನೆಯಿಂದ ತುಂಬಿದಾಗ ಇಲ್ಲಿ ದೋಣಿ ಸಂಚಾರ ಏರ್ಪಡಿಸಬೇಕೆಂಬ ಅಭಿಲಾಷೆ ತಮ್ಮದಾಗಿತ್ತು. ತರಳಬಾಳು ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ ಇದು ಕೈಗೂಡುತ್ತಿರುವುದು ಸಂತಸ ತಂದಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.ಭರಮಸಾಗರದಲ್ಲಿ ಫೆ.4 ರಿಂದ ಆರಂಭಗೊಳ್ಳುತ್ತಿರುವ 9 ದಿನಗಳ ಹುಣ್ಣಿಮೆ ಮಹೋತ್ಸವದ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ನಿರಂಜನಮೂರ್ತಿ ಕಲ್ಯಾಣ ಮಂಟಪದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ತರಳಬಾಳು ಹುಣ್ಣಿಮೆ ಸಮಿತಿಯವರು ಈಗಾಗಲೇ ಕೆರೆಯಲ್ಲಿ ದೋಣಿ ಸಂಚಾರ ಏರ್ಪಡಿಸಲು ಮುಂದಾಗಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿಗಳಿಂದಲೂ ಇದಕ್ಕೆ ಅನುಮತಿ ದೊರೆತಿದೆ. ಮುರುಡೇಶ್ವರದಿಂದ ಯಾಂತ್ರಿಕೃತ ದೋಣಿಯೊಂದನ್ನು ತರಿಸಲು ತೀರ್ಮಾನಿಸಲಾಗಿದೆ. ವಿಶಾಲವಾದ ಕೆರೆಯಲ್ಲಿ ದೋಣಿಯಲ್ಲಿ ಕುಳಿತು ಸಂಚರಿಸುವ ಸಂತೋ಼ಷವು ಹುಣ್ಣಿಮೆಯಲ್ಲಿ ಭಾಗಿಯಾಗುವ ಭಕ್ತರಿಗೆ ಸಿಗಲಿದೆ ಎಂದರು.ದೋಣಿ ಸಂಚಾರದ ನಂತರ ವೇದಿಕೆಗೆ ಶ್ರೀ ಆಗಮನ ಮಹೋತ್ಸವದಲ್ಲಿ ಭಾಗಿಯಾಗಲು ಸಿರಿಗೆರೆಯ ಸಂಸ್ಥಾನದಿಂದ ಆಗಮಿಸುವ ಶ್ರೀಗಳು ದೋಣಿಯಲ್ಲಿ ಕುಳಿತು ಕೆರೆಯಲ್ಲಿ ಸಂಚರಿಸಿದ ನಂತರ ವೇದಿಕೆಗೆ ಆಗಮಿಸುವಂತೆ ವ್ಯವಸ್ಥೆ ಮಾಡಲಾಗಿದೆ. ತರಳಬಾಳು ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ ಇದೊಂದು ಅಪರೂಪದ ಸನ್ನಿವೇಶವಾಗಲಿದೆ ಎಂದು ತರಳಬಾಳು ಹುಣ್ಣಿಮೆ ಸಮಿತಿಯವರು ಹೇಳಿದ್ದಾರೆ.
ಮಹಾಮಂಟಪ ನಿರ್ಮಾಣ ಕಾರ್ಯವನ್ನು ಶ್ರೀಗಳು ಪರಿಶೀಲಿಸಿದರು. ಮಂಟಪದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕೃಷಿ ಮೇಳದ ಮಳಿಗೆ, ಬಿಡಾರಗಳು, ಕುಸ್ತಿ ಅಖಾಡ ಹಾಗೂ ಕ್ರೀಡಾಕೂಟದ ಅಂಕಣಗಳನ್ನು ವೀಕ್ಷಿಸಿದರು. ತರಳಬಾಳು ಹುಣ್ಣಿಮೆ ಈ ಬಾರಿ ಹಲವು ವಿಶೇಷತೆಗಳನ್ನು ಹೊಂದಿದೆ. ವೇದಿಕೆಯ ಸಮೀಪವೇ ವಿವಿಧ ಚಟುವಟಿಕೆಗಳು ನಡೆಯುವುದರಿಂದ ವೀಕ್ಷಕರು ಎಲ್ಲವನ್ನೂ ವೀಕ್ಷಿಸಬಹುದು ಎಂದರು.ಈ ಬಾರಿಯೂ ಸಹ ಚಿತ್ರದುರ್ಗ, ದಾವಣಗೆರೆ, ಚನ್ನಗಿರಿ, ಜಗಳೂರು, ಹೊಳಲ್ಕೆರೆ, ಮುಂತಾದ ತಾಲೂಕಿನ ಭಕ್ತಾದಿಗಳು 74,73,952 ರೂ.ಗಳ ಕಾಣಿಕೆಯನ್ನು ಶ್ರೀಗಳಿಗೆ ಕಾಣಿಕೆ ಸಲ್ಲಿಸಿದರು. ಚಿಕ್ಕಬೆನ್ನೂರು ಗ್ರಾಮದ ಭಕ್ತಾದಿಗಳು ತಾವು ಸಂಗ್ರಹಿಸಿದ್ದ ೧೧ ಲಕ್ಷ ರು.ಗಳನ್ನು ಶ್ರೀಗಳಿಗೆ ನೀಡಿದರು.
ಚಿಕ್ಕಬೆನ್ನೂರು ಜಿ.ಬಿ.ತೀರ್ಥಪ್ಪ, ಚೌಲಿಹಳ್ಳಿ ಶಶಿ ಪಾಟೀಲ್, ಭೀಮಸಮುದ್ರದ ಬಿ.ಟಿ.ಪುಟ್ಟಪ್ಪ, ಕೋಗುಂಡೆ ಮಂಜುನಾಥ್, ಶೈಲೇಶ್ ಕುಮಾರ್, ಡಿ.ಎಸ್.ಪ್ರವೀಣ್ ಕುಮಾರ್, ನಿರಂಜನಮೂರ್ತಿ, ರಂಗವ್ವನಹಳ್ಳಿ ಹನುಂತಪ್ಪ, ಎಚ್.ಎಂ. ದ್ಯಾಮಣ್ಣ ಮುಂತಾದವರು ಭಾಗವಹಿಸಿದ್ದರು.ನಂಬಿಕೆಗಳ ಮೇಲೆ ಪ್ರಹಾರ ಮಾಡಬಾರದು: ಶ್ರೀ
ಪರಸ್ಪರರ ನಂಬಿಕೆಗಳನ್ನು ಎಲ್ಲರೂ ಗೌರವಿಸಬೇಕು. ಒಬ್ಬರ ನಂಬಿಕೆಯನ್ನು ಮತ್ತೊಬ್ಬರು ಪ್ರಶ್ನಿಸಬಾರದು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಕೆಲವರು ಸಾವಿಗೆ ಈಡಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಶ್ರೀಗಳು ಎಲ್ಲರ ಜೀವನವೂ ನಂಬಿಕೆಗಳ ಆಧಾರದಲ್ಲಿಯೇ ಮುಂದೆ ಸಾಗಿದೆ. ನಂಬಿಕೆಗಳು ಬದುಕಿಗೆ ಆಧಾರ. ಪ್ರಯಾಗದಲ್ಲಿ ಭಾಗಿಯಾಗಿರುವ ಜನರ ನಂಬಿಕೆಗಳನ್ನು ಹೀಗಳೆಯಬಾರದು ಎಂದರು.