ಸಾರ್ವಜನಿಕರು ಆರೋಪಿಗಳಾದ ಜಯಂತ್ ಹಾಗೂ ಯತೀಶ್ ನನ್ನು ಒಪ್ಪಿಸಿದ ಕುಖ್ಯಾತ ಕಳ್ಳರನ್ನು ಪೊಲೀಸ್ ಸಿಬ್ಬಂದಿ ಜೊತೆಯಲ್ಲಿ ಕರೆದೊಯ್ಯುವ ಬದಲು ಆ್ಯಂಬುಲೆನ್ಸ್ ನಲ್ಲಿ ಬಿಟ್ಟು ಕಳುಹಿಸಿ ನಿರ್ಲಕ್ಷ್ಯವಹಿಸಿದ್ದಾರೆ. ಆತನ ಮೇಲೆ ಎರಡು ಬಾರಿ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ಅಸ್ವಸ್ಥನಾಗಿದ್ದನು, ಕಾಲಿಗೆ ರಾಡು ಹಾಕಲಾಗಿತ್ತು, ಅವನು ಪರಾರಿಯಾಗುವ ಸ್ಥಿತಿಯಲ್ಲಿರಲಿಲ್ಲ, ಪರಾರಿಯಾಗಿದ್ದ 24 ಗಂಟೆಗಳ ಒಳಗೆ ಶವವಾಗಿ ಪತ್ತೆಯಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸರೇ ಏನೋ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಪೊಲೀಸರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಆ.23ರಂದು ವೃದ್ಧೆಯೊಬ್ಬರ ಮಾಂಗಲ್ಯ ಸರ ಕದಿಯಲು ಯತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದಿದ್ದಲ್ಲದೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆ್ಯಂಬುಲೆನ್ಸ್ ನಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ ರೌಡಿಶೀಟರ್ ನೊಬ್ಬನ ಶವ ಅನುಮಾನಾಸ್ಪದವಾಗಿ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಆಲೂರು ಗ್ರಾಮದ ಜಯಂತ್ (28) ಶವ ಕೆರೆಯಲ್ಲಿ ಪತ್ತೆಯಾಗಿದ್ದಾನೆ.

ಘಟನಾ ಹಿನ್ನೆಲೆ:

ಎರಡು ದಿನಗಳ ಹಿಂದೆ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗೇಟ್ ಬಳಿ ವೃದ್ಧೆಯೊಬ್ಬರ ಮಾಂಗಲ್ಯ ಸರ ಕೀಳಲು ಬ್ಯಾಟರಿ ಜಯಂತ್ ಹಾಗೂ ಯತೀಶ್ ಯತ್ನಿಸಿದ್ದರು. ಈ ವೇಳೆ ಎಚ್ಚೆತ್ತ ಸಾರ್ವಜನಿಕರು ಇಬ್ಬರನ್ನೂ ಹಿಡಿದು ಧರ್ಮದೇಟು ನೀಡಿದ್ದರು. ಜನರ ಹೊಡೆತಕ್ಕೆ ಸಿಲುಕಿದ ಇಬ್ಬರೂ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ಸ್ಥಳೀಯರು 112 ಸಹಾಯವಾಣಿಗೆ ಕರೆ ಮಾಡಿ ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಘಟನಾ ಸ್ಥಳಕ್ಕೆ ದೌಡಾಯಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆರೋಪಿಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲು ಆ್ಯಂಬುಲೆನ್ಸ್ ಕರೆಸಿದ್ದರು. ಆದರೆ, ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗುತ್ತಿದ್ದ ವೇಳೆ ಏಕಾಏಕಿ ಎಚ್ಚೆತ್ತ ಆರೋಪಿಗಳಾದ ಜಯಂತ್ ಹಾಗೂ ಯತೀಶ್ ಚಾಲಕನ ಮೇಲೆ ಹಲ್ಲೆ ನಡೆಸಿ ಕತ್ತಲಲ್ಲಿ ಪರಾರಿಯಾಗಿದ್ದರು. ಪೊಲೀಸರು ಅಂದಿನಿಂದಲೂ ಇವರಿಗಾಗಿ ಹುಡುಕಾಟ ನಡೆಸುತ್ತಿದ್ದರೂ ಇಬ್ಬರೂ ಸಿಕ್ಕಿರಲಿಲ್ಲ.

ಕೆರೆಯಲ್ಲಿ ತೇಲಿದ ಜಯಂತ್ ಶವ:

ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಪೈಕಿ ಬ್ಯಾಟರಿ ಜಯಂತ್‍ನ ಮೃತದೇಹ ತ್ಯಾಮಗೊಂಡ್ಲು ಹೋಬಳಿಯ ಗೋವೇನಹಳ್ಳಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಆ್ಯಂಬುಲೆನ್ಸ್ ನಿಂದ ತಪ್ಪಿಸಿಕೊಂಡು ಓಡುವ ಭರದಲ್ಲಿ ಆಯತಪ್ಪಿ ಕೆರೆಗೆ ಬಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ.

ಮೃತ ಆರೋಪಿ ಮೇಲೆ 68 ಪ್ರಕರಣಗಳು:

ಹಗಲು ದರೋಡೆ, ಹಲ್ಲೆ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಮೇಲೆ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ 14 ಪ್ರಕರಣ, ಗ್ರಾಮಾಂತರ ಠಾಣೆಯಲ್ಲಿ 8 ಪ್ರಕರಣ, ಟೌನ್ ಠಾಣೆಯಲ್ಲಿ 5 ಪ್ರಕರಣ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಮಾದನಾಯ್ಕನಹಳ್ಳಿಯಲ್ಲಿ 3 ಪ್ರಕರಣ, ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಕೋರಾ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ತಿಲಕ್ ಪಾರ್ಕ್ ಠಾಣೆ, ಗುಬ್ಬಿ ಠಾಣೆ, ಹೆಬ್ಬೂರು ಠಾಣೆ, ಕೊರಟಗೆರೆ ಠಾಣೆಯಲ್ಲಿ ತಲಾ 1 ಪ್ರಕರಣ, ಬೆಂಗಳೂರು ದಕ್ಷಿಣ ಜಿಲ್ಲೆಯ ಕುದೂರು ಠಾಣೆಯಲ್ಲಿ 2 ಪ್ರಕರಣ, ಬಿಡದಿ ಠಾಣೆಯಲ್ಲಿ 1 ಪ್ರಕರಣ, ತಾವರಕೆರೆ ಠಾಣೆಯಲ್ಲಿ 2 ಪ್ರಕರಣ, ಮಂಡ್ಯ ಜಿಲ್ಲೆಯ ಮದ್ದೂರು ಠಾಣೆಯಲ್ಲಿ 1 ಪ್ರಕರಣ, ಬೆಂಗಳೂರು ನಗರ ಜಿಲ್ಲೆಯ ಸೋಲದೇವನಹಳ್ಳಿ, ಜ್ಞಾನಭಾರತಿ, ಪೀಣ್ಯ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 68 ಪ್ರಕರಣಗಳು ದಾಖಲಾಗಿವೆ.

ಎರಡು ಬಾರಿ ಗುಂಡಿನ ದಾಳಿ:

ಈಗಾಗಲೇ ರೌಡಿ ಶೀಟರ್ ಜಯಂತ್ ಮೇಲೆ 22 ಮಾರ್ಚ್ 2019ರಲ್ಲಿ ದಾಬಸ್‍ಪೇಟೆ ಪೊಲೀಸ್ ಠಾಣೆಯ ಪಿಎಸೈ ಆಗಿದ್ದ ಶಂಕರ್ ನಾಯಕ್ ಹಾಗೂ 2024ರ ಸೆ.1ರಂದು ದಾಬಸ್‍ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಾಜು ಗುಂಡಿನ ದಾಳಿ ನಡೆಸಿದ್ದರೂ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದನು.

ಪೊಲೀಸರ ಮೇಲೆ ವಕೀಲ, ಕುಟುಂಬಸ್ಥರ ಆರೋಪ:

ಸಾರ್ವಜನಿಕರು ಆರೋಪಿಗಳಾದ ಜಯಂತ್ ಹಾಗೂ ಯತೀಶ್ ನನ್ನು ಒಪ್ಪಿಸಿದ ಕುಖ್ಯಾತ ಕಳ್ಳರನ್ನು ಪೊಲೀಸ್ ಸಿಬ್ಬಂದಿ ಜೊತೆಯಲ್ಲಿ ಕರೆದೊಯ್ಯುವ ಬದಲು ಆ್ಯಂಬುಲೆನ್ಸ್ ನಲ್ಲಿ ಬಿಟ್ಟು ಕಳುಹಿಸಿ ನಿರ್ಲಕ್ಷ್ಯವಹಿಸಿದ್ದಾರೆ. ಆತನ ಮೇಲೆ ಎರಡು ಬಾರಿ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ಅಸ್ವಸ್ಥನಾಗಿದ್ದನು, ಕಾಲಿಗೆ ರಾಡು ಹಾಕಲಾಗಿತ್ತು, ಅವನು ಪರಾರಿಯಾಗುವ ಸ್ಥಿತಿಯಲ್ಲಿರಲಿಲ್ಲ, ಪರಾರಿಯಾಗಿದ್ದ 24 ಗಂಟೆಗಳ ಒಳಗೆ ಶವವಾಗಿ ಪತ್ತೆಯಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸರೇ ಏನೋ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಪೊಲೀಸರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

ಪಾರದರ್ಶಕ ತನಿಖೆ : ರೌಡಿ ಶೀಟರ್ ಜಯಂತ್ ನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಬಗ್ಗೆ ಪಾರದರ್ಶಕ ತನಿಖೆ ನಡೆಸುವಂತೆ ಬೆಂ.ಗ್ರಾ.ಜಿಲ್ಲಾ ಅಡಿಷನಲ್ ಎಸ್ಪಿ ಲಕ್ಷ್ಮೀನಾರಾಯಣ್ ರವರನ್ನು ನೇಮಿಸಿದ್ದು, ಮೃತ ಜಯಂತ್ ನ ಮೃತದೇಹ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಮತ್ತೋರ್ವ ಆರೋಪಿ ಯತೀಶ್ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಪಾರದರ್ಶಕ ತನಿಖೆ ನಡೆಸಿ, ತಪ್ಪಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಸ್ ಪಿ ಚಂದ್ರಕಾಂತ್ ತಿಳಿಸಿದ್ದಾರೆ.