ಸಾರಾಂಶ
ಜನರ ಆರೋಗ್ಯ ಕಾಪಾಡಿ, ಅವರ ಜೀವ ಉಳಿಸಲು ಹೋದ ನನ್ನ ಮಗಳು ಜೀವ ತಾನೇ ಕಳೆದುಕೊಳ್ಳುವಂತಾಯಿತಲ್ಲ ದೇವರೆ ನಮಗೆ ಯಾಕೇ ಇಂತಹ ಅನ್ಯಾಯ ಮಾಡಿದಿ
ರೋಣ: ತಾಲೂಕಿನ ಯಾ.ಸ.ಹಡಗಲಿ ಗ್ರಾಮದ ಸಮೀಪ ಮಂಗಳವಾರ ಮಧ್ಯಾಹ್ನ ನಿಚ್ಚನಕೇರಿ ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿ ಬಸಮ್ಮ ಗುರಿಕಾರ (34) ಶವ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.
ಯಾ.ಸ. ಹಡಗಲಿ ಗ್ರಾಮದಲ್ಲಿ ಜರುಗಿದ ಆರೋಗ್ಯ ತಪಾಸಣೆ ಶಿಬಿರ ಮುಗಿಸಿಕೊಂಡು ಬೆಳವಣಕಿ ಆರೋಗ್ಯ ಕೇಂದ್ರ ನಿರೀಕ್ಷಕ ವೀರಸಂಗಯ್ಯ ಹಿರೇಮಠ, ಸಮುದಾಯ ಆರೋಗ್ಯಾಧಿಕಾರಿ ಬಸವರಾಜ ಕಡಪಟ್ಟಿ, ಕೌಜಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಂರಕ್ಷಣಾಧಿಕಾರಿ ಬಸಮ್ಮ ಗುರಿಕಾರ ಒಂದೇ ಬೈಕ್‌ನಲ್ಲಿ ನಿಚ್ಚನಕೇರಿ ಹಳ್ಳ ದಾಟುವಾಗ ಆಯ ತಪ್ಪಿ ನೀರು ಪಾಲಾಗಿದ್ದು, ಇವರಲ್ಲಿ ವೀರಸಂಗಯ್ಯ, ಬಸವರಾಜ ಪಾರಾಗಿದ್ದರು. ಬಸಮ್ಮ ಗುರಿಕಾರ ನೀರು ಪಾಲಾಗಿದ್ದರು. ನೀರು ಪಾಲಾದ ಬಸಮ್ಮ ಶೋಧ ಕಾರ್ಯ ಮಂಗಳವಾರ ಕತ್ತಲಾಗುವವರೆಗೂ ನಡೆದು ಸ್ಥಗಿತವಾಗಿತ್ತು.ಮತ್ತೆ ಬುಧವಾರ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು, ಕಂದಾಯ ಇಲಾಖೆ ಸಿಬ್ಬಂದಿ ಬಸಮ್ಮ ಗುರಿಕಾರ ತಂದೆ ಹಾಗೂ ಸಂಬಂಧಿಕರು ಶೋಧ ಕಾರ್ಯ ಕೈಗೊಂಡ ಪರಿಣಾಮ ಮಹಿಳಾ ಸಿಬ್ಬಂದಿ ಬಸಮ್ಮ ಗುರಿಕಾರ ಶವವಾಗಿ ಪತ್ತೆಯಾಗಿದರು. ಶವ ಗುರುತಿಸುತ್ತಿದಂತೆ ಸ್ಥಳದಲ್ಲಿದ್ದ ಬಸಮ್ಮ ಗುರಿಕಾರ ತಂದೆ ಭರಮಪ್ಪ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿವಂತಿತ್ತು. ಜನರ ಆರೋಗ್ಯ ಕಾಪಾಡಿ, ಅವರ ಜೀವ ಉಳಿಸಲು ಹೋದ ನನ್ನ ಮಗಳು ಜೀವ ತಾನೇ ಕಳೆದುಕೊಳ್ಳುವಂತಾಯಿತಲ್ಲ ದೇವರೆ ನಮಗೆ ಯಾಕೇ ಇಂತಹ ಅನ್ಯಾಯ ಮಾಡಿದಿ ಎಂದು ಮೃತಳ ತಂದೆ ಭರಮಪ್ಪ ಗುರಿಕಾರ ನೆಲಕ್ಕೆ ಬಿದ್ದು ರೋಧಿಸುವ ಪರಿ ಕಣ್ಣೀರು ತರಿಸುವಂತಿತ್ತು.
ಬಸಮ್ಮ ಗುರಿಕಾರ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದವರಾಗಿದ್ದು, ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸ್ಥಳಕ್ಕೆ ತಹಸೀಲ್ದಾರ ನಾಗರಾಜ.ಕೆ., ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದರು. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.