ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧೆಯ ಮೃತದೇಹ ಕುಂಬಳಗೋಡು ಬಳಿಯ ರಾಮೋಹಳ್ಳಿ ಕೆರೆಯಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧೆಯ ಮೃತದೇಹ ಕುಂಬಳಗೋಡು ಬಳಿಯ ರಾಮೋಹಳ್ಳಿ ಕೆರೆಯಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ.

ಆಭರಣ ದೋಚುವ ಉದ್ದೇಶದಿಂದ ದುಷ್ಕರ್ಮಿಗಳು ವೃದ್ಧೆಯನ್ನು ಕೊಲೆ ಮಾಡಿ ಮೃತದೇಹ ಸೂಟ್‌ಕೇಸ್‌ನಲ್ಲಿಟ್ಟು ಬಳಿಕ ಅದನ್ನು ಎಳೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕುಂಬಳಗೋಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಲ್ಲಘಟ್ಟ ನಿವಾಸಿ ಜಯಮ್ಮ(61) ಕೊಲೆಯಾದ ವೃದ್ಧೆ. ಜಯಮ್ಮ ಜುಲೈ 15ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದರು. ಈ ಸಂಬಂಧ ಅವರ ಪುತ್ರ ಜೈಕುಮಾರ್‌ ಕುಂಬಳಗೋಡು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಟೋ ಚಾಲಕರಾಗಿರುವ ಜೈಕುಮಾರ್‌, ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿ ಜಯಮ್ಮ ಜತೆ ಚಲ್ಲಘಟ್ಟದ ಬಿಎಂಟಿಸಿ ಬಸ್‌ ಡಿಪೋ ಬಳಿಯ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಅವರ ತಂದೆ ಬೊರೇಗೌಡ ಪ್ರತ್ಯೇಕವಾಗಿ ರಾಜಾಜಿನಗರದಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ಜಯಮ್ಮ ಜುಲೈ 15ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಸ್‌ ಬಂದರಲಿಲ್ಲ. ಅವರ ಮೊಬೈಲ್‌ ಕೂಡ ಸ್ವಿಚ್ಡ್‌ ಆಫ್‌ ಆಗಿತ್ತು. ನಂತರ ಸಂಬಂಧಿಕರು, ಪರಿಚಯಸ್ಥರ ಮನೆಯಲ್ಲಿ ಹುಡುಕಾಟ ನಡೆಸಿದ್ದರೂ ಎಲ್ಲಿಯೂ ಪತ್ತೆಯಾಗಲಿಲ್ಲ. ಹೀಗಾಗಿ ಜುಲೈ 16 ರಂದು ನಾಪತ್ತೆ ದೂರು ನೀಡಿದ್ದರು.

ಈ ಮಧ್ಯೆ ರಾಮೋಹಳ್ಳಿ ಕೆರೆಯಲ್ಲಿ ಮಂಗ‍ಳವಾರ ಮಧ್ಯಾಹ್ನ ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾಗ ಆ ಮೃತದೇಹ ಜಯಮ್ಮ ಅವರದು ಎಂಬುದು ಗೊತ್ತಾಗಿದೆ. ಯಾರೋ ಪರಿಚಯಸ್ಥರೇ ಹತ್ಯೆಗೈದಿರುವ ಸಾಧ್ಯತೆಯಿದೆ. ಆದ್ದರಿಂದ ಕೌಟುಂಬಿಕ, ವೈಯಕ್ತಿಕ ಹಾಗೂ ಇತರೆ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತನೆ ಮಾಡಿಕೊಂಡು ತನಿಖೆ ಆರಂಭಿಸಲಾಗಿದೆ.