ಸಾರಾಂಶ
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಬಾಡಿ ಪ್ಲೆಥಿಸ್ಮೋಗ್ರಾಫ್ ತಂತ್ರಜ್ಞಾನವನ್ನು ಸಂಸ್ಥೆಯ ಮಾಜಿ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮತ್ತು ಭೋದನಾ ಆಸ್ಪತ್ರೆಗಳ ಸಿಓಓ ಡಾ. ಆನಂದ್ ಜಂಟಿಯಾಗಿ ಉದ್ಘಾಟಿಸಿದರು.
ಈ ಅತ್ಯಾಧುನಿಕ ಸಾಧನವು ಕರಾವಳಿ ಕರ್ನಾಟಕದಲ್ಲೇ ಪ್ರಥಮ
ಕನ್ನಡಪ್ರಭ ವಾರ್ತೆ ಮಣಿಪಾಲಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಬಾಡಿ ಪ್ಲೆಥಿಸ್ಮೋಗ್ರಾಫ್ ತಂತ್ರಜ್ಞಾನವನ್ನು ಸಂಸ್ಥೆಯ ಮಾಜಿ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮತ್ತು ಭೋದನಾ ಆಸ್ಪತ್ರೆಗಳ ಸಿಓಓ ಡಾ. ಆನಂದ್ ಜಂಟಿಯಾಗಿ ಉದ್ಘಾಟಿಸಿದರು.ನಂತರ ಮಾತನಾಡಿದ ಡಾ. ಪದ್ಮರಾಜ್ ಹೆಗ್ಡೆ, ದೀರ್ಘಕಾಲದ ಅಸ್ತಮಾ, ಇಂಟರ್‌ಸ್ಟೀಷಿಯಲ್‌ನಂತಹ ದೀರ್ಘಕಾಲದ ಉಸಿರಾಟದ ಅಸ್ವಸ್ಥತೆಗಳ ರೋಗನಿರ್ಣಯ ಮತ್ತು ಅನುಸರಣೆಯಲ್ಲಿ ಬಾಡಿ ಪ್ಲೆಥಿಸ್ಮೋಗ್ರಫಿ ಒಂದು ಸಮಗ್ರ ತನಿಖಾ ಸಾಧನವಾಗಿದೆ. ಇದು ಹೊರರೋಗಿ ಮತ್ತು ಒಳರೋಗಿಗಳ ಆರೈಕೆ ಎರಡರಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಇದು ಸಂಸ್ಥೆಯ ಶೈಕ್ಷಣಿಕ ಮೂಲಸೌಕರ್ಯಕ್ಕೆ ಅಮೂಲ್ಯವಾದ ಸೇರ್ಪಡೆಯಾಗಿದೆ ಎಂದು ವಿವರಿಸಿದರು.ಉಸಿರಾಟ ಔಷಧ ವಿಭಾಗದ ಮುಖ್ಯಸ್ಥ ಡಾ. ಮನು ಮೋಹನ್ ಕೆ. ಮಾತನಾಡಿ, ಸಾಂಪ್ರದಾಯಿಕ ಸ್ಪಿರೋಮೆಟ್ರಿಯು ಶ್ವಾಸಕೋಶದ ಗಾಳಿಯನ್ನು ಸೆಳೆಯುವ ಮತ್ತು ಇಂಗಾಲಾಮ್ಲವನ್ನು ಹೊರಚೆಲ್ಲುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತದೆ. ಆದರೆ ಈ ವಿಧಾನಗಳು ಒಟ್ಟು ಶ್ವಾಸಕೋಶದ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ. ಆದರೆ ಹೊಸ ಪ್ಲೆಥಿಸ್ಮೋಗ್ರಾಫ್ ಉಪಕರಣವು ಈ ಸಮಸ್ಯೆಯನ್ನು ಪರಿಹರಿಸುತ್ತದೆ. ಶಸ್ತ್ರಚಿಕಿತ್ಸೆಗೆ ಮುನ್ನ ಶ್ವಾಸಕೋಶದ ಮೌಲ್ಯಮಾಪನಗಳಲ್ಲಿ ವಿಶೇಷವಾಗಿ ಶ್ವಾಸಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಲ್ಲಿ ಯಂತ್ರವು ಅತ್ಯುಪಯುಕ್ತವಾಗಿದೆ ಎಂದರು.ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಶಿಲ್ಲರ್ ಹೆಲ್ತ್‌ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಆನಂದ ಕುಮಾರ್ ಮತ್ತು ವಿಭಾಗದ ಹಿರಿಯ ವೈದ್ಯರು ಉಪಸ್ಥಿತರಿದ್ದರು.ಈ ಅತ್ಯಾಧುನಿಕ ರೋಗನಿರ್ಣಯ ಸಾಧನವು ಕರಾವಳಿ ಕರ್ನಾಟಕದಲ್ಲಿ ಮೊದಲನೆಯದು. ಈ ಮೂಲಕ ಕರಾವಳಿ ಪ್ರದೇಶದ ರೋಗಿಗಳ ಉಸಿರಾಟದ ಆರೈಕೆ ಮತ್ತು ಸಂಶೋಧನಾ ಸೌಲಭ್ಯಗಳಲ್ಲಿ ಹೊಸ ಮಾನದಂಡವನ್ನು ಇದು ಸ್ಥಾಪಿಸುತ್ತದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.