ಬಿಎಂಟಿಸಿ ತನಿಖಾ ಸಿಬ್ಬಂದಿಗೆ ಬಾಡಿ ವೋರ್ನ್‌ ಕ್ಯಾಮೆರಾ

| Published : Apr 04 2024, 02:13 AM IST / Updated: Apr 04 2024, 06:15 AM IST

ಬಿಎಂಟಿಸಿ ತನಿಖಾ ಸಿಬ್ಬಂದಿಗೆ ಬಾಡಿ ವೋರ್ನ್‌ ಕ್ಯಾಮೆರಾ
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಂಟಿಸಿ ತಪಾಸಣಾ ಸಿಬ್ಬಂದಿಗೆ ಬಾಡಿ ವೋರ್ನ್‌ ಕ್ಯಾಮೆರಾವನ್ನು ಕಳೆದ ನಾಲ್ಕು ವರ್ಷಗಳ ಹಿಂದೆಯೇ ನೀಡಲಾಗಿದೆ. ಅದರ ಜತೆಗೆ ಇದೀಗ ಹೆಚ್ಚುವರಿಯಾಗಿ ಕ್ಯಾಮೆರಾ ಖರೀದಿ ವಿತರಿಸಲು ಬಿಎಂಟಿಸಿ ಮುಂದಾಗಿದೆ.

 ಬೆಂಗಳೂರು :  ಬಿಎಂಟಿಸಿ ವಾಹನ ತಪಾಸಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಬರುತ್ತಿರುವ ದೂರುಗಳನ್ನು ತಗ್ಗಿಸಲು ಹಾಗೂ ತಪಾಸಣಾ ಕಾರ್ಯವನ್ನು ಪಾರದರ್ಶಕವಾಗಿ ಮಾಡಲು ತಪಾಸಣಾ ಸಿಬ್ಬಂದಿಗೆ ಹೆಚ್ಚುವರಿಯಾಗಿ ಬಾಡಿ ವೋರ್ನ್‌ ಕ್ಯಾಮೆರಾ ವಿತರಿಸಲು ನಿಗಮ ನಿರ್ಧರಿಸಿದೆ.

ಬಿಎಂಟಿಸಿ ಆದಾಯ ಸೋರಿಕೆ ತಡೆಯುವ ಸಲುವಾಗಿ ಟಿಕೆಟ್‌ ಪಡೆಯದೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗುತ್ತದೆ. ಅದರಂತೆ ಬಿಎಂಟಿಸಿಯಲ್ಲಿನ 60ಕ್ಕೂ ಹೆಚ್ಚಿನ ತನಿಖಾ ಸಿಬ್ಬಂದಿ ಮಾಸಿಕ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳನ್ನು ತಪಾಸಣೆ ನಡೆಸಿ ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿ ಅವರಿಂದ ದಂಡ ವಸೂಲಿ ಮಾಡುತ್ತಾರೆ. ಅದೇ ರೀತಿ ಟಿಕೆಟ್‌ ಪಡೆಯದ ಪ್ರಯಾಣಿಕರನ್ನು ಪತ್ತೆ ಮಾಡಿ ಅವರಿಗೆ ಟಿಕೆಟ್‌ ನೀಡುವಲ್ಲಿ ವಿಫಲವಾಗುವ ಬಸ್‌ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.

ಹೀಗೆ ತಪಾಸಣೆ ನಡೆಸಿ ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿ, ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ ಎಂಬ ಆರೋಪಗಳಿವೆ. ಹೀಗಾಗಿ ತಪಾಸಣಾ ಸಿಬ್ಬಂದಿಗೆ ಬಾಡಿ ವೋರ್ನ್‌ ಕ್ಯಾಮೆರಾವನ್ನು ಕಳೆದ ನಾಲ್ಕು ವರ್ಷಗಳ ಹಿಂದೆಯೇ ನೀಡಲಾಗಿದೆ. ಅದರ ಜತೆಗೆ ಇದೀಗ ಹೆಚ್ಚುವರಿಯಾಗಿ ಕ್ಯಾಮೆರಾ ಖರೀದಿ ವಿತರಿಸಲು ಬಿಎಂಟಿಸಿ ಮುಂದಾಗಿದೆ.40 ಬಾಡಿ ವೋರ್ನ್‌ ಕ್ಯಾಮೆರಾ ಖರೀದಿ

ಬಿಎಂಟಿಸಿಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಬಾಡಿ ವೋರ್ನ್‌ ಕ್ಯಾಮೆರಾ ಬಳಕೆಯನ್ನು ಪರಿಚಯಿಸಲಾಗಿದೆ. ತನಿಖಾ ಸಿಬ್ಬಂದಿ ಅದನ್ನು ಬಳಸುತ್ತಿದ್ದು, ಎಲ್ಲ ಸಿಬ್ಬಂದಿಗೂ ಅದು ದೊರೆತಿಲ್ಲ. ಅಲ್ಲದೆ, ಸದ್ಯ ಇರುವ ಕ್ಯಾಮೆರಾಗಳು ಹಳೆಯದಾಗಿದ್ದು, ಅದನ್ನು ಬದಲಿಸಬೇಕಿದೆ. ಅದರ ನಡುವೆಯೇ ಎಲ್ಲ ತನಿಖಾ ಸಿಬ್ಬಂದಿಗೆ ಬಾಡಿ ವೋರ್ನ್‌ ಕ್ಯಾಮೆರಾ ಸಿಗುವಂತೆ ಮಾಡಲು ಹೊಸದಾಗಿ 40 ಬಾಡಿ ವೋರ್ನ್‌ ಕ್ಯಾಮೆರಾ ಖರೀದಿಗೆ ಬಿಎಂಟಿಸಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಅಲ್ಲದೆ, ಈ ಕ್ಯಾಮೆರಾ ದೃಶ್ಯವನ್ನು ನೇರವಾಗಿ ಅಥವಾ ಚಿತ್ರೀಕರಿಸಿದ (ರೆಕಾರ್ಡಿಂಗ್‌) ದೃಶ್ಯ ವೀಕ್ಷಿಸಲು ಡಾಕಿಂಗ್‌ ಕೇಂದ್ರ ಸ್ಥಾಪನೆಯನ್ನೂ ಮಾಡಲು ಟೆಂಡರ್‌ ದಾಖಲೆಯಲ್ಲಿ ಸೂಚಿಸಲಾಗಿದೆ. ಆ ಡಾಕಿಂಗ್‌ ಕೇಂದ್ರದಲ್ಲಿ ಒಮ್ಮೆಲೇ 32 ಕ್ಯಾಮೆರಾಗಳ ದೃಶ್ಯವನ್ನು ವೀಕ್ಷಿಸುವ ವ್ಯವಸ್ಥೆ ಅಳವಡಿಸುವಂತೆಯೂ ಸೂಚಿಸಲಾಗಿದೆ.ಸರಾಸರಿ 16 ಸಾವಿರ ಟ್ರಿಪ್‌ಗಳ ತಪಾಸಣೆ

ಬಿಎಂಟಿಸಿ ತನಿಖಾ ಸಿಬ್ಬಂದಿಯು ಅಚ್ಚರಿಯ ತಪಾಸಣೆ ನಡೆಸುತ್ತಾರೆ. ಯಾವುದೇ ಪೂರ್ವ ನಿಗದಿಯಿಲ್ಲದ ಮಾರ್ಗಕ್ಕೆ ತೆರಳಿ ಅಲ್ಲಿ ಸಂಚರಿಸುವ ಬಸ್‌ಗಳಲ್ಲಿ ಟಿಕೆಟ್‌ ರಹಿತ ಪ್ರಯಾಣಿಕರು ಹಾಗೂ ಮಹಿಳಾ ಆಸನದಲ್ಲಿ ಕುಳಿತ ಪುರುಷ ಪ್ರಯಾಣಿಕರನ್ನು ಪತ್ತೆ ಮಾಡುವ ಕಾರ್ಯ ಮಾಡುತ್ತಾರೆ. ಅದರಂತೆ ತನಿಖಾ ಸಿಬ್ಬಂದಿ ಪ್ರತಿ ತಿಂಗಳು ಸರಾಸರಿ 16 ಸಾವಿರ ಟ್ರಿಪ್‌ಗಳಲ್ಲಿ ತಪಾಸಣೆ ನಡೆಸಿ, ಸರಾಸರಿ 3,300ಕ್ಕೂ ಹೆಚ್ಚಿನ ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಮಾಡುತ್ತಿದೆ. ಅವರಿಂದ ₹5.50 ಲಕ್ಷಕ್ಕೂ ಹೆಚ್ಚಿನ ದಂಡ ವಸೂಲಿ ಮಾಡಲಾಗುತ್ತಿದೆ.