ಸಾರಾಂಶ
ಶರಣರು ಸಮಾಜಕ್ಕೆ ನೀಡಿರುವ ಸರ್ವರಿಗೆ ಸಮಬಾಳು ತತ್ವ, ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎನ್ನುವ ಚಿಂತನೆ, ನಾವೆಲ್ಲರೂ ಒಂದೇ ಎನ್ನುವ ತಾರಕ ಮಂತ್ರ ಎಲ್ಲರನ್ನೂ ಒಂದುಗೂಡಿಸಲು ಸಾಧ್ಯವಾಗುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ಶರಣರ ವಚನಗಳ ನೀತಿಸಂಹಿತೆ ಜಾರಿಯಾದರೆ ವಿಶ್ವದಲ್ಲಿಯೇ ಭಾರತ ಸದೃಢವಾಗುತ್ತದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ತಿಳಿಸಿದರು.ನಗರದ ಬೋಗಾದಿ 2ನೇ ಹಂತದ ಸಿ.ಎಫ್.ಟಿ.ಆರ್.ಐ ಬಡಾವಣೆಯಲ್ಲಿರುವ ಅಜಿತನೆಲೆ ಆಶ್ರಯ ರಹಿತ ಗಂಡು ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಕಲಬುರಗಿ ಜಿಲ್ಲೆ ಸೇಡಂ ತಾ. ದೇವೇಂದ್ರಮ್ಮ ಮತ್ತು ಬಸವರಾಜಪ್ಪ ದೇಶ್ ಮುಖ್. ಟಿ ಹಾಬಾಳ ಅವರ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ 21ನೇ ವಿದ್ಯಾರ್ಥಿ ನಿಲಯಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಚನಕಾರರು ಸಮಾಜದ ನೋವುಗಳಿಗೆ ಸ್ಪಂದಿಸುವುದರ ಜೊತೆಗೆ ಜನಸಾಮಾನ್ಯರ ಭಾಷೆಯಲ್ಲಿ ವಚನಗಳನ್ನು ರಚಿಸಿರುವುದರಿಂದ 900 ವರ್ಷಗಳಾದರೂ ಶರಣರ ಹೆಸರು ಮತ್ತು ವಚನ ಸಾಹಿತ್ಯ ಲಕ್ಷಾಂತರ ಜನರ ಉಸಿರಾಗಿದೆ ಎಂದರು.ದತ್ತಿ ದಾಸೋಹಿಗಳಾದ ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕಿ ಅಕ್ಕಮಹಾದೇವಿ ಮರಮ್ಕಲ್ ಮಾತನಾಡಿ, ಶರಣರು ಸಮಾಜಕ್ಕೆ ನೀಡಿರುವ ಸರ್ವರಿಗೆ ಸಮಬಾಳು ತತ್ವ, ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎನ್ನುವ ಚಿಂತನೆ, ನಾವೆಲ್ಲರೂ ಒಂದೇ ಎನ್ನುವ ತಾರಕ ಮಂತ್ರ ಎಲ್ಲರನ್ನೂ ಒಂದುಗೂಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ, ವಿಶ್ವದ ವಿವಿಧ ಮೂಲೆಗಳ ಜನರನ್ನು ಬಸವಕಲ್ಯಾಣದಲ್ಲಿ ಬಸವಣ್ಣನವರು ರಚಿಸಿದ ಅನುಭವಮಂಟಪ ಒಂದುಗೂಡಿಸಿ, ಅವರನ್ನು ಅನುಭವದ ಹಿನ್ನೆಲೆಯಲ್ಲಿ ಚರ್ಚೆ ಮಾಡಲು ಪ್ರೇರಣೆ ನೀಡಿತು. ಶರಣರ ಅನುಭಾವಿಕ ನುಡಿಗಳೇ ವಚನಗಳಾಗಿ ನಮಗೆಲ್ಲರಿಗೂ ದಾರಿದೀಪವಾಗಿವೆ ಎಂದರು.ನಂತರ ವಚನ ಗಾಯನ ಮತ್ತು ವಾಚನ ಮಾಡಿದ 30 ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕ ವಿತರಿಸಲಾಯಿತು.ಅಜಿತ ನೆಲೆ ವ್ಯವಸ್ಥಾಪಕ ಕೆ. ರಾಮಚಂದ್ರ, ಪಂಕಜ, ಟೆಲಿಕಾಂ ನಿವೃತ್ತ ನೌಕರ ಬಸವರಾಜು, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಬಸವರಾಜು ಯೂತ್ ಫಾರ್ ಸೇವಾ ಸಂಸ್ಥೆಯ ದೀಪಕ್ ಆರಾಧ್ಯ, ಉದಿತ್ ಗೌಡ, ವೈಷ್ಣವಿ ಜೋಯಿಸ್, ಬಿ.ಎಂ. ಮಾನಸ ಇದ್ದರು.