ನರೇಗಾ ಕೂಲಿಕಾರ್ಮಿಕರ ಹೆಸರಿನಲ್ಲಿ ಬೋಗಸ್; ತನಿಖೆಗೆ ಆಗ್ರಹ

| Published : Jul 14 2024, 01:33 AM IST

ಸಾರಾಂಶ

ಕೂಲಿಕಾರ್ಮಿಕರ ಹೆಸರಿನಲ್ಲಿ ಬೋಗಸ್ ಮಾಡಿ ಹಣ ಎತ್ತುವಳಿ ಮಾಡುತ್ತಿರುವ ಪಿಡಿಒ ಮತ್ತು ಮೇಟಿಗಳ ವಿರುದ್ಧ ಕ್ರಮ ಕೈಗೊಂಡು, ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಗನೂರು ಮತ್ತು ಖಾನಾಪುರ ಗ್ರಾಮಗಳ ನರೇಗಾ ಕೂಲಿ ಕಾರ್ಮಿಕರು ತಾಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಕೂಲಿಕಾರ್ಮಿಕರ ಹೆಸರಿನಲ್ಲಿ ಬೋಗಸ್ ಮಾಡಿ ಹಣ ಎತ್ತುವಳಿ ಮಾಡುತ್ತಿರುವ ಪಿಡಿಒ ಮತ್ತು ಮೇಟಿಗಳ ವಿರುದ್ಧ ಕ್ರಮ ಕೈಗೊಂಡು, ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಗನೂರು ಮತ್ತು ಖಾನಾಪುರ ಗ್ರಾಮಗಳ ನರೇಗಾ ಕೂಲಿ ಕಾರ್ಮಿಕರು ತಾಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿ ನರೇಗಾ ಕೂಲಿ ಕಾರ್ಮಿಕರ ಮುಖಂಡರು, ತಾಲೂಕಿನ ನಗನೂರ ಗ್ರಾಪಂ ಪಿಡಿಒ ಮತ್ತು ಮೇಟಿಗಳು ನರೇಗಾ ಕೂಲಿ ಕೆಲಸ ಕೊಡದೇ ಹಾಜರಾತಿ ಹಾಕದೇ ವಂಚಿಸುತ್ತಿದ್ದಾರೆ. 2022, 2023 ಮತ್ತು 2024ನೇ ಸಾಲಿನಿಂದ 50, 60 ಕೂಲಿ ಕಾರ್ಮಿಕರ ಹೆಸರಿನಲ್ಲಿ ಬೋಗಸ್ ಹಣ ಎತ್ತುವಳಿ ಮಾಡುತ್ತಿದ್ದಾರೆ. ಇದರಲ್ಲಿ ಪಿಡಿಒ ಜತೆಗೆ ಕೂಲಿ ಕಾರ್ಮಿಕರ ಹಾಜರಾತಿ ಹಾಕುವ ಮೇಟಿಗಳು ಶಾಮೀಲಾಗಿದ್ದಾರೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ನರೇಗಾ ಜಾಬ್ ಕಾರ್ಡ್ ಹೊಂದಿರುವ ಹೊರರಾಜ್ಯಗಳ ಕಾರ್ಮಿಕರಿಗೂ ಹಾಜರಾತಿ ಹಾಕುತ್ತಾರೆ. ಗ್ರಾಮದಲ್ಲಿ ವಾಸವಿದ್ದು ನಿತ್ಯ ಕೆಲಸ ಮಾಡುವವರಿಗೆ ಅರ್ಧ ಹಾಜರಾತಿ ಹಾಕಿ ₹129 ಕೂಲಿ ಹಣ ಬರುವಂತೆ ಮಾಡಿದ್ದಾರೆ. ಕೆಲಸ ಮಾಡದವರಿಗೆ ₹349 ಕೂಲಿ ಹಣ ಕೊಡುತ್ತಾರೆ. ಅಲ್ಲದೇ ಒಂದು ವರ್ಷಕ್ಕೆ ₹20 ಲಕ್ಷ ಹಣ ಎತ್ತುವಳಿ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಮೇಟಿಗಳು ನರೇಗಾ ಕೆಲಸ ಮಾಡುವವರ ಮೇಲೆ ದೌರ್ಜನ್ಯ, ದರ್ಪ ತೋರುತ್ತಾರೆ. ಇಂತಹ ಮೇಟಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ಪಂಚಾಯ್ತಿ ಇಒ ಬಸವರಾಜ ಸಜ್ಜನ್, ಕೂಲಿಕಾರ್ಮಿಕರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಕೆಲಸ ಮಾಡುವಾಗ ಹಾಜರಾತಿ ಹಾಕಿದ ಮೇಲೆ ಎಡಿಟ್ ಮಾಡಲು ಅವಕಾಶವಿಲ್ಲ. ಇದರಿಂದ ನಿಮಗೆ ಕೂಲಿ ಕಡಿಮೆ ಬೀಳುತ್ತಿದೆ. ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಎಡಿಟ್ ಅವಕಾಶ ದೊರೆಯುವ ಸಂಭವವಿದೆ. ನಿಮ್ಮ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಲಾಗುವುದು. ನಿಮ್ಮ ಮನವಿಯನ್ನು ಮೇಲಧಿಕಾರಿಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಕೂಲಿಕಾರ್ಮಿಕರಾದ ಅರ್ಜುನ ಆಲಗೂರು, ಭೀಮಮ್ಮ, ಅಯ್ಯಪ್ಪ, ಸಿದ್ದಣ್ಣ, ಶರಣಪ್ಪ, ಎಚ್.ಎಂ. ಹುಲಗಪ್ಪ, ಲಕ್ಷ್ಮಣ ಖಾನಾಪುರ, ದೇವಪ್ಪ ಕಟ್ಟಿಮನಿ, ಭೀಮಣ್ಣ ಕಟ್ಟಿಮನಿ, ಸದಾನಂದ ಕಟ್ಟಿಮನಿ, ದೇವಕ್ಕಮ್ಮ, ಸದಾಶಿವ ಚನ್ನೂರ, ಸಂಗಮ್ಮ ಬಡಿಗೇರಾ, ಮಾತಮ್ಮ, ಶಿವಮ್ಮ, ಚಂದಪ್ಪ ಖಾನಪುರ, ಸಂಜು ರಡ್ಡಿ ಖಾನಾಪುರ, ಗೌರಮ್ಮ ಹವಾಲ್ದಾರ, ಮಂಜುಳಾ ಆಲಗೂರ, ಮಾನಮ್ಮ ನಾಕೊಡ್ಡಿ, ರಂಗಮ್ಮ ಚೆನ್ನೂರ, ದೇವಮ್ಮ ಕರಕಳಿ ಸೇರಿದಂತೆ ಇತರರಿದ್ದರು.