ಹೊನ್ನಾಳಿ: ಸ್ನಾನದ ಕೋಣೆಯಲ್ಲಿ ಬಾಯ್ಲರ್ ಸ್ಫೋಟ- ಬಾಲಕಿ ಸಾವು

| Published : Oct 09 2025, 02:00 AM IST

ಹೊನ್ನಾಳಿ: ಸ್ನಾನದ ಕೋಣೆಯಲ್ಲಿ ಬಾಯ್ಲರ್ ಸ್ಫೋಟ- ಬಾಲಕಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಡಾವಣೆ ಉತ್ತರ ಭಾಗ ಪ್ರದೇಶದಲ್ಲಿ ವಾಸವಾಗಿದ್ದ ಹೂವಾನಾಯ್ಕ ಎಂಬವರ ಮನೆಯಲ್ಲಿ ಬೆಳಗ್ಗೆ ಸುಮಾರು 11.30ಕ್ಕೆ ಸ್ನಾನದ ಕೋಣೆಯ ಬಾಯ್ಲರ್ ಸ್ಫೋಟಗೊಂಡು 4 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸ್ವೀಕೃತಿ (11) ಬಾಲಕಿ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

- ದುರ್ಗಿಗುಡಿ ಬಡಾವಣೆ ಹೂವಾನಾಯ್ಕ ಮನೆಯಲ್ಲಿ ಪುತ್ರಿ ಸ್ವೀಕೃತಿ ಬಲಿ

- - -

- ತಂದೆ ಹೂವಾನಾಯ್ಕ, ತಾಯಿ ಸುನೀತಾ ಬಾಯಿ, ಅಜ್ಜಿ ತೀರ್ಥಿಬಾಯಿಗೂ ಸುಟ್ಟಗಾಯ

- ಮಂಗಳವಾರ ಸ್ನಾನಕ್ಕೆ ತೆರಳಿದ್ದಾಗ ಘಟನೆ, ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ಸ್ವೀಕೃತಿ ಸಾವು

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ದುರ್ಗಿಗುಡಿ ಬಡಾವಣೆ ಉತ್ತರ ಭಾಗ ಪ್ರದೇಶದಲ್ಲಿ ವಾಸವಾಗಿದ್ದ ಹೂವಾನಾಯ್ಕ ಎಂಬವರ ಮನೆಯಲ್ಲಿ ಬೆಳಗ್ಗೆ ಸುಮಾರು 11.30ಕ್ಕೆ ಸ್ನಾನದ ಕೋಣೆಯ ಬಾಯ್ಲರ್ ಸ್ಫೋಟಗೊಂಡು 4 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸ್ವೀಕೃತಿ (11) ಬಾಲಕಿ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಹೂವಾನಾಯ್ಕ ಅವರು ಬೆನಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ನಿರೀಕ್ಷಕರಾಗಿದ್ದಾರೆ. ಕುಟುಂಬ ಸಮೇತ ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಉತ್ತರ ಭಾಗದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಹೂವಾ ನಾಯ್ಕ ಅವರ ಮಗಳು ಸ್ವೀಕೃತಿ (11) ಮಂಗಳವಾರ ಬೆಳಗ್ಗೆ 11.30ಕ್ಕೆ ಸ್ನಾನ ಮಾಡಲು ಹೋಗಿದ್ದಾಳೆ. ಈ ವೇಳೆ ನೀರು ಕಾಯಿಸಲು ಅಳವಡಿಸಿದ್ದ ಬಾಯ್ಲರ್ ಬ್ಲಾಸ್ಟ್ ಆಗಿದೆ.

ಪರಿಣಾಮ ಸ್ನಾನ ಮಾಡುತ್ತಿದ್ದ ಸ್ವೀಕೃತಿಗೆ ಬೆಂಕಿ ತಗುಲಿದೆ. ಸಹಾಯಕ್ಕಾಗಿ ಕೂಗಿಕೊಂಡಾಗ ಮನೆಯಲ್ಲೇ ಇದ್ದ ತಂದೆ ಹೂವಾನಾಯ್ಕ, ತಾಯಿ ಸುನೀತಾ ಬಾಯಿ ಹಾಗೂ ಅಜ್ಜಿ ತೀರ್ಥಿಬಾಯಿ ಸ್ನಾನದ ಮನೆಯ ಬಾಗಿಲು ಒಡೆದು ರಕ್ಷಣೆಗಾಗಿ ಸ್ನಾನದ ಕೋಣೆ ಪ್ರವೇಶಿಸಿದ್ದಾರೆ. ಆಗ ಇವರಿಗೂ ಬೆಂಕಿ ತಗುಲಿ ಸುಟ್ಟಗಾಯಗಳಾಗಿವೆ.

ಸ್ಥಳೀಯರು ನಾಲ್ವರು ಗಾಯಾಳುಗಳನ್ನೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಂತರ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅ.8ರಂದು ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸ್ವೀಕೃತಿ (11) ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಬದುಕುಳಿದ ಮೂವರೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೂವಾನಾಯ್ಕ ಅವರ ಅಣ್ಣ ಕೇಶನಾಯ್ಕ ಹೊನ್ನಾಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

- - -

-8ಎಚ್.ಎಲ್.ಐ1: ಸ್ವೀಕೃತಿ (11)