ಉಡುಪಿಯಲ್ಲಿ ನಡೆಯುವ ಶಂಕರ ವಿಜಯೋತ್ಸವ ಕಾರ್ಯಕ್ರಮ ಎಲ್ಲರ ಸಹಕಾರದಲ್ಲಿ ಶಂಕರರ ವಿಚಾರಧಾರೆಗಳನ್ನು ಜನತೆಗೆ ತಿಳಿಸುವ ಕಾರ್ಯಕ್ರಮ ಇದಾಗಿದ್ದು, ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಶೃಂಗೇರಿ ಶ್ರೀ ಶಾರದಾ ಪೀಠಂ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಹೇಳಿದರು.

ಮಂಗಳೂರು: ಉಡುಪಿಯಲ್ಲಿ ನಡೆಯುವ ಶಂಕರ ವಿಜಯೋತ್ಸವ ಕಾರ್ಯಕ್ರಮ ಎಲ್ಲರ ಸಹಕಾರದಲ್ಲಿ ಶಂಕರರ ವಿಚಾರಧಾರೆಗಳನ್ನು ಜನತೆಗೆ ತಿಳಿಸುವ ಕಾರ್ಯಕ್ರಮ ಇದಾಗಿದ್ದು, ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಶೃಂಗೇರಿ ಶ್ರೀ ಶಾರದಾ ಪೀಠಂ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಹೇಳಿದರು.ಅವರು ಭಾನುವಾರ ನಗರದ ಬಾಳಂ ಭಟ್‌ ಹಾಲ್‌ನಲ್ಲಿ ಶ್ರೀ ಶಂಕರ ವಿಜಯೋತ್ಸವದ ಆರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಂಕರರು ಭಾರತದಲ್ಲಿ ಧರ್ಮದ ಅವನತಿ ಹಂತದಲ್ಲಿದ್ದಾಗ ಎಲ್ಲರನ್ನೂ ತನ್ನ ಮೇಧಾವಿ, ವಾಕ್ ಶಕ್ತಿಯಿಂದ ಅವರ ಮನಸ್ಸು ಪರಿವರ್ತಿಸಿ ಧರ್ಮವನ್ನು ಎತ್ತಿ ಹಿಡಿದ ಮಹಾನ್ ವ್ಯಕ್ತಿ. ಅದ್ವೈತ ಸಿದ್ಧಂತವನ್ನು ಪ್ರಚಾರಪಡಿಸಿ ಧರ್ಮದ ಉಳಿವನ್ನು ಮಾಡಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಮೂರು ದಿನಗಳ ಶ್ರೀ ಶಂಕರ ವಿಜಯೋತ್ಸವ ಉಡುಪಿಯಲ್ಲಿ ಡಿ.28,29,30ರಂದು ನಡೆಯಲಿದೆ. ಅದರ ಆರಂಭೋತ್ಸವ ಇಂದು ನಡೆಯುತ್ತಿದೆ. ಉಡುಪಿಯ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡೋಣ ಎಂದರು.

ಶ್ರೀ ಶಂಕರ ವಿಜಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಹೇಶ ಠಾಕೂರ್‌ ಮಾತನಾಡಿ, ಉತ್ಸವದ ರೂಪುರೇಷೆ ಮತ್ತು ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಡಿ.27ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಕ್ರೀಡಾಂಗಣದ ಹತ್ತಿರದ ಸಭಾಂಗಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರ ಬರೆಯುವ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಸುಮಾರು 3ರಿಂದ 4 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಶಂಕರಾಚಾರ್ಯ ವಿರಚಿತ ಸ್ತೋತ್ರಗಳ ಗಾಯನ, ಶಂಕರಾಚಾರ್ಯರ ಕುರಿತ ಭಾಷಣ ಮತ್ತು ಜೀವನ ಚರಿತ್ರೆಯ ರಸಪ್ರಶ್ನೆಯ ಅಂತಿಮ ಸ್ಪರ್ಧೆಗಳು ಇದೇ ದಿನ ನಡೆಯಲಿವೆ ಎಂದರು.ಡಿ.28ರಂದು ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಸಂಜೆ ನ್ಯಾಷನಲ್ ಹೈವೆಯಿಂದ ಜಗದ್ಗುರುಗಳ ವೈಭವದ ಶೋಭಾಯಾತ್ರೆ ಎಂ.ಜಿ.ಎಂ. ಕ್ರೀಡಾಂಗಣದವರೆಗೆ ಸಾಗಲಿದೆ. ಬಳಿಕ ವೇದಿಕೆಯಲ್ಲಿ ಶಂಕರ ವಿಜಯೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು. ಡಿ.29ರಂದು ಬೆಳಿಗ್ಗೆ ಚಂಡಿಕಾ ಹೋಮ ಹಾಗೂ ಮಹಿಳೆಯರಿಂದ ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ ಪಾರಾಯಣ ಮತ್ತು ಭಜನಾ ಸಮರ್ಪಣೆ ನಡೆಯಲಿದೆ. ಸುಮಾರು 7 ಸಾವಿರ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಡಿ.30ರಂದು ಜಗದ್ಗುರುಗಳ ಸಮಕ್ಷಮದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದರು.

ಶ್ರೀ ಶಂಕರ ವಿಜಯೋತ್ಸವ ಸಮಿತಿ ಉಪಾಧ್ಯಕ್ಷ, ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಶ್ರೀ ಶಂಕರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ನರೇಶ ಮಲ್ಲಿಗೆಮಾರು ಮಾತನಾಡಿದರು.

ಶ್ರೀ ಶೃಂಗೇರಿ ಶಾರದಾ ಪೀಠಂ ಉಡುಪಿ ಪ್ರಾಂತ್ಯದ ಧರ್ಮಾಧಿಕಾರಿ ವೇ.ಮೂ.ವಾಗೀಶ್ ಶಾಸ್ತ್ರಿ, ಕುಂದಾಪುರ ಪ್ರಾಂತ್ಯದ ಧರ್ಮಾಧಿಕಾರಿ ವೇ.ಮೂ.ಲೋಕೇಶ್ ಅಡಿಗ ಮತ್ತಿತರರು ಇದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಸತ್ಯಕೃಷ್ಣ ಭಟ್ ಸ್ವಾಗತಿಸಿದರು. ಆರ್ಥಿಕ ಸಮಿತಿ ಸಂಚಾಲಕ, ವಿಧಾನ ಪರಿಷತ್ ಮಾಜಿ ಸದಸ್ಯ ಬಾಲಕೃಷ್ಣ ಭಟ್ ವಂದಿಸಿದರು. ಮಹೇಶ್ ಮೂರ್ತಿ ಸುರತ್ಕಲ್ ನಿರೂಪಿಸಿದರು.