ವರದಾ-ಬೇಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು. ಒಂದು ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿಗೆ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಹಾವೇರಿ: ವರದಾ-ಬೇಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು ಮತ್ತು ಈ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಲು ಹಾವೇರಿ ಜಿಲ್ಲೆಯ ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಇತರ ಪ್ರಮುಖ ಹೋರಾಟಗಾರರ ಒಂದು ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ನಮ್ಮ ಭಾಗದ ಜನರ ಸಂಕಷ್ಟವನ್ನು ನಿವಾರಣೆ ಮಾಡಲು ಸ್ಪಷ್ಟವಾದ ನಿರ್ಣಯಗಳನ್ನು ಮಾಡಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿಗೆ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಈಗ ತೀವ್ರವಾದಂತಹ ಬರಗಾಲದ ಬರೆ ಅನುಭವಿಸುತ್ತಿದ್ದೇವೆ. ಇದರಿಂದ ರಾಜ್ಯದ ಜನ ಸಾಮಾನ್ಯರ ಬದುಕು ಅತ್ಯಂತ ಕಷ್ಟಕರವಾಗಿದೆ. ಬರುವ ದಿನಗಳಲ್ಲಿ ಕುಡಿಯುವ ನೀರು ದನಕರುಗಳಿಗೆ ನೀರು ಮತ್ತು ಮೇವು ಕೂಡ ಸಿಗದಂತಹ ಭೀಕರವಾದ ಪರಿಸ್ಥಿತಿ ಎದುರಿಸಬೇಕಾಗಿದೆ. ಮಳೆಯನ್ನೇ ನಂಬಿಕೊಂಡಿರುವ ರೈತರು ಅಪಾರ ಕಷ್ಟ ನಷ್ಟ ನಿರಂತರ ಅನುಭವಿಸುತ್ತಿದ್ದಾರೆ.

ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರ ಅತ್ಯಂತ ಸಾಮಾನ್ಯ ವಿಷಯವಾಗಿದೆ. ಕಳೆದ ಮೂವತ್ತು ವರ್ಷದಲ್ಲಿ ಹದಿನೇಳು ವರ್ಷ ಬರವನ್ನು ಉತ್ತರ ಕರ್ನಾಟಕದ ಜನ ಅನುಭವಿಸುತ್ತಿದ್ದಾರೆ. ಬರ ನಿರ್ವಹಣೆ ಅಲ್ಪಾವಧಿಯ ಕೆಲವು ಕ್ರಮಗಳನ್ನು ರಾಜ್ಯ ತೆಗೆದುಕೊಳ್ಳಬೇಕು ಮತ್ತು ಕೇಂದ್ರ ನೆರವಿಗೆ ಬರಬೇಕು, ವಿಶೇಷವಾಗಿ ಕುಡಿಯವ ನೀರು, ಮೇವು, ಜನರ ಕೈಗೆ ಕೆಲಸ ಕೊಡುವ ಕೆಲಸವನ್ನು ತಾವು ಮಾಡಬೇಕೆಂದು ಆಗ್ರಹಪಡಿಸುತ್ತಾ ಕೆಲವು ಶಾಶ್ವತವಾದ ಕ್ರಮಗಳನ್ನು ತೆಗೆದುಕೊಳ್ಳಲು ಅತ್ಯಂತ ಸೂಕ್ತಕಾಲವಾಗಿದೆ. ಅದರಲ್ಲಿ ನದಿ ಜೋಡಣೆಯ ಯೋಜನೆ ಅಡಿಯಲ್ಲಿ ಬೇಡ್ತಿ-ವರದಾ ಜೋಡಣೆ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ.

ನದಿ ಜೋಡಣೆ..

ಬೇಡ್ತಿ-ವರದಾ ಜೋಡಣೆ ಕೇಂದ್ರದ ನದಿ ಜೋಡಣೆಯ ಯೋಜನೆಯಲ್ಲಿ ಕರ್ನಾಟಕದಲ್ಲಿ ಪ್ರಮುಖವಾಗಿದ್ದು, ಈಗಾಗಲೇ ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ ನದಿ ಯೋಜನೆ ಅಡಿಯಲ್ಲಿ ಇದಕ್ಕೆ 18 ಟಿಎಂಸಿ ನೀರು ಮೀಸಲಿಟ್ಟಿದ್ದು, ತಾವೂ ಕೂಡ ಮೇಲ್ಕಂಡ ವಿಚಾರದಲ್ಲಿ ಕೇಂದ್ರ ಮತ್ತು ಇತರ ರಾಜ್ಯಗಳ ಜೊತೆಗೆ ಎಂಒಯುಗೆ ಒಪ್ಪಿಗೆ ಸೂಚಿಸಿರುವುದು ಉತ್ತಮ ನಿರ್ಧಾರ. ಈಗ ಎರಡನೇ ಬಾರಿ ಡಿಪಿಆರ್ ಮಾಡುವಂತ ಹಂತಕ್ಕೆ ಬಂದು ಹಲವು ತಿಂಗಳುಗಳು ಕಳೆದರೂ ಕೂಡ ಡಿಪಿಆರ್ ಪ್ರಗತಿ ಆಮೆಗತಿಯಲ್ಲಿ ನಡೆಯುತ್ತಿರುವುದು ವಿಷಾದನೀಯ. ಇದರ ಬಗ್ಗೆ ಜಲಸಂಪನ್ಮೂಲ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಬಹಳ ಸ್ಪಷ್ಟ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಕಳಿಸಿದ್ದೆ ಆದರೆ ಕೇಂದ್ರ ಸರ್ಕಾರದಿಂದ ಯೋಜನೆಯ ಶೇ.90ರಷ್ಟು ಅನುದಾನ ನದಿ ಜೋಡಣೆಯ ಯೋಜನೆಯಲ್ಲಿ ನಮಗೆ ಸಿಗುತ್ತದೆ ಇದನ್ನು ಸದ್ಬಳಕೆ ಮಾಡಬೇಕಾಗಿದೆ.

ಆಧುನಿಕ ತಂತ್ರಜ್ಞಾನ ಮತ್ತು ಯಾವುದೇ ದೊಡ್ಡ ಪ್ರಮಾಣದ ನೀರನ್ನು ಹಿಡಿದಿಡುವ ಜಲಾಶಯ ನಿರ್ಮಾಣ ಇಲ್ಲದೇ ನೀರನ್ನು ಎತ್ತುವ ಮುಖಾಂತರ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದೇ ಮತ್ತು ಮಳೆಗಾಲದಲ್ಲಿ ನೀರನ್ನು ಎತ್ತುವ ಮುಖಾಂತರ ಹೆಚ್ಚುವರಿ ನೀರು ಉತ್ತರ ಕನ್ನಡ ದಾಟಿ ಸಮುದ್ರ ಸೇರುತ್ತಿರುವುದು. ಅದರಿಂದ ಯಾವುದೇ ರೀತಿಯ ನೀರಿನ ಕೊರತೆಯೂ ಕೂಡ ಉತ್ತರ ಕನ್ನಡ ಜನತೆಗೆ ಆಗುವುದಿಲ್ಲ. ಇದರ ಬಗ್ಗೆ ಅಲ್ಲಿಯ ಪೂಜ್ಯರಿಗೆ ಪ್ರಮುಖರಿಗೆ ಮನವರಿಕೆ ಮಾಡಿಕೊಡಬೇಕಾಗಿ ವಿನಂತಿಸಿದ್ದಾರೆ.