ಸಾರಾಂಶ
ಚಿತ್ರದುರ್ಗ: ಬೊಮ್ಮಕ್ಕನಹಳ್ಳಿಯಲ್ಲಿ ಜೋಡಿ ಕೊಲೆ ಮಾಡಿ ತಲೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯಶ ಕಂಡಿದ್ದಾರೆ. ಬಂಧಿತನನ್ನು ಮಂಜುನಾಥ ಎಂದು ಗುರುತಿಸಲಾಗಿದೆ.
ಚಿತ್ರದುರ್ಗ: ಬೊಮ್ಮಕ್ಕನಹಳ್ಳಿಯಲ್ಲಿ ಜೋಡಿ ಕೊಲೆ ಮಾಡಿ ತಲೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯಶ ಕಂಡಿದ್ದಾರೆ. ಬಂಧಿತನನ್ನು ಮಂಜುನಾಥ ಎಂದು ಗುರುತಿಸಲಾಗಿದೆ.
ಆರೋಪಿ ಮಂಜುನಾಥ ಕೌಟುಂಬಿಕ ಕಲಹದ ಹಿನ್ನಲೆ ಹೆಣ್ಣು ಕೊಟ್ಟ ಅತ್ತೆ, ಮಾವನವನ್ನೆ ಜಮೀನಿನಲ್ಲಿ ಮಚ್ಚಿನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ. ಬೊಮ್ಮಕ್ಕನಹಳ್ಳಿ ಗ್ರಾಮದ ಹನುಮಂತಪ್ಪ ಮತ್ತು ತಿಪ್ಪಮ್ಮ ಎಂಬ ದಂಪತಿಗಳ ಮಗಳು ಹರ್ಷಿತಾಳನ್ನು ಅದೇ ಗ್ರಾಮದ ಮಂಜುನಾಥ ಮದುವೆಯಾಗಿದ್ದ. ಹರ್ಷಿತ ತನ್ನೊಂದಿಗೆ ಜೀವನ ನಡೆಸಲು ತಕರಾರು ಮಾಡುತ್ತಾಳೆ ಎಂದು ಮಂಜುನಾಥ ಸದಾ ಆರೋಪಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಎರಡೂ ಕುಟಂಬಗಳ ನಡುವೆ ಜಗಳ ಕೂಡಾ ನಡೆದಿತ್ತು.ಕಳೆದ ಸೆಪ್ಟಂಬರ್ 19 ರಂದು ಮಾವ ಹನುಮಂತಪ್ಪ, ಅತ್ತೆ ತಿಪ್ಪಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮೂವರು ಸಹಚರರ ಸಹಾಯದಿಂದ ಮಂಜುನಾಥ್ ಅವರುಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಮಂಜುನಾಥನ ಹೊರತು ಪಡಿಸಿ ಇತರೆ ಮೂವರನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದರು. ಮಂಜುನಾಥ ಟೆಲಿಕಮ್ಯೂನಿಕೇಷನ್‌ನಲ್ಲಿ ತುಸು ಬುದ್ಧಿವಂತಿಕೆ ಇದ್ದುದರಿಂದ ಒಂದು ತಿಂಗಳ ಕಾಲ ಕೈಗೆ ಸಿಗದಂತೆ ತಲೆ ಮರೆಸಿಕೊಂಡಿದ್ದ. ಮೊಬೈಲ್ ಟವರ್‌ಗೂ ಸಿಗುತ್ತಿರಲಿಲ್ಲ. ಆರಂಭದಲ್ಲಿ ಬೆಂಗಳೂರು, ನಂತರ ರಾಯಚೂರು, ಮಂತ್ರಾಲಯದಲ್ಲಿ ತಲಾಶ್ ಮಾಡಲಾಯಿತು. ಅವನ ಸ್ನೇಹಿತರ ಮೊಬೈಲ್‌ಗಳಿಗೆ ಬಂದ ಕರೆಯನ್ನಾಧರಿಸಿ ಅಂತಿಮವಾಗಿ ತೆಲಂಗಾಣದಲ್ಲಿ ಬಂಧಿಸಿ ಕರೆ ತರಲಾಗಿದೆ. ಮಂಜುನಾಥನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ಮಾಹಿತಿ ಬರಬೇಕಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಆರೋಪಿಗಳ ಪತ್ತೆಗೆ ಸಂಚಾರಿ ಠಾಣೆ ಪಿಎಸ್‌ಐ ರಾಜು, ಭರಮಸಾಗರ ಠಾಣೆ ಪಿಎಸ್‌ಐ ಸುರೇಶ್ ಮತ್ತು ಹೊಳಲ್ಕೆರೆ ಠಾಣೆ ಪಿಎಸ್‌ಐ ಸಚಿನ್ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹೇಶ್ ರೆಡ್ಡಿ, ರಂಗನಾಥ ಕುಮಾರ್, ರುದ್ರೇಶ್, ಅವಿನಾಶ್, ತಿಮ್ಮೇಶ್, ನಿರಂಜನ, ಮಂಜುನಾಥ್, ರಾಘವೇಂದ್ರ, ಸತೀಶ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ತೆಲಂಗಾಣ ರಾಜ್ಯದ ವಿಜಯವಾಡ ಜಿಲ್ಲೆಯ ಭದ್ರಾದಿ ಕೊಟ್ಟಗೋಡಂನಲ್ಲಿ ಆರೋಪಿ ಮಂಜುನಾಥನ ಬಂಧಿಸಿ ಕರೆತಂದಿದ್ದಾರೆ.ಯಶಸ್ವಿ ಕಾರ್ಯಾಚರಣೆ ಮಾಡಿದ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ನಗದು ಬಹುಮಾನ ನೀಡಿರುವುದಾಗಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ದಿನಕರ್ ಇದ್ದರು.