ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ ಜಾನಪದ ಕಲೆ ಯಾವುದೇ ಜಾತಿ, ಮತಗಳ ಬೇಧ ತೊರೆದು ಸಮನ್ವಯ ಸಾಧಿಸುವ ಮೇರು ಸಂಸ್ಕೃತಿ. ಎಲ್ಲ ಜನರನ್ನು ಬಾಂಧವ್ಯದ ಬೆಸುಗೆಯಲ್ಲಿ ಬದುಕುವಂತೆ ಮಾಡುವ ಶಕ್ತಿ ಜಾನಪದ ಸಂಪ್ರದಾಯಕ್ಕಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಜಾನಪದ ಬಾಲಾಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ಜಾನಪದ ಕಲೆ ಯಾವುದೇ ಜಾತಿ, ಮತಗಳ ಬೇಧ ತೊರೆದು ಸಮನ್ವಯ ಸಾಧಿಸುವ ಮೇರು ಸಂಸ್ಕೃತಿ. ಎಲ್ಲ ಜನರನ್ನು ಬಾಂಧವ್ಯದ ಬೆಸುಗೆಯಲ್ಲಿ ಬದುಕುವಂತೆ ಮಾಡುವ ಶಕ್ತಿ ಜಾನಪದ ಸಂಪ್ರದಾಯಕ್ಕಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಜಾನಪದ ಬಾಲಾಜಿ ತಿಳಿಸಿದರು.ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದಲ್ಲಿ ಬೀಬೀ ಫಾತೀಮಾಳ ಹತ್ತು ದಿನಗಳ ಉತ್ಸವದ ನಿಮಿತ್ಯ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ತಾಲೂಕು ಘಟಕದಿಂದ ಬಳೂತಿಯ ಭಾವಿ ಬಸವೇಶ್ವರ ಹೆಜ್ಜೆ ಮೇಳ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ರಿವಾಯತು ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೂ-ಮುಸ್ಲಿಂ ಏಕತೆಯಿಂದ ದೇಶದಲ್ಲಿ ಶಾಂತಿ ನೆಲೆಸುತ್ತದೆ. ರಿವಾಯತ್ ಕಲೆಯ ಮೂಲಕ ಶಾಂತಿ-ಸಹಬಾಳ್ವೆಗೆ ಕಾರಣವಾದ ಬಳೂತಿ ಗ್ರಾಮ ಭಾವೈಕ್ಯತೆಯ ಕಾಶಿಯಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.ನಾಗರದಿನ್ನಿ ಸದಾನಂದ ಮಠದ ತಪೋನಿಧಿ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಧರ್ಮ ಯಾವುದಾದರೇನು ಕರ್ಮ ಮಾತ್ರ ಸತ್ಯದ ಹಾದಿಯಲ್ಲಿರಬೇಕು ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ(ಪಡಗಾನೂರ), ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿದಿದ್ದು ಹಳ್ಳಿಗಳಲ್ಲಿ ಮಾತ್ರ. ಮಠ - ಮಂದಿರಗಳ ಜಾತ್ರೆ, ಉತ್ಸವಗಳ ಮೂಲಕ ಮೂಲ ಜಾನಪದ ಉಳಿದುಕೊಂಡಿದೆ. ರಿವಾಯತ್ ಸಮ್ಮೇಳನದ ಮೂಲಕ ಸಂಶೋಧನೆ ನಡೆಯಬೇಕು ಎಂದು ಹೇಳಿದರು. ಹಿರಿಯ ಜಾನಪದ ಕಲಾವಿದ ಶಂಕರಯ್ಯ ಚಿಕ್ಕಮಠ, ಹಿರಿಯರಾದ ಫೀರನಾಥ ಗಿರಿ ಭಾವಾ, ದುಂಡಪ್ಪ ಬನಗೊಂಡ, ಕಜಾಪ ಕೊಲ್ಹಾರ ತಾಲೂಕಾಧ್ಯಕ್ಷ ಮಲ್ಲಪ್ಪ ಗಣಿ, ಜಿಲ್ಲಾ ಸದಸ್ಯ ಮೌಲಾಸಾಬ ಜಾಹಾಗಿರದಾರ್, ಭೀಮಶಿ ಬೀಳಗಿ ಇದ್ದರು. ಬಿ.ಎಸ್.ಗೌಡರ ನಿರೂಪಿಸಿದರು. ವಿಠ್ಠಲ ಲೋಕಾಪುರ ಸ್ವಾಗತಿಸಿದರು. ಪವಾಡೆಪ್ಪ ಗೊಳಸಂಗಿ ವಂದಿಸಿದರು.