ಹಗರಿಬೊಮ್ಮನಹಳ್ಳಿ: ಜಗತ್ತಿಗೆ ಬೆಳಕು ನೀಡಿರುವ ದಾರ್ಶನಿಕರೆಲ್ಲ ಪುಸ್ತಕ ಸಂಸ್ಕೃತಿಯಿಂದಲೇ ಬೆಳೆದು ಬಂದವರು. ಪುಸ್ತಕ ಸಂಸ್ಕೃತಿಯೇ ಬಸವಣ್ಣ, ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರನ್ನು ವಿಶ್ವಮಾನ್ಯವಾಗಿಸಿದವು. ಪುಸ್ತಕ ಸಂಸ್ಕೃತಿ ಮಕ್ಕಳಲ್ಲೂ ಬೆಳೆಯಬೇಕು ಎಂದು ಪಟ್ಟಣದ ಗಂ.ಭೀ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಹುಲುಗಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಕಡ್ಲಬಾಳು ಗ್ರಾಮದ ಶಾಂತವೀರ ಪ್ರೌಢಶಾಲೆಯಲ್ಲಿ ಮಂಗಳವಾರ ಸಂಜೆ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ಬಸವ, ಗಾಂಧಿ ಮತ್ತು ಅಂಬೇಡ್ಕರ ವಿಚಾರಧಾರೆಯಲ್ಲಿ ಪುಸ್ತಕ ಸಂಸ್ಕೃತಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಲೇಖಕರಾದ ರಸ್ಕಿನ್ ಮತ್ತು ಥೋರೋ ಬರಹಗಳು ಮಹಾತ್ಮ ಗಾಂಧೀಜಿ ಅವರನ್ನು ಪ್ರಭಾವಿಸಿದ ಪರಿಣಾಮ ಅಹಿಂಸೆ ಅವರ ಉಸಿರಾಗುತ್ತದೆ. ಸತ್ಯ ಹರಿಶ್ಚಂದ್ರ ನಾಟಕದಿಂದ ಪ್ರಭಾವಿತರಾದ ಗಾಂಧೀಜಿ ಸತ್ಯದ ಪ್ರತಿಪಾದಕಾರದರು. ಮುಂದಿನ ದಿನಗಳಲ್ಲಿ ಅವರೇ ರಚಿಸಿದ ಸತ್ಯದೊಂದಿಗೆ ನನ್ನ ಆನ್ವೇಷಣೆ ಎಂಬ ಕೃತಿ ಇಂದಿಗೂ ವಿಶ್ವಮಾನ್ಯವಾಗಿದೆ ಎಂದರು.
ಅಂಬೇಡ್ಕರ್ ಬದುಕಿನುದ್ದಕ್ಕೂ ಅಧ್ಯಯನಶೀಲರಾಗಿದ್ದರು. ಅಂಬೇಡ್ಕರ್ ಅವರ ಭಾಷಣಗಳು, ವಿಚಾರಧಾರೆಗಳು ಪುಸ್ತಕಗಳಾಗಿವೆ. ವಿದೇಶದಲ್ಲಿ ಓದಿದ ಅವರ ಹುಟ್ಟುಹಬ್ಬವನ್ನು ವಿಶ್ವಸಂಸ್ಥೆ ವಿಶ್ವ ಜ್ಞಾನದ ದಿನವಾಗಿ ಘೋಷಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ದತ್ತಿ ದಾನಿಗಳ ಕುಟುಂಬದವರಾದ ಅಕ್ಕಿ ಪ್ರಸನ್ನ, ಕಡ್ಡಿ ಮಲ್ಲಿಕಾರ್ಜುನ, ಹುರಕಡ್ಲಿ ಶಿವಕುಮಾರ್, ಮಾತಾ ಗ್ಯಾಸ್ ಲಕ್ಷ್ಮೀನಾರಾಯಣ, ಕೋಡಿಹಳ್ಳಿ ರಾಮಲಿಂಗಪ್ಪ ಅವರನ್ನು ಕಸಾಪದಿಂದ ಸನ್ಮಾನಿಸಲಾಯಿತು.
ಶಾಲೆಯ ಮುಖ್ಯ ಗುರು ಕೆ.ಎಂ.ಜ್ಞಾನೋದಯ ಕಾರ್ಯಕ್ರಮ ಉದ್ಘಾಟಿಸಿದರು. ಪರಿಷತ್ತಿನ ತಾಲೂಕು ಅಧ್ಯಕ್ಷ ಗೂಳಪ್ಪ ಹುಲಿಮನಿ ಅಧ್ಯಕ್ಷತೆ ವಹಿಸಿದ್ದರು.
ಪರಿಷತ್ತಿನ ತಂಬ್ರಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಎಸ್.ವಿ. ಪಾಟೀಲ್, ತಾಲೂಕು ಘಟಕದ ಖಜಾಂಚಿ ಪಿ.ಜಿ. ಪ್ರಹ್ಲಾದ್, ಕಾರ್ಯದರ್ಶಿಗಳಾದ ಬೇಟಿ ಮಾರುತಿ, ಇಟ್ಟಗಿ ಮಂಜುನಾಥ್, ನಿವೃತ್ತ ಬ್ಯಾಂಕ್ ಪ್ರಬಂಧಕ ಗಣೇಶ ರಾವ್ ಹವಾಲ್ದಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ್ ಭಾವಿಕಟ್ಟಿ, ಉಪನ್ಯಾಸಕರಾದ ಎನ್.ಸಾಬುದ್ದೀನ್, ಕೆ.ಹನಮಂತಪ್ಪ ಇದ್ದರು.
ಶಿಕ್ಷಕರಾದ ಮಹಾಂತೇಶ, ಜಗನ್ನಾಥ, ಗುರು ಹಿರೇಮಠ ನಿರ್ವಹಿಸಿದರು.