‘ಕಡಲಾಚೆಯ ರಮ್ಯ ನೋಟ ದುಬಾಯಿ’ ಪುಸ್ತಕ ಲೋಕಾರ್ಪಣೆ

| Published : Mar 07 2025, 12:48 AM IST

ಸಾರಾಂಶ

ಮಂಗಳೂರು ಡಾ. ಮಾಲತಿ ಶೆಟ್ಟಿ ಮಾಣೂರ್ ಸಾರಥ್ಯದ ಸಾಹಿತ್ಯಪರ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ೪೨ನೇ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಮತ್ತು ಲೇಖಕ ದುಬಾಯಿಯ ಬಗ್ಗೆ ಪ್ರಕಟಿತ ಲೇಖನಗಳ ಸಂಕಲನ ‘ಕಡಲಾಚೆಯ ರಮ್ಯ ನೋಟ ದುಬಾಯಿ’ ಕೃತಿ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿತು.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಡಾ. ಮಾಲತಿ ಶೆಟ್ಟಿ ಮಾಣೂರ್ ಸಾರಥ್ಯದ ಸಾಹಿತ್ಯಪರ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ೪೨ನೇ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಮತ್ತು ಲೇಖಕ ದುಬಾಯಿಯ ಬಗ್ಗೆ ಪ್ರಕಟಿತ ಲೇಖನಗಳ ಸಂಕಲನ ‘ಕಡಲಾಚೆಯ ರಮ್ಯ ನೋಟ ದುಬಾಯಿ’ ಕೃತಿ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಲೋಕಾರ್ಪಣೆಗೊಂಡಿತು.

ಯು.ಎ.ಇ. ಬಂಟ್ಸ್ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿಯವರು ಕೃತಿ ಲೋಕಾರ್ಪಣೆಗೊಳಿಸಿ, ದುಬಾಯಿಯಲ್ಲಿ ಕನ್ನಡ ಪುಸ್ತಕವನ್ನು ತನ್ನದೇ ಆದ ಶೈಲಿಯಲ್ಲಿ ರಚಿಸಿ ದುಬಾಯಿಯಲ್ಲಿರುವ ವಾಸ್ತು ಶಿಲ್ಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಅತ್ಯಂತ ಸುಂದರವಾದ ವರ್ಣ ಚಿತ್ರದೊಂದಿಗೆ ಓದುಗರಿಗೆ ಮುಟ್ಟಿಸುವಲ್ಲಿ ಕೃತಿ ಯಶಸ್ವಿಯಾಗಿದೆ ಎಂದರು.

ಕೃತಿಗೆ ಮುನ್ನುಡಿ ಬರೆದಿರುವ ಡಾ. ಅರುಣಾ ನಾಗರಾಜ್, ಕೃತಿಯಲ್ಲಿರುವ ಒಂದೊಂದು ಲೇಖನಗಳು ಸಂಪೂರ್ಣ ಮಾಹಿತಿಯೊಂದಿಗೆ ಓದುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೈಯಲ್ಲಿ ಈ ಒಂದು ಕೃತಿ ಇದ್ದರೆ ಸಮಗ್ರ ದುಬಾಯಿಯನ್ನು ಸಂಪೂರ್ಣವಾಗಿ ಪ್ರವಾಸ ಮಾಡಿಕೊಂಡು ಬಂದಿರುವ ಅನುಭವಾಗುತ್ತದೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರ ಶಿಲ್ಪ ಕಲಾವಿದ, ಕ್ರಿಯಾತ್ಮಕ ಕಲಾನಿರ್ದೇಶಕರು ಹಾಗೂ ಲೇಖಕರಾಗಿರುವ ಬಿ. ಕೆ. ಗಣೇಶ್ ರೈ ಮಾತನಾಡಿ, ಈ ಕೃತಿಯ ಮೊದಲ ಪ್ರತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಗೆ ಅರ್ಪಣೆ ಮಾಡಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಶುಭಾಶೀರ್ವಾದ ಪಡೆದು ಹಾಗೂ ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವರವರಿಂದ ಶುಭ ಸಂದೇಶವನ್ನು ಪಡೆದಿರುವುದು ಹೆಮ್ಮೆತಂದಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಉದ್ಯಮಿ ಸರ್ವೋತ್ತಮ ಶೆಟ್ಟಿಯವರು, ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಗಣೇಶ್ ರೈಯವರು ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಕರ್ನಾಟಕದ ಕಲೆ ಭಾಷೆ ಸಂಸ್ಕೃತಿಯನ್ನು ಕಳೆದ ಎರಡುವರೆ ದಶಕಗಳಿಂದ ನಿರಂತರವಾಗಿ ಮಾಡಿಕೋಡು ಬರುತ್ತಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಇದ್ದರು.

ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಸುರೇಖಾ ನಿರೂಪಿಸಿದರು.