ಪುಸ್ತಕ ಪ್ರೇಮಿಗಳೇ ಕನ್ನಡ ಪುಸ್ತಕ ಮೇಳಕ್ಕೆ ಭೇಟಿ ನೀಡಿ..

| Published : Oct 09 2024, 01:35 AM IST

ಪುಸ್ತಕ ಪ್ರೇಮಿಗಳೇ ಕನ್ನಡ ಪುಸ್ತಕ ಮೇಳಕ್ಕೆ ಭೇಟಿ ನೀಡಿ..
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳದಲ್ಲಿ ಸುಮಾರು 70 ಮಳಿಗೆಗಳಿದ್ದು, 30 ಪ್ರಕಾಶಕರಿದ್ದು, ರಾಜ್ಯದ ಹಲವಾರು ಜಿಲ್ಲೆಗಳಿಂದ ಪ್ರಕಾಶಕರು, ಮಾರಾಟಗಾರರು ಭಾಗವಹಿಸಿದ್ದಾರೆ.

ಎಲ್.ಎಸ್. ಶ್ರೀಕಾಂತ್

ಕನ್ನಡಪ್ರಭ ವಾರ್ತೆ ಮೈಸೂರು

ಪುಸ್ತಕ ಪ್ರೇಮಿಗಳೇ ಕನ್ನಡ ಪುಸ್ತಕ ಮೇಳಕ್ಕೆ ಭೇಟಿ ನೀಡಿ.., ಭಾರೀ ರಿಯಾಯಿತಿ ದರದಲ್ಲಿ ಖರೀದಿಸಿ.., ಕಡೇ ಮೂರು ದಿನಗಳು ಮಾತ್ರ, ಓದುಗರಿಗೆ ಇದೊಂದು ಸುವರ್ಣಾವಕಾಶ..,

ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿಯಿಂದ ಈ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು ಪುಸ್ತಕ ಪ್ರೇಮಿಗಳಿಗಾಗಿಯೇ ಆಯೋಜಿಸಿದ್ದು, ಪುಸ್ತಕಗಳನ್ನು ಖರೀದಿಸಿ, ಓದಿ ಜ್ಞಾನ ವೃದ್ಧಿಸಿಕೊಳ್ಳಲು ಒಂದು ಸುವರ್ಣಾವಕಾಶ ಕಲ್ಪಿಸಿದೆ.

ಅ. 3 ರಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ಉದ್ಘಾಟನೆಗೊಂಡಿರುವ ಪುಸ್ತಕ ಮೇಳಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡಿ ಪುಸ್ತಕ ಖರೀದಿಸಿದ್ದು, ಓದುಗರಿಗಾಗಿಯೇ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಲು ಹಲವು ಪ್ರಕಾಶಕರು, ಮಾರಾಟಗಾರರು ವ್ಯವಸ್ಥೆ ಕಲ್ಪಿಸಿದ್ದಾರೆ.

ಈ ಬಾರಿಯ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳದಲ್ಲಿ ಸುಮಾರು 70 ಮಳಿಗೆಗಳಿದ್ದು, 30 ಪ್ರಕಾಶಕರಿದ್ದು, ರಾಜ್ಯದ ಹಲವಾರು ಜಿಲ್ಲೆಗಳಿಂದ ಪ್ರಕಾಶಕರು, ಮಾರಾಟಗಾರರು ಭಾಗವಹಿಸಿದ್ದಾರೆ.

ಈ ಮೇಳದಲ್ಲಿ ಹೆಸರಾಂತ ಸಾಹಿತಿಗಳ ಕಥೆ, ಕಾದಂಬರಿ, ಮಕ್ಕಳ ಪುಸ್ತಕಗಳು ಮತ್ತಿತರ ಎಲ್ಲ ಪುಸ್ತಕಗಳು ಇಲ್ಲಿ ದೊರೆಯಲಿವೆ.

ಪುಸ್ತಕ ಮೇಳವನ್ನು ಓದುಗರಿಗಾಗಿಯೇ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಿದ್ದಾರೆ. ಸಾಹಿತ್ಯ ಪ್ರಿಯರಿಗೆ ಓದಲು ಅಥವಾ ಉಡುಗೊರೆ ನೀಡಲು ಇದೊಂದು ಒಳ್ಳೆಯ ಅವಕಾಶ. ಪುಸ್ತಕ ಮೇಳದಲ್ಲಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಂಗ, ಸಂವಹನ: ಪ್ರಕಾಶನ, ರೂಪ ಪ್ರಕಾಶನ, ಅಭಿರುಚಿ ಪ್ರಕಾಶನ, ಸಾಗರಿ ಪ್ರಕಾಶನ, ವೇದ ಬುಕ್ ಹೌಸ್, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಚಿಂತನ ಚಿತ್ತಾರ, ಸ್ವಪ್ನ ಬುಕ್ ಹೌಸ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕದಂಬ ಪ್ರಕಾಶನ, ಭಾರತೀ ಪ್ರಕಾಶನ, ಕೇಂದ್ರ ಸಾಹಿತ್ಯ ಅಕಾಡೆಮಿ ಬೆಂಗಳೂರು, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪ ವಿಶ್ವವಿದ್ಯಾನಿಲಯ, ನವ ಕರ್ನಾಟಕ ಪಬ್ಲಿಕೇಶನ್, ಸಾಹಿತ್ಯ ಸ್ಥಂಬ, ಸಾಹಿತ್ಯ ಅಕಾಡೆಮಿ, ಶ್ರೀರಂಗಪಟ್ಟಣದ ಗೋಸಾಯಿ ಪಬ್ಲಿಷರ್ಸ್, ಶ್ರೀ ಕನಕ ಪುಸ್ತಕ ಬಂಡಾರ ಬೆಂಗಳೂರು, ಜನನಿ ಪಬ್ಲಿಕೇಷನ್, ರಾಮಕೃಷ್ಣ- ವಿವೇಕಾನಂದ ಮತ್ತು ವೇದಾಂತ ಸಾಹಿತ್ಯ ಭಂಡಾರ, ಜೆಎಸ್ಎಸ್ ಗ್ರಂಥಮಾಲೆ, ಧಾತ್ರಿ ಪ್ರಕಾಶನ ಮೈಸೂರು ಹೀಗೆ ಹಲವು ಮಳಿಗೆಗಳು ಮೇಳದಲ್ಲಿವೆ.

ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವು ಅ. 11ರವರೆಗೆ ಪ್ರದರ್ಶನವಿರುತ್ತದೆ. ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 8.30ರವರೆಗೆ ತೆರೆದಿರುತ್ತದೆ.

ಒಟ್ಟಾರೆ ದಸರಾ ಮಹೋತ್ಸವದ ಅಂಗವಾಗಿ ಪುಸ್ತಕ ಪ್ರೇಮಿಗಳಿಗಾಗಿ ಒಂದೇ ಸೂರಿನಡಿಯಲ್ಲಿ ಎಲ್ಲ ಪುಸ್ತಕಗಳನ್ನು ಕೊಂಡುಕೊಳ್ಳಲು ಅನುವು ಮಾಡಿಕೊಟ್ಟಿರುವುದಕ್ಕೆ ಪ್ರಕಾಶಕರು ಮತ್ತು ಓದುಗರು ಅಭಿನಂದಿಸಿದ್ದಾರೆ.

ಪುಸ್ತಕ ಪ್ರೇಮಿಗಳು, ಸ್ಥಳೀಯರು, ಪ್ರವಾಸಿಗರು ಈ ಪುಸ್ತಕ ಮೇಳಕ್ಕೆ ಭೇಟಿ ನೀಡಿ ಸಾಹಿತಿಗಳನ್ನು, ಪ್ರಕಾಶಕರನ್ನು ಪ್ರೋತ್ಸಾಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.