ಮಂಗಳೂರು: ಡಾ. ಮಮತಾ ತಿಲಕ್ ರಾವ್ ದತ್ತಿ ನಿಧಿ ಪ್ರಾಯೋಜಿತ ‘ಅಮ್ಮ ಸಾಹಿತ್ಯ ಪ್ರಶಸ್ತಿ’ ಮತ್ತು ‘ಅನನ್ಯ ಸಾಧಕಿ ಪ್ರಶಸ್ತಿ’ ಪ್ರದಾನ ಭಾನುವಾರ ಉರ್ವಸ್ಟೋರ್‌ನ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಸಾಹಿತ್ಯ ಸದನದಲ್ಲಿ ನಡೆಯಿತು.

ಮಂಗಳೂರು: ಡಾ. ಮಮತಾ ತಿಲಕ್ ರಾವ್ ದತ್ತಿ ನಿಧಿ ಪ್ರಾಯೋಜಿತ ‘ಅಮ್ಮ ಸಾಹಿತ್ಯ ಪ್ರಶಸ್ತಿ’ ಮತ್ತು ‘ಅನನ್ಯ ಸಾಧಕಿ ಪ್ರಶಸ್ತಿ’ ಪ್ರದಾನ ಭಾನುವಾರ ಉರ್ವಸ್ಟೋರ್‌ನ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಸಾಹಿತ್ಯ ಸದನದಲ್ಲಿ ನಡೆಯಿತು. ಲೇಖಕಿ ಮತ್ತು ಪ್ರಕಾಶಕಿ ಇಂದಿರಾ ಹಾಲಂಬಿ ಅವರಿಗೆ ಅಮ್ಮ ಸಾಹಿತ್ಯ ಪ್ರಶಸ್ತಿ , ಕೊರಗಾಭಿವೃದ್ಧಿ ಸಂಘಗಳ ಅಧ್ಯಕ್ಷೆ ಸುಶೀಲಾ ನಾಡಗೆ ಅನನ್ಯ ಸಾಧಕೀಯ ಪ್ರಶಸ್ತಿ ಹಾಗೂ ಬಾಗಲಕೋಟೆ ಇಳಕಲ್ ತಾಲೂಕಿನ ಕವಯತ್ರಿ ಮರ್ತುಜಾ ಬೇಗಮ್‌ಗೆ 2025 -26 ನೇ ಸಾಲಿನ ಚಂದ್ರಭಾಗಿ ರೈ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.‘ಟೀಚರ್‌’ ಶೈಕ್ಷಣಿಕ ಪತ್ರಿಕೆ ಸಂಪಾದಕ ಉದಯ ಗಾಂವ್ಕರ್‌ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿ, ಒಂದು ತಲೆಮಾರಿನ ನಾಗರಿಕತೆಯ ಸಂಸ್ಕೃತಿಯನ್ನು ಕೃತಿಯ ರೂಪದಲ್ಲಿ ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು. ಸಂಬಂಧಗಳನ್ನು ಸೃಷ್ಟಿಸಿಕೊಳ್ಳುವ ಮುಖೇನ ಇದನ್ನು ಸಾಧಿಸಬಹುದು ಎಂದು ಹೇಳಿದರು.

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಸೌಮ್ಯಾ ಹೇರಿಕುದ್ರು ಮಾತನಾಡಿ, ಇಂದು ಪುರುಷ ಪ್ರಧಾನ ಮನಸ್ಥಿತಿಯಿಂದಾಗಿ ಸಮಾಜದಲ್ಲಿ ಪ್ರಾಬಲ್ಯ ಸಾಧಿಸುವ ಪ್ರಯತ್ನಗಳು ನಡೆಯುತ್ತಿವೆ. ಮಾತೃ ಹೃದಯದ ವ್ಯಕ್ತಿಗಳಿಂದ ಮಾತ್ರ ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಡಾ.ಮಮತಾ ತಿಲಕ್‌ ರಾವ್‌ ಮುಂಬಯಿ ಪ್ರಾಸ್ತಾವಿಕ ಮಾತನಾಡಿದರು. ರತ್ನಾವತಿ ಜೆ.ಬೈಕಾಡಿ ಆಶಯ ಗೀತೆ ಹೇಳಿದರು. ಸಾವಿತ್ರಿ ಪೂರ್ಣಚಂದ್ರ ನಿರೂಪಿಸಿದರು.ಲೇಖಕಿ, ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಸಮನ್ವತೆಯಲ್ಲಿ ‘ಗಿರಿವಾಸಿನಿಯ ಮರುದನಿ’ ಸಂವಾದ ಏರ್ಪಟ್ಟಿತು.