ಜ್ಞಾನ ವಿಕಸನಕ್ಕೆ ಪುಸ್ತಕ ಅಧ್ಯಯನ ಸಹಕಾರಿ

| Published : Aug 21 2024, 12:34 AM IST

ಸಾರಾಂಶ

ಜ್ಞಾನಾರ್ಜನೆ ಸುಲಭವಾಗಿ ದೊರೆಯುವ ವಸ್ತುವಲ್ಲ, ಏಕಾಗ್ರತೆ, ಗುರು ಹಿರಿಯರ ಅನುಭವದ ಮಾತು, ಒಳ್ಳೆಯ ಕೃತಗಳನ್ನು ಓದುವುದರಿಂದ ಜ್ಞಾನ ಸಂಪಾದನೆ ಮಾಡಬಹುದು. ಉಪಯಕ್ತ ಪುಸ್ತಕಗಳನ್ನು ಓದಿದಲ್ಲಿ ಬದುಕನ್ನು ಸುಂದರವಾಗಿಸಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಶಾಲಾ ಕಾಲೇಜು ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜೊತೆಗೆ ಮೌಲ್ಯಯುತ ಬದುಕಿಗೆ ಸಹಕಾರಿ ಅಗಬಲ್ಲ ಉತ್ತಮವಾದ ವಿಷಯಗಳನ್ನು ಒಳಗೊಂಡ ಕೃತಿಗಳನ್ನು ಅಧ್ಯಯನ ಮಾಡುವುದರಿಂದ ಜ್ಞಾನ ವಿಕಸನವಾಗುತ್ತದೆ ಎಂದು ವಕೀಲ ಬಿ.ಸಿ.ಪರಮೇಶ್ವರ ಸಲಹೆ ನೀಡಿದರು.ಮನ್ವಂತರ ಪ್ರಕಾಶನ, ಕೋಲಾರ ಇವರಿಂದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜ್ಞಾನ ವಿಕಾಸ ಅಭಿಯಾನ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರವನ್ನು ವಿದ್ಯಾರ್ಥಿಗಳಿಗೆ ಪುಸ್ತಕ ನೀಡುವ ಮೂಲಕ ಉದ್ಘಾಟಿಸಿ ಜ್ಞಾನಾರ್ಜನೆ ಸುಲಭವಾಗಿ ದೊರೆಯುವ ವಸ್ತುವಲ್ಲ, ಏಕಾಗ್ರತೆ, ಗುರು ಹಿರಿಯರ ಅನುಭವದ ಮಾತು, ಒಳ್ಳೆಯ ಕೃತಗಳನ್ನು ಓದುವುದರಿಂದ ಜ್ಞಾನ ಸಂಪಾದನೆ ಮಾಡಬಹುದೆಂದು ಸೂಚ್ಯವಾಗಿ ತಿಳಿಸಿದರು.ಉಪಯುಕ್ತ ಕೃತಿಗಳ ಓದಿ

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅ‍ವರು, ವಿದ್ಯಾಭ್ಯಾಸ ನಂತರ ತಾವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದಿಂದ ವೈಯುಕ್ತಿಕ ಲಾಭದ ಜೊತೆಗೆ ತಮ್ಮ ತಂದೆ, ತಾಯಿ, ಗುರು,ಹಿರಿಯರ ಮತ್ತು ನೆಲದ ಋಣ ತೀರಿಸಲು ಪ್ರಯೋಜನವಾಗಬೇಕು. ಮೊಬೈಲ್ ಬಳಕೆಯಿಂದ ನಿಮ್ಮ ಜ್ಞಾನ ವಿಕಾಸಕ್ಕಿಂತ ವಿನಾಶಕ್ಕೆ ದಾರಿಯಾಗುತ್ತದೆ, ಇದಕ್ಕೆ ಬದಲು ಉಪಯಕ್ತ ಪುಸ್ತಕಗಳನ್ನು ಓದಿದಲ್ಲಿ ಬದುಕನ್ನು ಸುಂದರವಾಗಿಸಿಕೊಳ್ಳಬಹುದೆಂದು ಅಭಿಪ್ರಾಯಿಸಿದರು.

ಮೊಬೈಲ್‌ ಬಳಕೆ ಕಡಿಮೆ ಮಾಡಿ

ನವಚೇತನ ಪಿಯು ಕಾಲೇಜಿನ ಪ್ರಾಂಶುಪಾಲ ವೆಂಕಟಸುಬ್ಬಯ್ಯ ಮಾತನಾಡಿ, ಜ್ಞಾನ ವಿಕಾಸ ಅಭಿಯಾನದಿಂದ ವಿದ್ಯಾರ್ಥಿಗಳು ಮತ್ತು ಯುವ ಜನತೆಗೆ ಉಪಯೋಗವಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ಆ.೨ರಂದು ಮನ್ವಂತರ ಪ್ರಕಾಶನದಿಂದ ನಡೆದ ಜ್ಞಾನ ವಿಕಾಸ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಕಾಲೇಜಿನ ಗ್ರಂಥಾಲಯಕ್ಕೆ ಬಂದು ಸಾಹಿತ್ಯ ಮತ್ತು ಸಂಸ್ಕೃತಿ, ಇತಿಹಾಸ, ವೈಚಾರಿಕತೆ, ಮಹನೀಯರ ಆದರ್ಶ, ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಪಡೆದುಕೊಳ್ಳುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.ಮನ್ವಂತರ ಪ್ರಕಾಶನ ಅಧ್ಯಕ್ಷ ಪಾ.ಶ್ರೀ.ಅನಂತರಾಮ್, ಕಾಲೇಜಿನ ಪ್ರಾಂಶುಪಾಲ ಶಂಕರಪ್ಪ, ಕನ್ನಡ ಉಪನ್ಯಾಸಕರಾದ ಗಣೇಶ್, ಗಣಿತ ಪ್ರಾಧ್ಯಾಪಕ ಮಂಜುನಾಥ್, ವಿಜ್ಞಾನ ಉಪನ್ಯಾಸಕ ನಂಜುಂಡಪ್ಪ, ಶಿಕ್ಷಕರಾದ ಪೋಟ್ಲಾ ಸುಜಾತಾ, ಕೆ.ಎಂ.ಲಲಿತಾ, ಮತ್ತಿತರರು ಉಪಸ್ಥಿತರಿದ್ದರು.