ಅತ್ಯಂತ ಕಡಿಮೆ ಸಂಭಾವನೆ ಪಡೆದು ಗ್ರಾಮೀಣ ಪ್ರದೇಶದ ಜನರಿಗೆ ಪುಸ್ತಕಗಳು ಹಾಗೂ ಪತ್ರಿಕೆಗಳ ಮೂಲಕ ಜ್ಞಾನದ ಸುಧೆ ಉಣ ಬಡಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ಸಮಾಜಮುಖಿ ಕಾರ್ಯವು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪುಸ್ತಕಗಳು ಜ್ಞಾನದ ದೀವಿಗೆಗಳು. ಶಾಲಾ ಮಕ್ಕಳು ಹಾಗೂ ಯುವ ಜನರಿಗೆ ಜ್ಞಾನಾಮೃತ ಉಣಿಸಿ ಮುನ್ನಡೆಸುವ ಆತ್ಮೀಯ ಬಂಧುಗಳಾಗಿವೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಗ್ರಂಥಾಲಯ ಮೇಲ್ವಿಚಾರಕರ ಸಂಘವು ಆಯೋಜಿಸಿದ್ದ ವಯೋ ನಿವೃತ್ತಿ ಹೊಂದಿದ ಗ್ರಂಥಾಲಯ ಮೇಲ್ವಿಚಾರಕರಿಗೆ ಬೀಳ್ಕೊಡುಗೆ, ಗ್ರಂಥಾಲಯ ಸಪ್ತಾಹ ಹಾಗೂ ಪುಸ್ತಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಅತ್ಯಂತ ಕಡಿಮೆ ಸಂಭಾವನೆ ಪಡೆದು ಗ್ರಾಮೀಣ ಪ್ರದೇಶದ ಜನರಿಗೆ ಪುಸ್ತಕಗಳು ಹಾಗೂ ಪತ್ರಿಕೆಗಳ ಮೂಲಕ ಜ್ಞಾನದ ಸುಧೆ ಉಣ ಬಡಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ಸಮಾಜಮುಖಿ ಕಾರ್ಯವು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ ಎಂದರು.

ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಗ್ರಾಪಂ ಕೇಂದ್ರಗಳ ಗ್ರಂಥಾಲಯಗಳ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಪುಸ್ತಕಗಳು ಹಾಗೂ ದಿನ ಪತ್ರಿಕೆಗಳನ್ನು ಉಚಿತವಾಗಿ ಓದಲು ನೀಡಿ ಪುಸ್ತಕ ಅಭಿರುಚಿ ಮೂಡಿಸುವ ಜೊತೆಗೆ ಗ್ರಾಮೀಣ ಪ್ರದೇಶದ ಯುವ ಜನರು ಹಾಗೂ ರೈತಾಪಿ ವರ್ಗದ ಜನರಿಗೆ ಜ್ಞಾನದ ಸುಧೆ ಉಣ ಬಡಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ಕಾರ್ಯವು ಎಲ್ಲರೂ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.

ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಯುವಜನರು ಮೊಬೈಲ್ ಫೋನಿಗೆ ಮಾರುಹೋಗಿ ಪುಸ್ತಕ ಓದುವ ಸಂಸ್ಕೃತಿ ಮರೆಯುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಗಟ್ಟಿಯಾಗಿ ನಿಂತು ಪುಸ್ತಕಗಳನ್ನು ಓದುವಂತೆ ಮನವೊಲಿಸಿ ಪ್ರೇರೇಪಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರರು ನೈಜ ಕನ್ನಡಿಗರಾಗಿದ್ದಾರೆ ಎಂದು ಹೇಳಿದರು.

ಇದೇ ವೇಳೆ ನಿವೃತ್ತ ಗ್ರಂಥಾಲಯ ಮೇಲ್ವಿಚಾರಕ ಅಘಲಯ ವೇದಮೂರ್ತಿ, ಭಾರತೀಪುರ ಪರಮೇಶ್ವರ ಹಾಗೂ ಶೀಳನೆರೆ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಿದರು. ತಾಪಂ ಇಒ ಕೆ.ಸುಷ್ಮ, ಲೆಕ್ಕಾಧಿಕಾರಿ ಶ್ರೀನಿವಾಸ್, ತಾಲೂಕು ಗ್ರಂಥಾಲಯ ಮೇಲ್ವಿಚಾರಕರ ಸಂಘದ ಅಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಎಸ್.ಆರ್. ಪ್ರಭಾಕರ್ ಹಾಗೂ ಉಪಾಧ್ಯಕ್ಷೆ ಸುಧಾ, ತಾಲೂಕಿನ ವಿವಿಧ ಗ್ರಾಪಂ ಗ್ರಂಥಾಲಯಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.

ಶಿಕ್ಷಕರೇ, ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗಿ ಬೋಧನೆಯಲ್ಲಿ ತೊಡಗಿ: ಕೆ.ಬಿ.ಚಂದ್ರಶೇಖರ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗಿ ಶಿಕ್ಷಕರು ಪಾಠ- ಪ್ರವಚನಗಳ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕರೆ ನೀಡಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶಾಲೆಗಳ ಶಿಕ್ಷಕರಿಗೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ತಮ್ಮ ಮಕ್ಕಳು ಅಕ್ಷರದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಧನೆ ಮಾಡಬೇಕು ಎಂಬ ಆಸೆಯೂ ಪೋಷಕರಲ್ಲಿ ಸಾಮಾನ್ಯವಾಗಿದೆ ಎಂದರು.ಈ ಹಿಂದೆ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಕೈ ತೊಳೆದುಕೊಳ್ಳುತ್ತಿದ್ದ ಪೋಷಕರು ಇಂದು ತಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದುಕೊಂಡು ವೈದ್ಯರು, ಇಂಜಿನಿಯರ್ ಗಳು ಸೇರಿದಂತೆ ಒಳ್ಳೆಯ ಹುದ್ದೆಗಳನ್ನು ಅಲಂಕರಿಸಿ ಸಾಧಕರಾಗಬೇಕು ಎಂಬ ಕನಸನ್ನು ಹೊತ್ತು ಲಕ್ಷಾಂತರ ರುಪಾಯಿ ಹಣವನ್ನು ನೀರಿನಂತೆ ಖರ್ಚು ಮಾಡಿ ಶಿಕ್ಷಣ ಕೊಡಿಸುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಗುರಿ ಮುಟ್ಟಲು ಅರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಡಾ.ಪ್ರಜ್ವಲ್ ಮಾತನಾಡಿ, ಶಿಕ್ಷಕರು ಪ್ರತಿನಿತ್ಯವೂ ಹೊಸ ಹೊಸ ವಿಚಾರಗಳನ್ನು ಓದಿ ಅರ್ಥ ಮಾಡಿಕೊಂಡು ತಮ್ಮ ಬೋಧನಾ ಸಾಮರ್ಥ್ಯ ಹೆಚ್ಚಿಸಿಕೊಂಡು ಪಾಠ- ಪ್ರವಚನಗಳಲ್ಲಿ ತೊಡಗಬೇಕು. ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಿ ಮಕ್ಕಳ ಯಶಸ್ಸು ಹಾಗೂ ಕೀರ್ತಿಗೆ ಪೂರಕವಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡು ಕೆಲಸ ಮಾಡಿ ಎಂದು ತಿಳಿಸಿದರು.ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್. ನೀಲಕಂಠ, ಪಾಂಡವಪುರ ತಾಲೂಕು ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಹಿರಿಯ ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್ ಇದ್ದರು.