ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಮೊಬೈಲ್ ಬಂದ ಬಳಿಕ ಪುಸ್ತಕಗಳು ನಿದ್ರಿಸುತ್ತಿವೆ. ಯುವಕ, ಯುವತಿಯರು ಸೇರಿದಂತೆ ಮಕ್ಕಳಲ್ಲಿ ಪುಸ್ತಕ ಓದುವಿಕೆ ಕಡಿಮೆಯಾಗುತ್ತಿದೆ ಎಂದು ರೈತಕವಿ ದೊಡ್ಡರಸಿನಕೆರೆ ದೊ.ಚಿ.ಗೌಡ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಹರಳಹಳ್ಳಿಯ ಅಂಕೇಗೌಡರ ಪುಸ್ತಕ ಮನೆಯಲ್ಲಿ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನಮ್ಮ ನಡೆ ಗ್ರಂಥಾಲಯದ ಕಡೆ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯುವ ಸಮುದಾಯ, ಮಕ್ಕಳಿಗೆ ಸಂಸ್ಕೃತ ಹಾಗೂ ಸಮಾಜದಲ್ಲಿ ಆರೋಗ್ಯಕರ ಮನಸ್ಸುಗಳು ಬೆಳೆಯಬೇಕಾದರೆ ಪುಸ್ತಕಗಳನ್ನು ಓದಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ವಿದ್ಯಾರ್ಥಿಗಳು ಸೇರಿ ಎಲ್ಲರು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಂತು ತಮ್ಮ ಪ್ರಠ್ಯಕ್ರಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬಿಟ್ಟರೆ ಅದರಿಂದಾಚೆಗೆ ಯಾವ ಪುಸ್ತಕಗಳನ್ನು ಓದುತ್ತಿಲ್ಲ. ಇದರಿಂದ ಮಕ್ಕಳಲ್ಲಿ ಪ್ರಾಪಂಚಿಕ ಜ್ಞಾನ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಪ್ರಾಪಂಚಿಕ ಜ್ಞಾನ ತಿಳಿಯಬೇಕಾದರೆ ಪುಸ್ತಕಗಳನ್ನು ಓದಬೇಕು ಎಂಬುದಾಗಿ ಅಂಬೇಡ್ಕರ್ ಅವರೇ ಹೇಳಿದ್ದಾರೆ. ಹೆಚ್ಚಾಗಿ ಪುಸ್ತಕ ಓದುವುದರಿಂದ ಜ್ಞಾನದ ಜತೆಗೆ ಸಂಸ್ಕಾರ, ಸಂಸ್ಕೃತಿ, ಸಂಬಂಧಗಳು ಸಹ ವೃದ್ದಿಸತ್ತವೆ ಎಂದರು.
ಪುಸ್ತಕಗಳಿಗೂ ನಮಗೂ ತಾಯಿ-ಮಗುವಿನ ಸಂಬಂಧದಂತೆ ಇರಬೇಕು. ಮಕ್ಕಳು ಅತ್ತರೆ ತಾಯಿ ಹಾಲು ಕುಡಿಸುತ್ತಾಳೆ. ಮನಸ್ಸಿಗೆ ನೋವಾದರೆ ನಾವು ಪುಸ್ತಕಗಳನ್ನು ಓದುತ್ತೇವೆ. ನಮ್ಮ ಹುಟ್ಟಿನಿಂದ ಕೊನೆ ತನಕವೂ ಪುಸ್ತಕಗಳು ನಮ್ಮೊಡನೆ ಇರುತ್ತವೆ ಎಂದರು.ಮೈಸೂರು ವಿವಿ ಗ್ರಂಥಾಲಯದ ಹಿರಿಯ ಪ್ರಾಧ್ಯಾಪಕ ಡಾ.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಗ್ರಂಥಾಲಯಗಳಿಗೆ ಹೋಗಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯಗಳಲ್ಲಿ ಎಲ್ಲಾ ರೀತಿಯ ಪುಸ್ತಕಗಳು ಇರುವುದರಿಂದ ಮಕ್ಕಳು ಸೇರಿದಂತೆ ಎಲ್ಲರ ಜ್ಞಾನ ಹೆಚ್ಚಾಗಲಿದೆ ಎಂದು ತಿಳಿಸಿದರು.
ಹರಳಹಳ್ಳಿ ಅಂಕೇಗೌಡರ ಪುಸ್ತಕ ಮನೆಯಲ್ಲಿ ಎಲ್ಲಾ ರೀತಿಯ ಪುಸ್ತಕಗಳಿವೆ. ಈ ಗ್ರಂಥಾಲಯ ಲಿಮ್ಕಾ ದಾಖಲೆಗೂ ಸಹ ಸೇರಿದೆ. ಆದರೆ, ಇಲ್ಲಿಗೆ ಬಂದು ಪುಸ್ತಕ ಓದುವವರ ಸಂಖ್ಯೆಯೇ ಕಡಿಮೆಯಾಗಿದೆ ಎಂದು ವಿಷಾದಿಸಿದರು.ಪುಸ್ತಕ ಪ್ರೇಮಿ ಅಂಕೇಗೌಡ ಮಾತನಾಡಿ, ವ್ಯಕಿತ್ವವನ್ನು ವಿಕಾಸನಗೊಳಿಸುವಂತಹ ಪ್ರಸ್ತಕಗಳನ್ನು ಆಯ್ಕೆ ಮಾಡಿಕೊಂಡು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದರು.
ನಾವು ಕೆಲಸಕ್ಕೆ ಬಾರದ ಪುಸ್ತಕಗಳನ್ನು ಓದಿ ಸಮಯ ವ್ಯರ್ಥ ಮಾಡುವುದನ್ನು ಬಿಡಬೇಕು. ಜತೆಗೆ ಮನಸ್ಸು, ಹೃದಯಕ್ಕೆ ಪ್ರಚೋದನೆ ನೀಡುವ ಪುಸ್ತಕಗಳನ್ನು ಓದಬಾರದರು. ಮಹಾತ್ಮಗಾಂಧಿಜೀ ಅವರು ಒಂದು ಪುಸ್ತಕವನ್ನು ಓದಿ ತಮ್ಮ ಜೀವನವನ್ನೇ ಬದಲಾಯಿಸಿಕೊಂಡರು ಎಂದರು.ಪುಸ್ತಕಗಳಲ್ಲಿ ಹಲವಾರು ಜ್ಞಾನಿ, ವಿಜ್ಞಾನಿಗಳ ಜ್ಞಾನದ ಸಾರಾಂಸಗಳು ಅಡಗಿರುತ್ತವೆ. ಅಂತಕ ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಓದಬೇಕು. ಸಾಹಿತ್ಯದ ಜತೆಗೆ ಹಳೇಗನ್ನಡ ಸಾಹಿತ್ಯಗಳನ್ನು ಅಧ್ಯಾಯನ ಮಾಡಬೇಕು ಎಂದರು.
ಇದೇ ವೇಳೆ ಲಿಮ್ಕಾ ಪ್ರಶಸ್ತಿಗೆ ಸೇರಿರುವ ಪುಸ್ತಕ ಪ್ರೇಮಿ ಅಂಕೇಗೌಡ ಅವರನ್ನು ಅಭಿನಂಧಿಸಲಾಯಿತು. ಶಂಭುಲಿಂಗೇಗೌಡ ಶಿಕ್ಷಣ ಸಂಸ್ಥೆ ಕಾರ್‍ಯದರ್ಶಿ ಪ್ರೊ.ಎಂ.ಪಂಚಲಿಂಗೇಗೌಡ ನಿವೃತ್ತ ಗ್ರಂಥಪಾಲಕ ಜೆ.ಸ್ವಾಮಿ, ಪ್ರಾಂಶುಪಾಲ ಡಾ.ಶ್ರೀಕಾಂತ್, ಸಂಯೋಜಕ ಗಿರೀಶ್, ಕಾಳೇಗೌಡ, ಡಾಮಡಹಳ್ಳಿ ಸ್ವಾಮೀಗೌಡ ಸೇರಿದಂತೆ ಹಲವರು ಇದ್ದರು.