ಪ್ರವಾಸೋದ್ಯಮ- ಕೈಗಾರಿಕೋದ್ಯಮ ಎರಡಕ್ಕೂ ಉತ್ತೇಜನ

| Published : Aug 01 2025, 12:30 AM IST

ಪ್ರವಾಸೋದ್ಯಮ- ಕೈಗಾರಿಕೋದ್ಯಮ ಎರಡಕ್ಕೂ ಉತ್ತೇಜನ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ- ಧಾರವಾಡ. ಇದು ರಾಜ್ಯದ ಎರಡನೆಯ ದೊಡ್ಡ ನಗರ, ವಾಣಿಜ್ಯನಗರಿ ಎನಿಸಿಕೊಂಡಿದೆ. ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಇಲ್ಲಿದೆ. ದೇಶದ ಹಲವು ರಾಜ್ಯಗಳಿಗೆ ಇಲ್ಲಿಂದ ರೈಲು ಸಂಪರ್ಕ ಸೇವೆ ಲಭ್ಯ. ಪುಣೆ- ಬೆಂಗಳೂರು, ಹೊಸಪೇಟೆ- ಅಂಕೋಲಾ, ಹುಬ್ಬಳ್ಳಿ- ಸೊಲ್ಲಾಪುರ ಹೆದ್ದಾರಿ ಹೀಗೆ ಸಾರಿಗೆ ಸಂಪರ್ಕವೂ ಸಾಕಷ್ಟಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಬಹುಬೇಡಿಕೆ ಹಾಗೂ ಬಹುನಿರೀಕ್ಷಿತ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಅನುಷ್ಠಾನದಿಂದ ಕರಾವಳಿ ಹಾಗೂ ಬಯಲುಸೀಮೆ ನಡುವೆ ಸಂಪರ್ಕ ಸಲೀಸಾಗುತ್ತದೆ. ಜತೆಜತೆಗೆ ಕೈಗಾರಿಕಾ ಕಾರಿಡಾರ್‌ಗೆ ಮತ್ತಷ್ಟು ಬೂಸ್ಟ್‌ ನೀಡಿದಂತಾಗಿದೆ. ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ನೀಡಲು ಸಹಕಾರಿಯಾಗುತ್ತದೆ. ಕರಾವಳಿ ಹಾಗೂ ಉತ್ತರ ಕರ್ನಾಟಕ ಎರಡು ಅಭಿವೃದ್ಧಿಯಲ್ಲಿ ಜತೆಗೆ ಹೆಜ್ಜೆ ಹಾಕಬಹುದು.

ಉದ್ಯಮಕ್ಕೆ ಉತ್ತೇಜನ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ- ಧಾರವಾಡ. ಇದು ರಾಜ್ಯದ ಎರಡನೆಯ ದೊಡ್ಡ ನಗರ, ವಾಣಿಜ್ಯನಗರಿ ಎನಿಸಿಕೊಂಡಿದೆ. ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಇಲ್ಲಿದೆ. ದೇಶದ ಹಲವು ರಾಜ್ಯಗಳಿಗೆ ಇಲ್ಲಿಂದ ರೈಲು ಸಂಪರ್ಕ ಸೇವೆ ಲಭ್ಯ. ಪುಣೆ- ಬೆಂಗಳೂರು, ಹೊಸಪೇಟೆ- ಅಂಕೋಲಾ, ಹುಬ್ಬಳ್ಳಿ- ಸೊಲ್ಲಾಪುರ ಹೆದ್ದಾರಿ ಹೀಗೆ ಸಾರಿಗೆ ಸಂಪರ್ಕವೂ ಸಾಕಷ್ಟಿದೆ. ಜತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣವೂ ಮೇಲ್ದರ್ಜೆಗೇರುತ್ತಿದ್ದು, ಅಂತಾರಾಷ್ಟ್ರೀಯ ನಿಲ್ದಾಣ ಶೀಘ್ರವೇ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಮುಂಬೈ- ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಇದೇ ಮಾರ್ಗದಲ್ಲಿ ಬರುವುದರಿಂದ ಇತ್ತೀಚಿಗೆ ಕೈಗಾರಿಕೆಗಳು ಸಣ್ಣದಾಗಿ ತಲೆ ಎತ್ತುತ್ತಿವೆ. ಬಂಡವಾಳ ಹೂಡಲು ಉದ್ಯಮಿಗಳು ಆಸಕ್ತಿ ತೋರುತ್ತಿರುವುದು ಇತ್ತೀಚಿನ ಆರೋಗ್ಯಕರ ಬೆಳವಣಿಗೆ. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗವಾದರೆ ಈ ಭಾಗದಿಂದ ಅಲ್ಲಿಗೆ ರೈಲು ಸಂಪರ್ಕ ನೇರವಾಗುತ್ತದೆ. ಇದರಿಂದ ಉದ್ಯಮಿಗಳನ್ನು ಆಕರ್ಷಿಸಲು ಹೆಚ್ಚು ಸಹಕಾರಿಯಾಗುತ್ತದೆ. ಏಕೆಂದರೆ ಬೇಲೇಕೇರಿ ಬಂದರು, ತದಡಿ ಬಂದರುಗಳು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬರುವುದರಿಂದ ಈ ಮಾರ್ಗ ಹೆಚ್ಚು ಉಪಯುಕ್ತವಾಗುತ್ತವೆ. ಜತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟ ಸಿಬರ್ಡ್‌ ನೌಕಾನೆಲೆಗೆ, ಕೈಗಾ ಪರಮಾಣು ವಿದ್ಯುತ್‌ ಸ್ಥಾವರ ಯೋಜನೆಗೆ ಕಲ್ಲಿದ್ದಲು, ತೈಲ, ಉಕ್ಕು, ಕೃಷಿ ಉತ್ತನ್ನ, ಯಂತ್ರ- ಸಾಮಗ್ರಿಗಳ ಕಚ್ಚಾ ವಸ್ತುಗಳ ಸಾಗಾಟಕ್ಕೆ ಹೆಚ್ಚೆಚ್ಚು ಅನುಕೂಲವಾಗಲಿದೆ. ಈ ಮೂಲಕ ಅತ್ತ ಕರಾವಳಿ ಇತ್ತ ಬಯಲುಸೀಮೆ ಎರಡು ಕಡೆಗಳಲ್ಲಿ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬುದು ಹೋರಾಟಗಾರರ ಅಂಬೋಣ.

ಪ್ರವಾಸೋದ್ಯಮಕ್ಕೆ ಬೂಸ್ಟ್‌: ಇನ್ನು ಉತ್ತರ ಕನ್ನಡ ಜಿಲ್ಲೆ ಎಂದರೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗೆ. ಮುರುಡೇಶ್ವರ, ಗೋಕರ್ಣ, ಸಹಸ್ರಲಿಂಗ ಹೀಗೆ ಸಾಲು ಸಾಲು ಪ್ರೇಕ್ಷಣೀಯ ಸ್ಥಳಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ. ಅಂದಾಜಿನ ಪ್ರಕಾರ 175ಕ್ಕೂ ಹೆಚ್ಚು ಪ್ರವಾಸಿ ತಾಣಗಳು ಇಲ್ಲಿವೆ ಎಂದು ಹೇಳಲಾಗುತ್ತದೆ. ಹಿಂದೆ ಅಂದರೆ 1896ರಲ್ಲಿ ನೋಬಲ್‌ ಪುರಸ್ಕೃತ ಕವಿ ರವೀಂದ್ರನಾಥ ಟ್ಯಾಗೋರ್‌ ಅವರು ಇಲ್ಲಿಗೆ ಭೇಟಿ ನೀಡಿದಾಗ ಉತ್ತರ ಕನ್ನಡ ಎಂದರೆ ಸ್ವಿಡ್ಜ್‌ರ್ಲ್ರ್ಯಾಂಡ್‌ಗೆ ಹೋಲಿಸಿದ್ದರು. ಅದು ಅವರ ಕೃತಿಯಲ್ಲಿ ಉಲ್ಲೇಖವಿದೆ. ಇಂತಹ ಪ್ರವಾಸಿತಾಣಗಳ ಬೀಡು ಎನಿಸಿರುವ ಉತ್ತರ ಕನ್ನಡ ಜಿಲ್ಲೆಗೆ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದಿಂದ ರಸ್ತೆ ಮಾರ್ಗವಷ್ಟೇ ಈಗಿರುವ ಸೌಲಭ್ಯ. ಒಂದು ಬಸ್‌ನಲ್ಲಿ ಹೋಗಬೇಕು. ಇಲ್ಲವೇ ಸ್ವಂತ ವಾಹನವನ್ನೇ ತೆಗೆದುಕೊಂಡು ಹೋಗಬೇಕು. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗವಾದರೆ ಈ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನು ಸಲೀಸಾಗಿ ತಲುಪಬಹುದು. ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

ಸಹಜವಾಗಿಯೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಿಂದ ಪ್ರವಾಸೋದ್ಯಮ ಮತ್ತಷ್ಟು ಬೆಳೆಯುತ್ತದೆ. ಆದಕಾರಣ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಆಗುವುದು ಅತ್ಯವಶ್ಯ ಎಂಬುದು ಹೋರಾಟಗಾರರ ಅಭಿಪ್ರಾಯ.

ಒಟ್ಟಿನಲ್ಲಿ ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗ ನಿರ್ಮಾಣದಿಂದ ಅತ್ತ ಕೈಗಾರಿಕೋದ್ಯಮ- ಪ್ರವಾಸೋದ್ಯಮ ಎರಡೆರಡು ಜತೆ ಜತೆಗೆ ಹೆಜ್ಜೆ ಹಾಕುತ್ತವೆ. ಯೋಜನೆ ಬಯಲು ಸೀಮೆ ಹಾಗೂ ಕರಾವಳಿ ಭಾಗದ ಸಂಪರ್ಕ ಕೊಂಡಿಯಾಗುವುದರೊಂದಿಗೆ ಅಭಿವೃದ್ಧಿಗೆ ಪೂರಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ.