ಬಹು ನಿರೀಕ್ಷಿತ ಬಾರ್ಡರ್-2 ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರತಂಡದ ದಂಡೇ ಕಾರವಾರದ ಐತಿಹಾಸಿಕ ಕದಂಬ ನೌಕಾನೆಲೆಗೆ ಭೇಟಿ ನೀಡಿದೆ.
ಕನ್ನಡಪ್ರಭ ವಾರ್ತೆ ಕಾರವಾರ
ಗಣರಾಜ್ಯೋತ್ಸವದ ಸಂಭ್ರಮಕ್ಕೂ ಮುನ್ನವೇ ಕಾರವಾರದ ಕಡಲತೀರದಲ್ಲಿ ದೇಶಭಕ್ತಿಯ ಅಲೆ ಎದ್ದಿದೆ. ಬಹು ನಿರೀಕ್ಷಿತ ಬಾರ್ಡರ್-2 ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರತಂಡದ ದಂಡೇ ಕಾರವಾರದ ಐತಿಹಾಸಿಕ ಕದಂಬ ನೌಕಾನೆಲೆಗೆ ಭೇಟಿ ನೀಡಿದೆ. ಜನವರಿ 23, 2026ರಂದು ತೆರೆಕಾಣಲಿರುವ ಈ ಚಿತ್ರದ ಪ್ರಚಾರ ಮತ್ತು ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಬಾಲಿವುಡ್ ತಾರೆಯರು ಬುಧವಾರ ನೌಕಾನೆಲೆಗೆ ಭೇಟಿ ನೀಡಿದರು.ಚಿತ್ರದ ಪ್ರಮುಖ ನಟರಾದ ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ಬುಧವಾರ ಸಂಜೆ ನೌಕಾನೆಲೆಗೆ ಆಗಮಿಸಿದರು. ಇವರೊಂದಿಗೆ ನಿರ್ಮಾಪಕರಾದ ಭೂಷಣ್ ಕುಮಾರ್, ಜೆ.ಪಿ. ದತ್ತಾ, ನಿಧಿ ದತ್ತಾ ಮತ್ತು ನಿರ್ದೇಶಕ ಅನುರಾಗ್ ಸಿಂಗ್ ಕೂಡ ಸಾಥ್ ನೀಡಿದರು. ಭಾರತೀಯ ನೌಕಾಪಡೆಯ ಹೆಮ್ಮೆಯ ವಿಮಾನವಾಹಕ ಯುದ್ಧನೌಕೆ ಐ.ಎನ್.ಎಸ್ ವಿಕ್ರಮಾದಿತ್ಯಕ್ಕೆ ಭೇಟಿ ನೀಡಿದ ಚಿತ್ರತಂಡ, ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ನೌಕಾ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಬೆರೆತು ಸಂವಾದ ನಡೆಸಿದರು.
ನೌಕಾನೆಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಯೋಧರ ಸೇವೆ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ಪ್ರದರ್ಶಿಸಲಾಯಿತು. ಚಿತ್ರದಲ್ಲಿ ನಟ ಅಹಾನ್ ಶೆಟ್ಟಿ ಧೈರ್ಯಶಾಲಿ ನೌಕಾ ಅಧಿಕಾರಿಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗಾಗಿ, ದೇಶದ ಪ್ರಮುಖ ನೌಕಾ ನೆಲೆಯಾಗಿರುವ ಮತ್ತು ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ ಇರುವ ಕಾರವಾರದಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷವಾಗಿತ್ತು.ಅನುರಾಗ್ ಸಿಂಗ್ ನಿರ್ದೇಶನದ ಈ ಚಿತ್ರವು 1971ರ ಭಾರತ-ಪಾಕಿಸ್ತಾನ ಯುದ್ಧದ ವೀರಗಾಥೆಯನ್ನು ಹೇಳುತ್ತದೆ. ಚಿತ್ರದಲ್ಲಿ ವರುಣ್ ಧವನ್ 1971ರ ಯುದ್ಧದಲ್ಲಿ ಅಪಾರ ಧೈರ್ಯ ಪ್ರದರ್ಶಿಸಿ ಪರಮವೀರ ಚಕ್ರ ಗೌರವಕ್ಕೆ ಭಾಜನರಾದ ಕರ್ನಲ್ ಹೋಶಿಯಾರ್ ಸಿಂಗ್ ದಾಹಿಯಾ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರೀಯ ಭದ್ರತೆ ಮತ್ತು ಸೈನಿಕರ ತ್ಯಾಗ ಎತ್ತಿಹಿಡಿಯುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಕಾರವಾರದಲ್ಲಿ ಸಂಚಲನ ಮೂಡಿಸಿದೆ.
