ದೇಶದಲ್ಲಿ ಹುಟ್ಟಿ ಬೆಳೆದ ನಾವೇ ಪುಣ್ಯವಂತರು

| Published : Nov 26 2024, 12:46 AM IST

ಸಾರಾಂಶ

ನಮ್ಮ ದೇಶದಲ್ಲಿ ಗುರುವಿನ ಮೇಲೆರುವ ಭಕ್ತಿ ಯಾವಾಗಲೂ ಕಡಿಮೆಯಾಗುವುದಿಲ್ಲ. ಈ ದೇಶದಲ್ಲಿ ಮಾತ್ರ ಗುರು ಪರಂಪರೆ ಗುರುತಿಸಿ ಗೌರವಿಸುತ್ತಾರೆ ಎಂದು ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಕನ್ನಡಪ್ರಭ ವಾರ್ತೆ ಘಟಪ್ರಭಾ

ನಮ್ಮ ದೇಶದಲ್ಲಿ ಗುರುವಿನ ಮೇಲೆರುವ ಭಕ್ತಿ ಯಾವಾಗಲೂ ಕಡಿಮೆಯಾಗುವುದಿಲ್ಲ. ಈ ದೇಶದಲ್ಲಿ ಮಾತ್ರ ಗುರು ಪರಂಪರೆ ಗುರುತಿಸಿ ಗೌರವಿಸುತ್ತಾರೆ ಎಂದು ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದರು. ಸ್ಥಳೀಯ ಎಸ್.ಡಿ.ಟಿ ಹೈಸ್ಕೂಲ್‌ ಆವರಣದಲ್ಲಿ ಶಾಲೆಯ ೧೯೯೨ ರಿಂದ ೯೫ನೇ ಸಾಲಿನ ಹಳೆ ವಿದ್ಯಾರ್ಥಿಗಳು ಏರ್ಪಡಿಸಿದ ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಹುಟ್ಟಿ ಬೆಳೆದ ನಾವೇ ಪುಣ್ಯವಂತರು. ನಮಗೆ ಜೀವನದ ದಾರಿ ತೋರಿಸಿದ ಗುರುಗಳನ್ನು ದೇವರೆಂದು ಭಾವಿಸುತ್ತೇವೆ ಎಂದರು.

ಬೈಲಹೊಂಗಲ ಉಪವಿಭಾಗದ ಅಧಿಕಾರಿ ಪ್ರಭಾವತಿ ಫಕೀರಪೂರ ಹಳೆ ವಿದ್ಯಾರ್ಥಿಗಳ ಸಂಘಟನೆ ಉದ್ಘಾಟಿಸಿ ಮಾತನಾಡಿ, ಹಿಂದೆ ನಾವು ನಡೆದುಕೊಂಡ ಬಂದ ದಾರಿ ಮರೆತು ನಡೆಯುವುದು ನಮ್ಮ ಆದರ್ಶವಾಗುವುದಿಲ್ಲ. ಇಲ್ಲಿನ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಸಂಘಟನೆ ಮಾಡಿಕೊಂಡು ಗುರುವಂದನೆ ಸಲ್ಲಿಸುವುದರೊಂದಿಗೆ ತಾವು ಕಲಿತ ಶಾಲೆಯ ಶ್ರೇಯೋಭಿವೃದ್ಧಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ದೊಡ್ಡ ಆಕಾಂಕ್ಷೆ ಹೊಂದಿಕೊಂಡು ಅಭಿವೃದ್ಧಿ ಪಡಿಸುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಎಸ್‌ಇಎಸ್ ಅಧಿಕಾರಿ ವಿನೋದ ಡಾಂಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಅರಬಾವಿ ದುರದುಂಡೀಶ್ವರ ಮಠದ ಗುರುಬಸವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಕಚೇರಿಯ ಮಾಧ್ಯಮ ಸಲಹೆಗಾರ ಕೆ.ಎಸ್.ನಾಗರಾಜ ಮಾತನಾಡಿ, ಸಂಘಟನೆಯ ವತಿಯಿಂದ ಹಲವಾರು ಉದ್ದೇಶಗಳನ್ನು ಹೊಂದಿದ್ದು ಮುಂದಿನ ದಿನದಲ್ಲಿ ಶಾಲೆಯ ಸುತ್ತ ಹಸಿರೀಕರಣ ಮಾಡುವುದಲ್ಲದೆ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ, ಆರೋಗ್ಯಕ್ಕೆ ಸಹಕಾರ ನೀಡುವುದಲ್ಲದೆ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಸಹಾಯ ಮಾಡಿ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಮತ್ತು ಹೈಸ್ಕೂಲ್‌ನಲ್ಲಿ ಗ್ರಂಥಾಲಯ, ಆನ್‌ಲೈನ್ ವಾಚನಾಲಯ ನಿರ್ಮಾಣ ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಯಲ್ಲಿರುವ ಬೆಂಗಳೂರಿನ ಹಿರಿಯ ಶ್ರೇಣಿ ನ್ಯಾಯಾಧೀಶ ಧನೇಶ ಮುಗಳಿ, ಹುಕ್ಕೇರಿಯ ಹಿರಿಯ ವೈದ್ಯ ಡಾ.ನಾಗರಾಜ ಚರಂತಿಮಠ, ಧಾರವಾಡ ಡಿವೈಎಸ್ಪಿ ವಿದ್ಯಾನಂದ ನಾಯಿಕ, ಬೆಳಗಾವಿಯ ಸಿಪಿಐ ಧರೀಗೌಡ ಪಾಟೀಲ ಹಾಗೂ ರೇಷ್ಮೆ ಇಲಾಖೆಯ ಅರಬಾವಿ ಕಚೇರಿ ಅಧಿಕ್ಷಕ ಭಾಗ್ಯಶ್ರೀ ಪರಗೌಡ ಪಡೆಪ್ಪಗೋಳ ಅಧಿಕಾರಿಗಳನ್ನು ಗುರುತಿಸಿ ಹೈಸ್ಕೂಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರವತ್ತಕ್ಕೂ ಹೆಚ್ಚು ಶಿಕ್ಷಕ ವೃಂದರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಜಯಕುಮಾರ ಬಡಕುಂದ್ರಿ, ಅರ್ಜುನ ಸಂಪಗಾರ, ಚಂದ್ರಶೇಖರ ಬೇಟಗೇರಿ, ಗೀತಾ ಬೆನವಾಡೆ, ಸಂಜೀವ ನಾಯಿಕ, ಸೋಮಶೇಖರ ಜಿನರಾಳೆ, ಪ್ರಕಾಶ ಮಟಗಾರ, ಮಲ್ಲಿಕಾರ್ಜುನ ಕೋಳಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಲತಾ ಕೊಣ್ಣೂರ, ನೀತಾ ಬಾರಟಕ್ಕೆ, ಶಂಕರ ಗೌಡಾಡಿ, ಜಯಪ್ರಕಾಶ ಕಾಡದವರ, ಪರವೇಜ ದೇಸಾಯಿ ಹಾಗೂ ನಿವೃತ್ತ ಶಿಕ್ಷಕರು, ಉಪನ್ಯಾಸಕರು, ಹಳೆ ವಿದ್ಯಾರ್ಥಿಗಳು ಇದ್ದರು. ಕುಮಾರಯ್ಯ ಕರ್ಪೂರಮಠ ಸ್ವಾಗತಿಸಿದರು. ಖ್ಯಾತ ನಿರೂಪಕಿ, ಭಾನುಮತಿ ನಿರೂಪಿಸಿದರು. ನಾವಲಗಿ ವಂದಿಸಿದರು.ದೇವರಿಗೆ ಸಮನಾದ ಗುರುಗಳನ್ನು ೩೦ ವರ್ಷಗಳ ನಂತರ ತಾವೆಲ್ಲರು ನೆನಪಿಸಿಕೊಂಡು ಗುರುತಿಸಿ ಗೌರವಿಸುತ್ತಿರುವುದು ಈ ನೆಲದ ಸಂಸ್ಕೃತಿ ಎತ್ತಿ ತೊರಿಸುತ್ತದೆ. ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದುಕೊಂಡು ಹೋಗುವುದೇ ಎಲ್ಲರ ಕರ್ತವ್ಯವಾಗಿದೆ.

-ಡಾ.ಚಂದ್ರಶೇಖರ ಕಂಬಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು.