ಇತಿಮಿತಿಯೊಳಗೆ ಸಾಲ ಪಡೆದು ತೀರಿಸಿ: ಶಾಸಕ ಬಸವಂತಪ್ಪ

| Published : Feb 06 2025, 11:47 PM IST

ಸಾರಾಂಶ

'ಹಾಸಿಗೆ ಇದ್ದಷ್ಟು ಕಾಲು ಚಾಚು' ಎಂಬ ಗಾದೆ ಮಾತಿನಂತೆ ಗ್ರಾಮಸ್ಥರು ಸ್ವಸಹಾಯ ಸಂಘಗಳು ಅಥವಾ ಮೈಕ್ರೋ ಫೈನಾನ್ಸ್‌ಗಳಲ್ಲಿ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಸಾಲ ಪಡೆದುಕೊಳ್ಳಬೇಕು. ಅಲ್ಲದೆ, ಸಕಾಲದಲ್ಲಿ ಸಾಲ ತೀರಿಸಬೇಕು. ಸಾಲ ತೀರಿಸಲು ಆಗದೇ ಅಮೂಲ್ಯ ಜೀವವನ್ನು ಕಳೆದುಕೊಳ್ಳಬೇಡಿ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ.

- ಹೊನ್ನನಾಯಕನಹಳ್ಳಿಯಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ''ಹಾಸಿಗೆ ಇದ್ದಷ್ಟು ಕಾಲು ಚಾಚು'' ಎಂಬ ಗಾದೆ ಮಾತಿನಂತೆ ಗ್ರಾಮಸ್ಥರು ಸ್ವಸಹಾಯ ಸಂಘಗಳು ಅಥವಾ ಮೈಕ್ರೋ ಫೈನಾನ್ಸ್‌ಗಳಲ್ಲಿ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಸಾಲ ಪಡೆದುಕೊಳ್ಳಬೇಕು. ಅಲ್ಲದೆ, ಸಕಾಲದಲ್ಲಿ ಸಾಲ ತೀರಿಸಬೇಕು. ಸಾಲ ತೀರಿಸಲು ಆಗದೇ ಅಮೂಲ್ಯ ಜೀವವನ್ನು ಕಳೆದುಕೊಳ್ಳಬೇಡಿ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನರಗನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಹೊನ್ನನಾಯಕನಹಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಅಮಾಯಕರು ಮೈಕ್ರೋ ಫೈನಾನ್ಸ್‌ಗಳು ಅಥವಾ ಸ್ವಸಹಾಯ ಸಂಘಗಳಲ್ಲಿ ಅತಿಯಾದ ಸಾಲ ಪಡೆದು ಸಾಲ ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದಿನನಿತ್ಯ ಕೆಲಸ ಮಾಡುವುದು ಒಂದು ದಿನ ನಿಂತರೆ ಮನುಷ್ಯನ ಕುಟುಂಬ ನಿರ್ವಹಣೆ ನಿಭಾಯಿಸುವುದು ಕಷ್ಟ. ಹೆಚ್ಚಿನ ಸಂಘಗಳಲ್ಲಿ ವಿನಾಕಾರಣ ಸಾಲ ಪಡೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.

ಸಾಲ ತೆಗೆದು ಹಬ್ಬ ಮಾಡಿ ಎಂದು ಯಾವ ದೇವರುಗಳು ಹೇಳುವುದಿಲ್ಲ. ನಮ್ಮ ಇತಿಮಿತಿಯೊಳಗೆ ಹಬ್ಬ ಆಚರಿಸಬೇಕು. ಮೈಕ್ರೋ ಫೈನಾನ್ಸ್‌ಗಳಲ್ಲಿ ಹಣ ಇರುತ್ತದೆ. ಅವರು ಹಿಂದೆ ಮುಂದೆ ನೋಡದೇ ಸಾಲ ಕೊಡ್ತಾರೆ. ಸಾಲ ಮರಳಿ ಕಟ್ಟದಿದ್ದಾಗ ಮನೆ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಆಗ ಮನೆ ಬಿಟ್ಟು ಓಡುವ ಪರಿಸ್ಥಿತಿ ಎದುರಾಗುತ್ತದೆ. ಸಾಲ ಪಡೆದು ಊರು ಬಿಡುವ ದುಸ್ಥಿತಿಗೆ ಬರಬೇಡಿ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ನಾಗರಾಜು, ಗ್ರಾಪಂ ಪಿಡಿಒ ಲಕ್ಷ್ಮಣ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಗೀತಾ, ಗ್ರಾಮದ ಮುಖಂಡರಾದ ದೇವೇಂದ್ರಪ್ಪ, ಹನುಮಂತಪ್ಪ, ತಿಪ್ಪನಾಯ್ಕ್, ಸಿದ್ದಪ್ಪ, ಕಿರಣ್, ಕಾಂತಣ್ಣ, ಮಲ್ಲೇಶ್, ಆಶಾ ಬಾಯಿ, ಸಂತೋಷ್ ನಾಯ್ಕ್, ರುದ್ರೇಶಪ್ಪ, ಚಂದ್ರಪ್ಪ, ಮುರುಗೇಂದ್ರಪ್ಪ, ಶಿವಾನಂದಪ್ಪ, ಮೈಲಪ್ಪ, ಯೋಗೇಶ್ ಹಾಗೂ ಗ್ರಾಮಸ್ಥರು ಇದ್ದರು.

- - -

ಕೋಟ್ ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರು ಶುದ್ಧವಾಗಿದ್ದರೆ ಎಷ್ಟೋ ಕಾಯಿಲೆಯನ್ನು ದೂರು ಮಾಡಬಹುದು. ಇಂತಹದೊಂದು ಉತ್ತಮ ಕಾರ್ಯವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಮಾಡಿರುವುದು ಮೆಚ್ಚಬೇಕಾದ ಸಂಗತಿ

- ಕೆ.ಎಸ್‌. ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ

- - - -6ಕೆಡಿವಿಜಿ36.ಜೆಪಿಜಿ:

ಹೊನ್ನನಾಯಕನಹಳ್ಳಿಯಲ್ಲಿ ಶಾಸಕ ಕೆ.ಎಸ್‌. ಬಸವಂತಪ್ಪ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.