ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದ ಬೋಸ್‌: ಹವಾ ಮಲ್ಲಿನಾಥ ಶ್ರೀ

| Published : Jan 25 2024, 02:01 AM IST

ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದ ಬೋಸ್‌: ಹವಾ ಮಲ್ಲಿನಾಥ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ನೌಬಾದ ಸಮೀಪದ ಶ್ರೀ ಔದುಂಬರಲಿಂಗ ಮಲ್ಲಿನಾಥ ಆಶ್ರಮದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯಿಂದ ನೇತಾಜಿ ಸುಭಾಷಚಂದ್ರ ಬೋಸ್‌ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಭಾರತದ ಸ್ವಾತಂತ್ರ ಹೋರಾಟಕ್ಕೆ ಹೊಸ ದಿಕ್ಕು ನೀಡಿದವರಲ್ಲಿ ನೇತಾಜಿ ಸುಭಾಷಚಂದ್ರ ಬೋಸ್‌ ಅಗ್ರಗಣ್ಯರು ಎಂದು ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಸದ್ಗುರು ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ಯಾ) ಹೇಳಿದರು.

ನೌಬಾದ್‌ ಹತ್ತಿರದ ಶ್ರೀ ಔದುಂಬರಲಿಂಗ ಮಲ್ಲಿನಾಥ ಆಶ್ರಮದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ನೇತಾಜಿ ಸುಭಾಷಚಂದ್ರ ಬೋಸ್‌ ಅವರ ಜಯಂತಿ ಉತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬೋಸ್‌ ಅವರು ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಹೆಚ್ಚಿಸಿ ಹೊಸ ಶಕ್ತಿ ತುಂಬಿದ್ದರು ಎಂದರು.

ಬ್ರಿಟೀಷರ ನಿದ್ದೆಗೆಡಿಸಿದ ಕ್ರಾಂತಿಕಾರಿ ಹೋರಾಟಗಾರರಲ್ಲಿ ಬೋಸ್‌ ಒಬ್ಬರು. ಅವರ ತತ್ವಾದರ್ಶ, ರಾಷ್ಟ್ರಪ್ರೇಮ ಇಂದಿನ ಯುವಕರಿಗೆ ಆದರ್ಶವಾಗಿವೆ. ಯುವಕರು ಬೋಸ್‌ ಅವರ ಜೀವನ ಚರಿತ್ರೆಯನ್ನು ಓದಿ ಪ್ರೇರಣೆ ಪಡೆಯಬೇಕು ಎಂದು ಕರೆ ನೀಡಿದರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಪಡೆಯುವಲ್ಲಿ ಅಹಿಂಸೆ ಜತೆಗೆ ಹಿಂಸಾತ್ಮಕ ಹೋರಾಟ ಸಹ ಪ್ರಮುಖ ಪಾತ್ರ ವಹಿಸಿದೆ. ಮಹಾತ್ಮ ಗಾಂಧೀಜಿ ಅವರು ಅಹಿಂಸಾ ಮಾರ್ಗದಿಂದ ಹೋರಾಟಕ್ಕೆ ಧುಮುಕಿದರೆ, ಭಗತ್‌ ಸಿಂಗ್‌, ಚಂದ್ರಶೇಖರ ಆಜಾದ್‌, ಬೋಸ್‌ ಇತರರು ಕ್ರಾಂತಿಕಾರಿ ವಿಚಾರ ಧಾರೆಯಿಂದ ಮುಂದುವರಿದರು. ದೇಶದ ಸ್ವಾತಂತ್ರ್ಯಕ್ಕೆ ಶಾಂತಿ ಮತ್ತು ಕ್ರಾಂತಿ ಸಮ್ಮಿಲನಕ್ಕೆ ಕಾರಣವಾಯಿತು. ದೇಶದ ಹಿತಕ್ಕಾಗಿ ಅಗತ್ಯಬಿದ್ದಾಗ ಶಸ್ತ್ರವೂ ಹಿಡಿಯಬೇಕು ಎಂಬ ನಮ್ಮ ಪೂರ್ವಜರ, ಹೋರಾಟಗಾರರ ಚಿಂತನೆ ಇಂದಿಗೂ ಅನುಕರಣೀಯವಾಗಿವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕಿ, ಕರ್ನಾಟಕ ರಾಜ್ಯ ಸಹಕಾರಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಮಾತನಾಡಿ, ಬೋಸ್‌ ಅವರ ಹೋರಾಟ ರೋಚಕವಿದೆ. ಅವರ ಹೆಸರು ಕೇಳಿದರೆ ಬ್ರಿಟೀಷರು ಗಡಗಡ ನಡಗುತ್ತಿದ್ದರು. ಅವರು ಸ್ಥಾಪಿಸಿದ್ದ ಆಜಾದ್‌ ಹಿಂದ್‌ ಫೌಜ್‌ (ಇಂಡಿಯನ್‌ ನ್ಯಾಷನಲ್‌ ಆರ್ಮಿ) ಭಾರತಕ್ಕೆ ಸ್ವಾತಂತ್ರ್ಯತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ನಾವೆಲ್ಲರೂ ಇತಿಹಾಸದ ಸತ್ಯವನ್ನು ಅರಿತು ಮುಂದೆ ಸಾಗಬೇಕು ಎಂದರು.

ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕರಾದ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜರು ದೇಶಾದ್ಯಂತ ಅವಿರತವಾಗಿ ಸಂಚರಿಸುತ್ತ ಜನರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುತ್ತಿದ್ದಾರೆ ಎಂದರು.

ಜೈಭಾರತ ಮಾತಾ ಸೇವಾ ಸಮಿತಿ ಭಾಲ್ಕಿ ತಾಲೂಕು ಅಧ್ಯಕ್ಷ ಪಪ್ಪು ಪಾಟೀಲ್‌ ಖಾನಾಪುರ ಸ್ವಾಗತಿಸಿ ನಿರೂಪಿಸಿದರು. ಪ್ರಮುಖರಾದ ಓಂಕಾರ, ಶಿವಕುಮಾರ ಮದನೂರೆ, ದಿಲೀಪ ಪಾಟೀಲ್‌, ಅಜಯ್‌ ಸಿಂಧೆ, ಮಲ್ಲು, ವೀರಶೆಟ್ಟಿ, ಉಮಾಕಾಂತ, ವಿಜಯಕುಮಾರ, ಅಶೋಕ, ರಾಮಲಿಂಗ, ಉಮೇಶ, ಪುಟ್ಟು ಇತರರಿದ್ದರು.