ದೇಶದ ಅಭಿವೃದ್ಧಿಗೆ ಎರಡೂ ಪಕ್ಷಗಳು ಜೊತೆಯಾಗಿ ಸಾಗಲಿವೆ: ಜೀವರಾಜ್

| Published : Mar 31 2024, 02:14 AM IST

ದೇಶದ ಅಭಿವೃದ್ಧಿಗೆ ಎರಡೂ ಪಕ್ಷಗಳು ಜೊತೆಯಾಗಿ ಸಾಗಲಿವೆ: ಜೀವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಘೊಷಣೆಯಾದ ಲೋಕಸಭಾ ಚುನಾವಣೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಹೆಸರು ಘೋಷಣೆಯಾಗಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಎನ್.ಡಿ.ಎ. ಮೈತ್ರಿ ಕೂಟದ ಮೈತ್ರಿ ಪಕ್ಷವಾಗಿ ಜೆಡಿಎಸ್ ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ದೇಶದ ಅಭಿವೃದ್ಧಿಗಾಗಿ ಎರಡೂ ಪಕ್ಷಗಳು ಜೊತೆಜೊತೆಯಾಗಿ ಸಾಗಲಿದೆ ಎಂದು ಮಾಜಿ ಸಚಿವ ಜೀವರಾಜ್ ಹೇಳಿದರು.

- ಜೆಡಿಎಸ್ ಬಿಜೆಪಿ ಮೈತ್ರಿ । ಕೊಪ್ಪಲ್ಲಿ ಉಭಯ ಪಕ್ಷಗಳ ಸಮನ್ವಯ ಸಭೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಈಗಾಗಲೇ ಘೊಷಣೆಯಾದ ಲೋಕಸಭಾ ಚುನಾವಣೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಹೆಸರು ಘೋಷಣೆಯಾಗಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಎನ್.ಡಿ.ಎ. ಮೈತ್ರಿ ಕೂಟದ ಮೈತ್ರಿ ಪಕ್ಷವಾಗಿ ಜೆಡಿಎಸ್ ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ದೇಶದ ಅಭಿವೃದ್ಧಿಗಾಗಿ ಎರಡೂ ಪಕ್ಷಗಳು ಜೊತೆಜೊತೆಯಾಗಿ ಸಾಗಲಿದೆ ಎಂದು ಮಾಜಿ ಸಚಿವ ಜೀವರಾಜ್ ಹೇಳಿದರು.

ಕೊಪ್ಪ ಪುರಭವನದಲ್ಲಿ ಶನಿವಾರ ನಡೆದ ಬಿಜೆಪಿ ಜೆಡಿಎಸ್ ಸಮನ್ವಯ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂದಿನ ಚುನಾವಣೆಗಳಲ್ಲಿ ಜೆಡಿಎಸ್ ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದಾಗ ಪಕ್ಷಗಳ ವಿಚಾರಧಾರೆಗೆ ಅನುಗುಣವಾಗಿ ಒಬ್ಬರನ್ನು ಒಬ್ಬರು ದೂಷಿಸಿಕೊಂಡಿರಬಹುದು. ಆರೋಪ, ಪ್ರತ್ಯಾರೋಪಗಳನ್ನು ಮಾಡಿರಬಹುದು. ಅದೆಲ್ಲವೂ ಚುನಾವಣೆ ಸಂದರ್ಭಕ್ಕಷ್ಟೇ ಮೀಸಲಾಗಿದ್ದು ಇದೀಗ ಎರಡೂ ಪಕ್ಷಗಳ ರಾಷ್ಟ್ರೀಯ ಮುಖಂಡರ ಸಮಕ್ಷಮದಲ್ಲಿ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದು ದೇಶ ಮತ್ತು ಕ್ಷೇತ್ರದ ಹಿತದೃಷ್ಟಿಯಿಂದ ನಮ್ಮ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿಯವರ ಗೆಲುವಿಗೆ ಒಂದಾಗಿ ಶ್ರಮಿಸುತ್ತೇವೆ. ಈ ಬಾರಿ ಕ್ಷೇತ್ರದ ಎಲ್ಲಾ ೨೮ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ದೇಶದಲ್ಲಿ ಎನ್.ಡಿ.ಎ. ಮೈತ್ರಿಕೂಟ ೪೦೦ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.

೨೦೦೬ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯಾಗಿತ್ತು. ನಂತರ ಮೈತ್ರಿ ಮುರಿದುಬಿದ್ದಿತ್ತು. ಇದು ಕೂಡ ಹಾಗೇನಾ? ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ೨೦೦೬ರಲ್ಲಿ ಆದ ಬಿಜೆಪಿ ಜೆಡಿಎಸ್ ಮೈತ್ರಿಗೂ ಈಗಿನ ಮೈತ್ರಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ಮೈತ್ರಿ ಸಮಯದಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಮುಖಂಡರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪಕ್ಷದ ಕೆಲವರು ದಾರಿ ತಪ್ಪಿಸುವ ಕೆಲಸ ಮಾಡಿದ್ದರಿಂದ ಅವರು ಮೈತ್ರಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇಂದಿನ ಮೈತ್ರಿ ಉಭಯ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಚರ್ಚಿಸಿ ಸಮನ್ವಯ ಭಾವದಿಂದ ಆಗಿರುವ ಮೈತ್ರಿಯಾಗಿದ್ದು ಚುನಾವಣೆ ನಂತರವೂ ಮೈತ್ರಿ ಮುಂದುವರಿಯಲಿದೆ. ಈ ಬಾರಿ ಮೋದಿಜಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದು ಸೂರ್ಯಚಂದ್ರರಷ್ಟೇ ಸತ್ಯ ಎಂದರು. ಬೆಂಗಳೂರಿನಲ್ಲಿ ಹಾಗೂ ಚಿಕ್ಕಮಗಳೂರಿನಲ್ಲಿ ಈಗಾಗಲೇ ಎರಡೂ ಪಕ್ಷಗಳ ಮುಂಚೂಣಿ ನಾಯಕರು ಸಮನ್ವಯ ಸಭೆ ನಡೆಸಿದ್ದು ಶೃಂಗೇರಿ ಕ್ಷೇತ್ರದ ಕೊಪ್ಪದಲ್ಲಿ ಇಂದು ಸಮನ್ವಯ ಸಭೆ ನಡೆದಿದೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷದ ಕಾರ್ಯಕರ್ತರನ್ನು ಒಂದುಗೂಡಿಸಿ ಅಲ್ಲಲ್ಲಿ ಸಭೆ ನಡೆಸುವ ಮೂಲಕ ತಳಮಟ್ಟದ ಕಾರ್ಯಕರ್ತರಲ್ಲೂ ವಿಶ್ವಾಸ ಮೂಡಿಸಲಾಗುವುದು. ನಿಷ್ಠಾವಂತ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವಿಗೆಒಂದಾಗಿ ಶ್ರಮಿಸಲಾಗುವುದು ಎಂದರು. ಜೆಡಿಎಸ್ ಕ್ಷೇತ್ರಾಧ್ಯಕ್ಷ ಬಿ.ಎಚ್.ದಿವಾಕರ್ ಭಟ್ ಭಂಡಿಗಡಿ, ಬಿಜೆಪಿ ತಾಲೂಕು ಅಧ್ಯಕ್ಷ ಹೊಸೂರು ದಿನೇಶ್, ಕಾರ್ಯದರ್ಶಿಗಳಾದ ಬಿಸೇಜ, ಅರುಣ್, ಮುಖಂಡರಾಡ ಡಾ.ಜಿ.ಎಸ್. ಮಹಾಬಲ, ಪುಣ್ಯಪಾಲ್, ಜೆಡಿಎಸ್‌ನ ಭರತ್, ಆನಂದ್, ವಾಸಪ್ಪ, ಚಂದ್ರಶೇಖರ್ ಸೇರಿದಂತೆ ಉಭಯ ಪಕ್ಷಗಳ ನಾಯಕರು, ಕಾರ್ಯಕರ್ತರು ಸಮನ್ವಯ ಸಭೆಯಲ್ಲಿದ್ದರು.