ಬೆಂಗಳೂರು ಅಭಿವೃದ್ಧಿಗಾಗಿ ಹಲವು ಸರ್ಕಾರಗಳು ಕೋಟಿಗಟ್ಟಲೇ ಹಣ ವ್ಯಯಿಸಿದರೂ ಬೆಂಗಳೂರು ವಿಶ್ವವಿದ್ಯಾಲಯ ಗೇಟ್ ಸಮೀಪ ಮೈಸೂರು ರಸ್ತೆಯಲ್ಲಿರುವ ಪುರಾತನ ಸೇತುವೆ ಅಗಲೀಕರಣ ಮಾಡದೆ ನಿರ್ಲಕ್ಷಿಸಿದ್ದು, ಇಂದಿಗೂ ಈ ಸೇತುವೆಯಲ್ಲಿ ವಾಹನ ಸಂಚಾರರು ಜನದಟ್ಟಣೆ ಸಮಯ ಪರದಾಡುವಂತಾಗಿದೆ.
ನಗರದ ಅಭಿವೃದ್ಧಿಗೆ ವಿಶ್ವಬ್ಯಾಂಕ್ ₹ 2000 ಕೋಟಿ ನೀಡಿದ್ರೂ ಅಗಲೀಕರಣವಾಗದ ಮೈಸೂರು ರಸ್ತೆ ಸೇತುವೆ
-ಬೆಂವಿವಿ ಗೇಟ್ ಸಮೀಪವಿರುವ ಸುಮಾರು 70 ವರ್ಷದ ಹಳೆಯ ಸೇತುವೆ । ಸೇತುವೆ ಅಗಲೀಕರಣ ಮಾಡಲು ಸರ್ಕಾರ ನಿರ್ಲಕ್ಷ್ಯ-ಜನದಟ್ಟಣೆ ವೇಳೆ ವಾಹನ ಸವಾರರಿಗೆ ಕಿರಿಕಿರಿ । ಸಿಎಂ, ಅನೇಕ ಮಂತ್ರಿಗಳು ಇದೇ ರಸ್ತೇಲಿ ಸಂಚರಿಸಿದ್ರೂ ಕಾಮಗಾರಿ ಮಾಡ್ತಿಲ್ಲ
---ಉಮಾಶಂಕರ ಕಾರ್ಯಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಅಭಿವೃದ್ಧಿಗಾಗಿ ಹಲವು ಸರ್ಕಾರಗಳು ಕೋಟಿಗಟ್ಟಲೇ ಹಣ ವ್ಯಯಿಸಿದರೂ ಬೆಂಗಳೂರು ವಿಶ್ವವಿದ್ಯಾಲಯ ಗೇಟ್ ಸಮೀಪ ಮೈಸೂರು ರಸ್ತೆಯಲ್ಲಿರುವ ಪುರಾತನ ಸೇತುವೆ ಅಗಲೀಕರಣ ಮಾಡದೆ ನಿರ್ಲಕ್ಷಿಸಿದ್ದು, ಇಂದಿಗೂ ಈ ಸೇತುವೆಯಲ್ಲಿ ವಾಹನ ಸಂಚಾರರು ಜನದಟ್ಟಣೆ ಸಮಯ ಪರದಾಡುವಂತಾಗಿದೆ.ಈ ಸೇತುವೆ ಅಗಲೀಕರಣವಾದರೆ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳ ಕಾಂಪೌಂಡ್‌ಗೆ ಹೆದ್ದಾರಿ ರಸ್ತೆ ಬಂದು ನಿಲ್ಲುವುದರಿಂದ ಯಾವ ಸರ್ಕಾರಗಳೂ ಈ ಸೇತುವೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಿಂದ ಬರುವ ವಾಹನಗಳು ಬೆಂಗಳೂರು-ಮೈಸೂರು ರಸ್ತೆಗೆ ಬರುತ್ತಿದ್ದಂತೆ ಎಡತಿರುವು ಪಡೆಯಬೇಕು. ಬೆಂಗಳೂರು ವಿವಿಯಿಂದ ಬರುವ ಕೊಳಚೆ ನೀರು ಇದೇ ಸೇತುವೆ ಕೆಳಗೆ ಹರಿಯುತ್ತಿದೆ. ವಿಪರ್ಯಾಸವೆಂದರೆ, ನಗರದ ಅಭಿವೃದ್ಧಿಗಾಗಿ ವಿಶ್ವಬ್ಯಾಂಕ್‌ನಿಂದ ಈ ಭಾಗಕ್ಕೆ 2000 ಕೋಟಿ ರು.ವೆಚ್ಚ ಮಾಡುತ್ತಿದ್ದರೂ ಈ ಕಾಮಗಾರಿಯ ಪಟ್ಟಿಯಲ್ಲಿ ಈ ಸೇತುವೆ ಅಗಲೀಕರಣವಾಗಲಿ, ಪುನರ್ ನಿರ್ಮಾಣ ಕಾಮಗಾರಿಯಾಗಿಯೇ ಗಣನೆಗೇ ಬಂದಿಲ್ಲ. ಈ ಸೇತುವೆ ಪಕ್ಕದಲ್ಲಿಯೇ ಮೆಟ್ರೋ ಪಿಲ್ಲರ್ ಹಾಕಲಾಗಿದ್ದು, ಮೆಟ್ರೋ ಕಾಮಗಾರಿ ನಡೆಯುವಾಗ ಬಿಎಂಆರ್‌ಸಿಎಲ್ ಸಂಸ್ಥೆ ಕೂಡಾ ಈ ಸೇತುವೆ ಪುನರ್ ನಿರ್ಮಾಣ ಮಾಡಲಿಲ್ಲ.ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಮೈಸೂರು-ಬೆಂಗಳೂರು ನಡುವೆಏಕ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ನಿರ್ಮಾಣ ಮಾಡಲಾಯಿತು. ಆ ಸಮಯದಲ್ಲಿಯೂ ಈ ಸೇತುವೆಯನ್ನು ಪುನರ್ ನಿರ್ಮಾಣವಾಗಲಿ ಅಗಲೀಕರಣವಾಗಲಿ ಮಾಡಲಿಲ್ಲ.
ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ)ಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಬದಲಾಗಿ ವರ್ಷಗಳೇ ಕಳೆಯುತ್ತಿದ್ದರೂ ಬಿ-ಸ್ಮೈಲ್ ಯೋಜನೆಯಲ್ಲಿ ಈ ಸೇತುವೆ ನಿರ್ಮಾಣವಾಗಬೇಕಾಗಿತ್ತು. ಆದರೆ, ಈ ಸೇತುವೆ ವಿಚಾರಿಸಿದರೆ ಯಾವ ಅಧಿಕಾರಿಗಳ ಬಳಿಯೂ ಸೇತುವೆ ಕುರಿತ ಮಾಹಿತಿ ಇಲ್ಲ.ಈ ಸಂಬಂಧ ವಿಶ್ವ ಬ್ಯಾಂಕ್ ನೆರವಿನಿಂದ ನಗರದಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆಗಳ ಉಸ್ತುವಾರಿ ಮುಖ್ಯಎಂಜಿನಿಯರ್ ಎಸ್.ವಿ.ರಾಜೇಶ್ ಅವರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, ಈ ಸೇತುವೆ ತುಂಬಾ ಕಿರಿದಾಗಿದೆ, ಜನದಟ್ಟಣೆಯ ಸಮಯದಲ್ಲಿ ವಾಹನ ಸವಾರರಿಗೆ ಇಲ್ಲಿ ಸಂಚರಿಸುವುದು ಸಮಸ್ಯೆಯಾಗುತ್ತಿದೆ. ಆದರೆ, ವಿಶ್ವಬ್ಯಾಂಕ್ ನೆರವಿನಡಿ ನಿರ್ಮಾಣ ಮಾಡುತ್ತಿರುವ ಕಾಮಗಾರಿಗಳಲ್ಲಿ ಈ ಸೇತುವೆ ಅಗಲೀಕರಣ ಸೇರಿಸಿಲ್ಲ. ಆಯಾ ಪಾಲಿಕೆ ವ್ಯಾಪ್ತಿಯ ಕಾಮಗಾರಿ ಕೈಗೊಂಡಿರಬಹುದು ಎಂದರು.
-----ಚರ್ಚಿಸಿ ನಿರ್ಮಾಣಕ್ಕೆ ಕ್ರಮ
ಈ ಸೇತುವೆಯನ್ನು ಬಿ-ಸ್ಮೈಲ್ ಯೋಜನೆಯಡಿ ನಿರ್ಮಾಣ ಮಾಡಬೇಕಾಗಿತ್ತು. ಆದರೆ, ಇಲ್ಲಿನ ಕಾಮಗಾರಿಗಳ ಪಟ್ಟಿಯಲ್ಲೂ ಹೆಸರಿಲ್ಲ. ಈ ಕೂಡಲೆ ಪಶ್ಚಿಮ ಪಾಲಿಕೆಯಿಂದ ನಡೆಯುವ ಕಾಮಗಾರಿಗಳ ಪಟ್ಟಿಯಲ್ಲಿ ಈ ಸೇತುವೆ ಅಗಲೀಕರಣ ಅಥವಾ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.-ಡಾ.ರಾಜೇಂದ್ರ ಕೆ.ವಿ., ಪಶ್ಚಿಮ ಪಾಲಿಕೆ ಆಯುಕ್ತ
