ಮಾಲೇಟಿರ, ಕಾಂಡಂಡಕ್ಕೆ ಬೊಟ್ಟೋಳಂಡ ಕಪ್

| Published : Apr 23 2024, 12:49 AM IST

ಮಾಲೇಟಿರ, ಕಾಂಡಂಡಕ್ಕೆ ಬೊಟ್ಟೋಳಂಡ ಕಪ್
Share this Article
  • FB
  • TW
  • Linkdin
  • Email

ಸಾರಾಂಶ

ಪುರುಷರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಾಚಿ ಮಂಡ ತಂಡವನ್ನು ಸೋಲಿಸಿ, ಮಾಲೇಟಿರ (ಕುಕ್ಲೂರು)ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು ಮಹಿಳಾ ವಿಭಾಗದಲ್ಲಿ ಅಜ್ಜ ಮಾಡ ತಂಡವನ್ನು ಸೋಲಿಸಿ ಕಾಂಡಂಡ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ದುಗ್ಗಳ ಸದಾನಂದಕನ್ನಡಪ್ರಭ ವಾರ್ತೆ ನಾಪೋಕ್ಲು

ಜಿಲ್ಲೆಯಲ್ಲಿ ವಿವಿಧ ಕ್ರೀಡಾಕೂಟಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದೇ ರೀತಿ ಮುಂಬರುವ ವರ್ಷಗಳಲ್ಲೂ ಕ್ರೀಡಾ ಉತ್ಸವಗಳು ಜರುಗಲಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಕ್ರೀಡಾಂಗಣದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ ಮೂರನೇ ವರ್ಷದ ಬೊಟ್ಟೋಳಂಡ ಕಪ್ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಪಂದ್ಯಾವಳಿಯ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಹಾಕಿ ಅಕಾಡೆಮಿಯ ಮನವಿಯಂತೆ ಅಕಾಡೆಮಿ ಸ್ಥಾಪನೆಗಾಗಿ 5 ಎಕರೆ ಜಾಗವನ್ನು ತೋರದಲ್ಲಿ ಗುರುತಿಸಲಾಗಿದೆ. ಹೋಬಳಿವಾರು ಕ್ರೀಡಾ ಮೈದಾನದ ಪುನಶ್ಚೇತನ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮಮಟ್ಟದಲ್ಲೂ ಕ್ರೀಡಾ ಮೈದಾನಗಳನ್ನು ಅಭಿವೃದ್ಧಿಪಡಿಸಬೇಕು. ಹಾಕಿ ಮಾತ್ರವಲ್ಲ ಎಲ್ಲ ಕ್ರೀಡೆಗಳಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಬೇಕು. ಆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸುವುದು ಅಗತ್ಯ ಎಂದರು.ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ತೀತೀರ ಅಪ್ಪಚ್ಚು ಮಾತನಾಡಿ, ಹಾಕಿ, ಕ್ರಿಕೆಟ್, ಹಗ್ಗ ಜಗ್ಗಾಟ ಮುಂತಾದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಗ್ರಾಮೀಣ ಪ್ರತಿಭೆಗಳು ಹೊರಬರಲು ಸಾಧ್ಯ. ಹಗ್ಗ ಜಗ್ಗಾಟ ಕೇವಲ ದೈಹಿಕ ಸಾಮರ್ಥ್ಯದ ಪ್ರದರ್ಶನ ಮಾತ್ರವಲ್ಲ. ಮನೋವಿಕಾಸಕ್ಕೂ ಕಾರಣವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಟ್ಟೋಳಂಡ ಕುಟುಂಬದ ಕ್ರೀಡಾ ಸಮಿತಿ ಅಧ್ಯಕ್ಷ ಬೊಟ್ಟೋಳಂಡ ಬಿ. ಗಣೇಶ್ ಗಣಪತಿ ವಹಿಸಿದ್ದರು.

ವೇದಿಕೆಯಲ್ಲಿ ಗ್ರಾಮದ ಕುಟುಂಬದ ಪಟ್ಟೆದಾರ ಬೊಟ್ಟೋಳಂಡ ಪೂಣಚ್ಚ, ಟೂರ್ನಮೆಂಟ್ ಡೈರೆಕ್ಟರ್ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಚೆಟ್ಟಂಗಡ ಕುಟುಂಬದ ಕಾರ್ಯದರ್ಶಿ ಚೆಟ್ಟಂಗಡ ರವಿ ಸುಬ್ಬಯ್ಯ, ಕ್ರೀಡಾ ಸಮಿತಿ ಸಂಚಾಲಕ ಬೊಟ್ಟೋಳಂಡ ಮಿಟ್ಟು ಪೂಣಚ್ಚ, ಕೆಪಿಎಸ್ ಶಾಲೆ ಪ್ರಭಾರ ಉಪ ಪ್ರಾಂಶುಪಾಲ ಎಂ.ಎಸ್.ಶಿವಣ್ಣ, ರೈತ ಸಂಘದ ಪ್ರಮುಖ ಕಾಡ್ಯಮಾಡ ಮನುಸೋಮಯ್ಯ, ನಾಪೋಕ್ಲು ಕೊಡವ ಸಮಾಜ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, 2025ರ ಹಗ್ಗಜಗ್ಗಾಟ ಸ್ಪರ್ಧೆಯ ಪ್ರಾಯೋಜಕರಾದ ಬಾಳೆಕುಟ್ಟಿರ ಮಂದಣ್ಣ, ಬೊಟ್ಟೋಳಂಡ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.ಸಮಾರಂಭದಲ್ಲಿ ತಿಂಗಕೊರ್ ಮೊಟ್ಟ ತಂಡದಿಂದ ನೃತ್ಯ, ಪೀಲಿಯಟ್ ನೃತ್ಯ, ಪೇರೂರು ತಂಡದಿಂದ ಕತ್ತಿಯಾಟ್, ಬೊಟ್ಟೋಳಂಡ ಕುಟುಂಬದ ಪ್ರಾಚಿ ನೃತ್ಯ ನಡೆಯಿತು.2025ರಲ್ಲಿ ನಾಲ್ಕನೇ ವರ್ಷದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಬಾಳೆಕುಟ್ಟಿರ ತಂಡದ ನೇತೃತ್ವದಲ್ಲಿ ನಡೆಯಲಿದೆ.ನಾಲ್ಕು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಶ್ರೀನಿವಾಸ್. ಬಾಳೆಯಡ ದಿವ್ಯ ಮಂದಪ್ಪ. ಮುಂಡಚಾಡಿರ ರೀನಿ ವೀಕ್ಷಕ ವಿವರಣೆ ನೀಡಿದರು.

ಹಗ್ಗಜಗ್ಗಾಟ ಫಲಿತಾಂಶ:ಪುರುಷರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಾಚಿ ಮಂಡ ತಂಡವನ್ನು ಸೋಲಿಸಿ, ಮಾಲೇಟಿರ (ಕುಕ್ಲೂರು)ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು ಮಹಿಳಾ ವಿಭಾಗದಲ್ಲಿ ಅಜ್ಜ ಮಾಡ ತಂಡವನ್ನು ಸೋಲಿಸಿ ಕಾಂಡಂಡ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಿಜೇತ ತಂಡಕ್ಕೆ 50 ಸಾವಿರ ರು. ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 30,000 ಹಾಗೂ ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.ಚೀಯಕಪೂವಂಡ, ಪಟ್ರಪಂಡ ಹಾಗೂ ಬಾದುಮಂಡ ತಂಡಗಳು ಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನ ಪಡೆದುಕೊಂಡವು.ಮಹಿಳಾ ವಿಭಾಗದಲ್ಲಿ ಪುದಿಯೊಕ್ಕಡ ನಾಪಂಡ, ಚಟ್ಟಂಡ ತಂಡಗಳು ಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನ ಗಳಿಸಿದವು. ಈ ತಂಡಗಳಿಗೆ ತಲಾ 20,000 ರು., 10000 ರು., 5000 ರು. ನಗದು ಮತ್ತು ಟ್ರೋಫಿಯನ್ನು ನೀಡಿ ಪುರಸ್ಕರಿಸಲಾಯಿತು.ಒಟ್ಟು 236 ತಂಡಗಳು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.