ತಾಲೂಕು ಪಂಚಾಯಿತಿ ಕಚೇರಿ ಎಲ್ಲಿದೆ ಎಂದು ಹುಡುಕಬೇಕಿದೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕು ಪಂಚಾಯಿತಿಯ ಕಚೇರಿಯ ಮುಂದೆಯೇ ಪೆಟ್ಟಿಗೆ ಅಂಗಡಿಯೊಂದನ್ನು ಹಾಕಲಾಗಿದೆ. ದಬ್ಬೇಘಟ್ಟ ರಸ್ತೆಯಲ್ಲಿರುವ ಈ ಸರ್ಕಾರಿ ಕಚೇರಿಯ ಮುಂಬಾಗಿಲಿಗೇ ಅಡ್ಡವಾಗಿ ಪೆಟ್ಟಿಗೆ ಅಂಗಡಿಯನ್ನು ಹಾಕಲಾಗಿದ್ದು ದಾರಿಯಲ್ಲಿ ಹೋಗುವವರಿಗೆ ತಾಲೂಕು ಪಂಚಾಯಿತಿ ಕಚೇರಿ ಎಲ್ಲಿದೆ ಎಂದು ಹುಡುಕಬೇಕಿದೆ.ಕಚೇರಿಯ ಬಾಗಿಲ ಮುಂದೆಯೇ ಅಂಗಡಿ ಹಾಕಿದ್ದರೂ ಸಹ ಅಲ್ಲಿನ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು, ನೂರೆಂಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಕಚೇರಿಯ ಮುಂದೆ ಸಾಲು ಸಾಲು ಅಂಗಡಿಗಳು ತಲೆ ಎತ್ತಿವೆ. ಈಗಾಗಲೇ ಈ ಅಂಗಡಿ ತಲೆ ಎತ್ತಿ ಮೂರ್ನಾಲ್ಕು ತಿಂಗಳಾಗಿದೆ. ಆದರೂ ಸಹ ತಾಲೂಕು ಕಚೇರಿಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಆಶ್ಚರ್ಯ ತರಿಸಿದೆ. ಸಾವರ್ಜನಿಕರ ಓಡಾಟಕ್ಕೆ ತೊಂದರೆ ಆಗದಂತೆ ಅಂಗಡಿಗಳನ್ನು ಇಟ್ಟುಕೊಂಡರೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಸಾರ್ವಜನಿಕರಿಗೆ ಇರುವ ಸರ್ಕಾರಿ ಕಚೇರಿಯೇ ಕಾಣದಂತೆ ಇಟ್ಟಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಕಚೇರಿಯೇ ಕಾಣದಂತೆ ಇಟ್ಟಿರುವ ಅಂಗಡಿಯನ್ನು ತೆರವುಗೊಳಿಸುವರೇ ಕಾದು ನೋಡಬೇಕು.