ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ 13.11.1994ರಂದು ವೀರಪ್ಪ ಎಂಬವರ ತಮ್ಮನ ಮಗ ಯತೀಶ ಎಂಬಾತನಿಗೆ ಲಾರಿ ಡಿಕ್ಕಿ ಹೊಡೆದು ಆತನ ಸಾವಿಗೆ ಕಾರಣನಾಗಿ, ತಲೆ ಮರೆಸಿಕೊಂಡಿದ್ದ ಎಲ್‌ಪಿಆರ್‌ ಪ್ರಕರಣದ ಆರೋಪಿ ಚಾಲಕನನ್ನು ಪೊಲೀಸರು 32 ವರ್ಷಗಳ ನಂತರ ಬಂಧಿಸಿದ್ದಾರೆ.

- ಜಗಳೂರು ತಾ.ಕಲ್ಲೇದೇವರಪುರದಲ್ಲಿ 1994ರಂದು ನಡೆದಿದ್ದ ಅಪಘಾತ

- - -

- ಚಾಲಕ ಕುಮಾರ ಗಂಗಾಧರಪ್ಪ (34) ವಿರುದ್ಧ ಪ್ರಕರಣ ದಾಖಲಿಸಿದ್ದ ಜಗಳೂರು ಪಿಎಸ್‌ಐ - ಕೋರ್ಟ್‌ನಲ್ಲಿ ದಂಡ ಕಟ್ಟಿ ಕೇಸ್‌ ಮುಕ್ತಾಯವಾಗಿದೆ ಎಂದು ನಂಬಿದ್ದ ಬೇರೆಡೆಗೆ ಹೋಗಿದ್ದ - ಆರೋಪಿ ನಾಪತ್ತೆ ಹಿನ್ನೆಲೆ 26.5.2000ರಂದು ಎಲ್‌ಪಿಆರ್ ಪ್ರಕರಣ ಎಂದು ಘೋಷಿಸಿದ್ದ ಕೋರ್ಟ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ 13.11.1994ರಂದು ವೀರಪ್ಪ ಎಂಬವರ ತಮ್ಮನ ಮಗ ಯತೀಶ ಎಂಬಾತನಿಗೆ ಲಾರಿ ಡಿಕ್ಕಿ ಹೊಡೆದು ಆತನ ಸಾವಿಗೆ ಕಾರಣನಾಗಿ, ತಲೆ ಮರೆಸಿಕೊಂಡಿದ್ದ ಎಲ್‌ಪಿಆರ್‌ ಪ್ರಕರಣದ ಆರೋಪಿ ಚಾಲಕನನ್ನು ಪೊಲೀಸರು 32 ವರ್ಷಗಳ ನಂತರ ಬಂಧಿಸಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಶ್ರೀ ಬಸವೇಶ್ವರ ಕಾಲನಿ ವಾಸು ಸುಭಾಷ್ ನಗರದ ವಾಸಿ, ಕೃಷಿ ಕಾರ್ಮಿಕ ಕುಮಾರ (67) ಬಂಧಿತ ಆರೋಪಿ. ಬಾಲಕ ಮೃತಪಟ್ಟಿದ್ದ ಬಗ್ಗೆ ಜಗಳೂರು ಪೊಲೀಸ್ ಠಾಣೆಗೆ ವೀರಪ್ಪ ದೂರು ನೀಡಿದ್ದರು. 1994ರಲ್ಲಿ ಆರೋಪಿ ಲಾರಿ ಚಾಲಕ ಕುಮಾರ ಗಂಗಾಧರಪ್ಪ (34) ವಿರುದ್ಧ ಜಗಳೂರು ಠಾಣೆ ಪಿಎಸ್‌ಐ, ತನಿಖಾಧಿಕಾರಿ ನಾರಾಯಣ ರಜಪೂತ್ ತನಿಖೆ ಕೈಗೊಂಡಿದ್ದರು. ಆರೋಪಿ ಕುಮಾರನ್ನು ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಸುಭಾಷ್‌ ನಗರದಲ್ಲಿ ಪತ್ತೆ ಮಾಡಿದ್ದು, ಕೋರ್ಟ್‌ಗೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಕೇಸ್‌ ವಿಚಾರಣೆ ಕಾಲಕ್ಕೆ ಹಾಜರಾಗಿದ್ದರು. ಕೋರ್ಟ್‌ನಲ್ಲಿ ದಂಡ ಕಟ್ಟಿ ಕೇಸ್‌ ಮುಕ್ತಾಯವಾಗಿದೆ ಎಂದು ಯಾರೋ ಹೇಳಿದ ಮಾತು ನಂಬಿದ್ದ. ಯಾವುದೇ ಸಮನ್ಸ್ ಮತ್ತು ವಾರೆಂಟ್‌ಗಳು ಜಾರಿಯಾಗದೇ, ಆರೋಪಿ ನಾಪತ್ತೆ ಆಗಿದ್ದರಿಂದ ನ್ಯಾಯಾಲಯ ಪ್ರಕರಣವನ್ನು 26.5.2000ರಂದು ಎಲ್‌ಪಿಆರ್ ಪ್ರಕರಣ ಎಂದು ಘೋಷಿಸಿತ್ತು. ಸದರಿ ಪ್ರಕರಣದ ಆರೋಪಿ ಕುಮಾರನ ಪತ್ತೆಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ ಮಾರ್ಗದರ್ಶನದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಜಗಳೂರು ಠಾಣೆ ಪಿಐ ಸಿದ್ರಾಮಯ್ಯ ನೇತೃತ್ವದಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ಐ ಜಿ.ಟಿ. ವೆಂಕಟೇಶ ಅವರನ್ನು ಆರೋಪಿ ಚಾಲಕ, ಆತನ ಚಾಲನಾ ಪರವಾನಿಗೆ ದಾಖಲಾತಿಯಿಂದ ಹಾಸನ ಆರ್‌ಟಿಒ ಕಚೇರಿಯಲ್ಲಿ ಮಾಹಿತಿ ಸಂಗ್ರಹಿಸಿ, ಪತ್ತೆ ಮಾಡಿಕೊಂಡು ಬರುವಂತೆ ನೇಮಿಸಿದ್ದರು. ಹಾಸನ ಆರ್‌ಟಿಒ ಕಚೇರಿಯಲ್ಲಿ ಚಾಲನಾ ಪರವಾನಿಗೆ ಪಡೆದಿದ್ದ ದಾಖಲೆ ಆಧಾರ ಹಾಗೂ ಈಡಿಗ ಜನಾಂಗದನು ಎಂಬ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಕುಮಾರನ ವಿಳಾಸ ಪತ್ತೆ ಮಾಡಿದ್ದರು. ಆರೋಪಿ ಕುಮಾರಗೆ ಈಗ 67 ವರ್ಷವಾಗಿದ್ದು, ಜ.28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಫೆ.3ರಂದು ಮುದ್ದತ್ತು ದಿನಾಂಕ ನೀಡಿದೆ. ಆರೋಪಿ ಕುಮಾರನನ್ನು ಪತ್ತೆ ಮಾಡಿ, ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ಉಪಾಧೀಕ್ಷಕರು ಗ್ರಾಮಾಂತರ ಉಪ ವಿಭಾಗ ದಾವಣಗೆರೆ, ಜಗಳೂರು ಪೊಲೀಸ್ ಠಾಣೆ ಪಿಐ, ಹಾಗೂ ಎಎಸ್‌ಐ ಜಿ.ಟಿ.ವೆಂಕಟೇಶರ ಕಾರ್ಯ ವೈಖರಿ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ. - - - -30ಕೆಡಿವಿಜಿ1: ಕುಮಾರ.