ಸಾರಾಂಶ
ಮುಂಡಗೋಡ: ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉಕ್ಕಿ ಹರಿಯುತ್ತಿದ್ದ ಕೆರೆಯನ್ನು ವೀಕ್ಷಿಸಲು ಹೋಗಿ ನೀರುಪಾಲಾಗಿದ್ದ ೯ನೇ ತರಗತಿ ಬಾಲಕ ಮಂಗಳವಾರ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ಸಾಲಗಾಂವ ಗೌಡನಕಟ್ಟೆ ಕೆರೆಯಲ್ಲಿ ನಡೆದಿದೆ.ತಾಲೂಕಿನ ಸಾಲಗಾಂವ ಗ್ರಾಮದ ಪರಶುರಾಮ ಹನ್ಮಂತಪ್ಪ ದುರಮುರ್ಗಿ(೧೫) ನೀರುಪಾಲಾದ ಬಾಲಕ. ಸೋಮವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಕೆರೆಗೆ ಹೋಗಿದ್ದ. ನೀರಿನ ರಭಸಕ್ಕೆ ಕಾಲುಜಾರಿ ಕೆರೆಪಾಲಾಗಿದ್ದ. ಜತೆಯಲ್ಲಿದ್ದ ಸ್ನೇಹಿತರು ಭಯದಿಂದ ಯಾರಿಗೂ ಹೇಳಿರಲಿಲ್ಲ.ಮನೆಯಿಂದ ಹೋದ ಮಗ ರಾತ್ರಿಯಾದರೂ ಮನೆಗೆ ಬರದೇ ಇದ್ದಾಗ ಗಾಬರಿಗೊಂಡು ಎಲ್ಲ ಕಡೆ ಹುಡುಕಿದರೂ ಸಿಗದಿದ್ದಾಗ ಸೋಮವಾರ ರಾತ್ರಿ ಮುಂಡಗೋಡ ಠಾಣೆಗೆ ದೂರು ನೀಡಿದ್ದಾರೆ.
ಮಂಗಳವಾರ ಬೆಳಗಿನ ಜಾವ ಮುಂಡಗೋಡ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಗ್ರಾಮಕ್ಕೆ ಧಾವಿಸಿ ಹುಡುಕಾಟ ನಡೆಸಿದಾಗ ಕೆರೆ ದಂಡೆಯಲ್ಲಿ ಬಾಲಕನ ಬಟ್ಟೆಗಳು ಪತ್ತೆಯಾಗಿವೆ. ಇದರಿಂದ ಬಾಲಕ ನೀರುಪಾಲಾಗಿರುವ ಅನುಮಾನ ವ್ಯಕ್ತವಾದ ಹಿನ್ನೆಲೆ ಬಾಲಕನ ಶೋಧ ಕಾರ್ಯಕ್ಕೆ ಮುಂದಾಗಿದ್ದು, ಕೆರೆಯಲ್ಲಿ ಹುಡುಕಾಟ ನಡೆಸಿದ ಬಳಿಕ ಶವ ಪತ್ತೆಯಾಗಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆಶಿರಸಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೊಸಮನೆಯಲ್ಲಿ ಮಂಗಳವಾರ ನಡೆದಿದೆ.ತಾಲೂಕಿನ ಮತ್ತಿಗಾರ ಸಮೀಪದ ಹೊಸಮನೆಯ ಸರ್ವೇಶ್ವರ ಮಹಾವಿಷ್ಣು ಹೆಗಡೆ(56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕಳೆದ 20 ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಶಿರಸಿಯ ಟಿಎಸ್ಎಸ್ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಿದ್ದರೂ ಗುಣಮುಖವಾಗದ ಹಿನ್ನೆಲೆ ಅ. ೨೨ರಂದು 12 ಗಂಟೆಯ ಸುಮಾರಿಗೆ ಮನೆಯ ಹತ್ತಿರದಲ್ಲಿರುವ ಬಾವಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಸಹೋದರ ರವಿ ಮಾಹಾವಿಷ್ಣು ಹೆಗಡೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶಾಲೆಗೆ ಬಂದ ನಾಗರಾಜ!
ಮುಂಡಗೋಡ: ತರಗತಿ ನಡೆಯುತ್ತಿರುವಾಗಲೇ ನಾಗರಹಾವು ಶಾಲೆಯೊಳಗೆ ಪ್ರತ್ಯಕ್ಷವಾದ ಘಟನೆ ತಾಲೂಕಿನ ಸಿಂಗನಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದಿದೆ.ನಾಗರಹಾವು ನೋಡಿದ ವಿದ್ಯಾರ್ಥಿಗಳೆಲ್ಲರೂ ಆತಂಕದಿಂದ ತರಗತಿಯಿಂದ ಹೊರಗೆ ಓಡಿಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪಾಳಾ ಉಪವಲಯ ಅರಣ್ಯಾಧಿಕಾರಿ ಸುನೀಲ ಹೊನ್ನಾವರ ಅವರು ಹಾವನ್ನು ಹಿಡಿದು ಮಕ್ಕಳೆದುರು ಪ್ರದರ್ಶನ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಹಾವು ಹಿಡಿದ ಅರಣ್ಯಾಧಿಕಾರಿಗಳ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಘಳು ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.