ಸಾರಾಂಶ
ಹೊಸಪೇಟೆ: ನಗರದ 7ನೇ ವಾರ್ಡ್ ಅನಂತಶಯನಗುಡಿ ಪ್ರದೇಶದ ಹೊಸ ಪ್ಲಾಟ್‌ನಲ್ಲಿ ಕಲುಷಿತ ನೀರು ಶೇಖರಣೆಯಾಗಿದ್ದ ಗುಂಡಿಗೆ ಬಿದ್ದು ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದ. ಈ ಸಾವಿಗೆ ನಗರಸಭೆ ಪೌರಾಯುಕ್ತ ಚಂದ್ರಪ್ಪರ ನಿರ್ಲಕ್ಷ್ಯ ಧೋರಣೆಯೇ ಕಾರಣ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಪಕ್ಷಾತೀತವಾಗಿ ನಗರಸಭೆ ಸದಸ್ಯರು ಸೋಮವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ಸದಸ್ಯ ಎಲ್.ಎಸ್.ಆನಂದ ಮಾತನಾಡಿ, ಅನಂತಶಯನಗುಡಿ ಪ್ರದೇಶದ ಬಾಲಕ ಸಾವು ಪ್ರಕರಣದಲ್ಲಿ ಪೌರಾಯುಕ್ತರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ವಾರ್ಡ್ ಸದಸ್ಯೆ ವಿ.ಕನಕಮ್ಮ ಪೌರಾಯುಕ್ತರಿಗೆ ಗುಂಡಿ ಮುಚ್ಚಿಸಲು ಮನವಿ ನೀಡಿದ್ದಾರೆ. ಇನ್ನು ಸ್ಥಳ ಪರಿಶೀಲನೆ ಕೂಡ ಪೌರಾಯುಕ್ತರು ಮಾಡಿದ್ದಾರೆ. ಆದರೂ ಗುಂಡಿ ಮುಚ್ಚಿಲ್ಲ. ಪೌರಾಯುಕ್ತರು ನಿರ್ಲಕ್ಷ್ಯ ಧೋರಣೆಗೆ ಅಂಟಿಕೊಂಡಿದ್ದಾರೆ. ಈಗ ಬಾಲಕನ ಸಾವಾಗಿದೆ. ಈ ಹಿಂದೆ ನಗರದ ಚಿತ್ತವಾಡ್ಗಿ ಪ್ರದೇಶದಲ್ಲಿ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿತ್ತು. ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಚರಂಡಿಗಳಲ್ಲೂ ಸ್ವಚ್ಛತೆ ಇಲ್ಲ. ನಗರದಲ್ಲಿ ಸ್ವಚ್ಛತೆ ಮಾಯವಾಗಿದೆ. ಹಾಗಾಗಿ ಪೌರಾಯುಕ್ತರನ್ನು ಕೂಡಲೇ ಅಮಾನತು ಮಾಡಬೇಕು. ನಗರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ರೈತ ಮುಖಂಡ ವೆಂಕಟೇಶ್ ಮಾತನಾಡಿ, ನಗರಸಭೆ ಪೌರಾಯುಕ್ತರು ಯಾರ ಮಾತಿಗೂ ಬಗ್ಗುತ್ತಿಲ್ಲ. ತಾನು ಶಾಸಕ ಗವಿಯಪ್ಪ ಪತ್ರದ ಆಧಾರದಲ್ಲಿ ವರ್ಗಾವಣೆ ಮಾಡಿಸಿಕೊಂಡು ಬಂದಿರುವೆ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ನಗರಸಭೆಯಲ್ಲಿ ಸದಸ್ಯರ ಮಾತಿಗೂ ಬೆಲೆ ಇಲ್ಲದಾಗಿದೆ. ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪೌರಾಯುಕ್ತರೇ ಸದಸ್ಯರ ಮಾತಿಗೆ ಬೆಲೆ ನೀಡದ್ದರಿಂದ ಇನ್ನು ಅಧಿಕಾರಿಗಳು ಬೆಲೆ ಕೊಟ್ಟಾರೆಯೇ? ನಗರದ 35 ವಾರ್ಡ್‌ಗಳಲ್ಲೂ ಕೆಲಸಗಳು ಆಗುತ್ತಿಲ್ಲ. ಕನಿಷ್ಠ ಚರಂಡಿಗಳನ್ನು ಸ್ವಚ್ಛ ಮಾಡಲಾಗುತ್ತಿಲ್ಲ. ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ನಗರದ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ನಗರಸಭೆಗೆ ಆಗುತ್ತಿಲ್ಲ. ಕಲುಷಿತ ನೀರು ತುಂಬಿದ್ದ ಗುಂಡಿ ಮುಚ್ಚಿಸಲು ಕೂಡ ನಗರಸಭೆ ಪೌರಾಯುಕ್ತರಿಗೆ ಆಗಿಲ್ಲ. ಇದರಿಂದ ಬಾಲಕನ ಸಾವಾಗಿದೆ. ಇದಕ್ಕೆ ಹೊಣೆ ಯಾರು? ಕೂಡಲೇ ಪೌರಾಯುಕ್ತರನ್ನು ಅಮಾನತುಗೊಳಿಸಬೇಕು. ಜಿಲ್ಲಾಧಿಕಾರಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ ಪೌರಾಯುಕ್ತರ ವಿರುದ್ಧ ಸದಸ್ಯರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಾಲಕನ ಕುಟುಂಬಸ್ಥರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.ನಗರಸಭೆ ಸದಸ್ಯರಾದ ಸಂತೋಷಕುಮಾರ, ಜೀವರತ್ನಂ, ಉಮಾಮಹೇಶ್ವರಿ, ಸುಂಕಮ್ಮ, ವಿ.ಕನಕಮ್ಮ, ರೂಪೇಶ್‌ಕುಮಾರ, ವಿ.ಹುಲುಗಪ್ಪ, ರೋಹಿಣಿ, ಖಾಜಾ ಬನ್ನಿ, ಅಸ್ಲಂ, ಜೆ.ಎಸ್. ಹನುಮಂತ, ಸರವಣ, ಎಂ.ಮುಮ್ತಾಜ್ ಬೇಗಂ, ಕಿರಣ್ ಎಸ್., ಕೆ.ಶಾಂತಾ, ಶಿಲ್ಪಾ, ಕೆ.ಶೇಕ್ಷಾವಲಿ, ಗಂಗಮ್ಮ, ಎಚ್.ರಾಘವೇಂದ್ರ, ಸಣ್ಣ ದುರುಗಮ್ಮ, ಕೆ.ಗೌಸ್, ಎಚ್.ಶಕುಂತಲಾ, ಎಚ್.ಕೆ. ಮಂಜುನಾಥ, ಜೆ.ಎಸ್. ರಮೇಶ್ ಗುಪ್ತಾ, ಎ.ಲತಾ, ತಾರಿಹಳ್ಳಿ ಜಂಬುನಾಥ, ಹನುಮಂತವ್ವ, ಲಕ್ಷ್ಮೀ ಪರಗಂಟಿ, ಲತಾ, ಜಿ. ರಾಧಾ, ಮುಖಂಡರಾದ ಪಿ. ವೆಂಕಟೇಶ್, ಗುಜ್ಜಲ ಗಣೇಶ್, ಗುಡುಗಂಟಿ ಮಲ್ಲಿಕಾರ್ಜುನ, ಗುಜ್ಜಲ ರಾಘು, ದ್ವಾರಕೀಶ್, ಜಗದೀಶ ಕಾಮಟಗಿ, ಶೇಖರ ಪರಗಂಟಿ, ಸಂತೋಷ್, ಪರಶುರಾಮ, ಶ್ರೀನಿವಾಸ್ ಮತ್ತಿತರರಿದ್ದರು. ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿ, ರೈತ ಸಂಘ, ಕನ್ನಡಪರ ಸಂಘಟನೆಗಳು ಸದಸ್ಯರ ಪ್ರತಿಭಟನೆಗೆ ಬೆಂಬಲಿಸಿದವು. ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.
ಗುಂಡಿಯಲ್ಲಿ ಬಿದ್ದು ನನ್ನ ಮಗ ಮೃತಪಟ್ಟಿದ್ದಾನೆ. ನಮಗೆ ನ್ಯಾಯ ದೊರಕಿಸಿ ಕೊಡಬೇಕು. ಇಂತಹ ಸ್ಥಿತಿ ಬೇರೆ ಯಾರಿಗೂ ಬರಬಾರದು. ಮಗನನ್ನು ಕಳೆದುಕೊಂಡು ದುಖಃದಲ್ಲಿದ್ದೇವೆ. ನ್ಯಾಯ ಬೇಕಿದೆ ಎನ್ನುತ್ತಾರೆ ಬಾಲಕನ ತಂದೆ ಮಚ್ಛೇಂದ್ರ ನಾಥ್.ನಗರಸಭೆ ಇತಿಹಾಸದಲ್ಲೇ ಪಕ್ಷಾತೀತವಾಗಿ ಇದೇ ಮೊದಲ ಬಾರಿಗೆ ಸದಸ್ಯರೆಲ್ಲ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಪೌರಾಯುಕ್ತರನ್ನು ಕೂಡಲೇ ಅಮಾನತು ಮಾಡಬೇಕು. ಶಾಸಕ ಎಚ್.ಆರ್. ಗವಿಯಪ್ಪ ಈ ಕುರಿತು ಸರ್ಕಾರ, ಜಿಲ್ಲಾಧಿಕಾರಿ ಗಮನ ಸೆಳೆಯಬೇಕು. ಬಾಲಕನ ಸಾವಿಗೆ ನ್ಯಾಯ ದೊರೆಯಬೇಕು ಎನ್ನುತ್ತಾರೆ ಹೊಸಪೇಟೆಯ ಪಿ. ವೆಂಕಟೇಶ್.