ಸಾರಾಂಶ
ಶಾಂತಿ ಸಭೆ । ಬಾಲ್ಯವಿವಾಹ ವಿರುದ್ಧ ಗ್ರಾಮಸ್ಥರ ವಿರುದ್ಧ ದೂರು ನೀಡಿದ್ದ ಅಂಗನವಾಡಿ ಕಾರ್ಯಕರ್ತೆ ಅತ್ತೆ । ಜಮೀನು ವಿವಾದ ಶಂಕೆ
ಕನ್ನಡಪ್ರಭ ವಾರ್ತೆ ಬೀರೂರು
ತಾಲೂಕಿನ ಬೀರೂರು ಹೋಬಳಿಯ ಯರೇಹಳ್ಳಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಬಹಿಷ್ಕಾರ ಬಣ್ಣ ನೀಡಿ ಬಿಂಬಿಸಿದ ಪರಿಣಾಮ ಗ್ರಾಮದಲ್ಲಿ ಮಂಗಳವಾರ ಬೀರೂರು ಸಿಪಿಐ, ಪಿಎಸ್ಐ ಮತ್ತು ಕಡೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.2021ರಲ್ಲಿ ಕಡೂರು ತಾಲೂಕು ಜೋಡಿತಿಮ್ಮಾಪುರದ ಒಬ್ಬ ಬಾಲಕಿ (ಮೇಘಾ ಈಗ ಪ್ರಾಪ್ತ ವಯಸ್ಕರು) ಮತ್ತು ದೊಡ್ಡಘಟ್ಟದ ಯುವಕನ ನಡುವೆ ಪ್ರೀತಿ ಬೆಳೆದು ವಿವಾಹವೂ ನಡೆದಿತ್ತು. ನಂತರ ಈ ವಿಷಯ ಠಾಣೆ ಮೆಟ್ಟಿಲೇರಿ ಅಲ್ಲಿ ಬಾಲ್ಯವಿವಾಹ ಕಾಯ್ದೆ ಅಡಿ ಯುವಕನ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಈ ವಿಷಯವನ್ನು ಯರೇಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ತೇಜಸ್ವಿನಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎಂಬ ಕಾರಣಕ್ಕೆ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ಕಾರ್ಯಕರ್ತೆಯ ಅತ್ತೆ ಸೋಮಮ್ಮ ಗ್ರಾಮಸ್ಥರ ವಿರುದ್ಧ ಬೀರೂರು ಠಾಣೆಯಲ್ಲಿ ದೂರು ನೀಡಿದ್ದರು ಎನ್ನಲಾಗಿದೆ.
ಈ ವಿಷಯವಾಗಿ ಬೀರೂರು ಸಿಪಿಐ ಎಸ್.ಎನ್.ಶ್ರೀಕಾಂತ್, ಪಿಎಸ್ಐ ತಿಪ್ಪೇಶ್ ಮತ್ತು ಸಿಡಿಪಿಒ ಶಿವಪ್ರಕಾಶ್ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಗ್ರಾಮಸ್ಥರು ಮತ್ತು ಬಹಿಷ್ಕೃತರು ಎನ್ನಲಾದ ಕುಟುಂಬದವರ ನಡುವೆ ಗ್ರಾಮದ ಶಾಲೆಯ ಆವರಣದಲ್ಲಿ ಶಾಂತಿ ಸಂಧಾನ ಸಭೆ ನಡೆಸಲಾಯಿತು.ಗ್ರಾಮದಲ್ಲಿ ಜಮೀನು ಹಂಚಿಕೆ ವಿಷಯವಾಗಿ ಗ್ರಾಮಸ್ಥರಿಗೂ ಮತ್ತು ಸೋಮಮ್ಮ ಅವರಿಗೂ ತಿಕ್ಕಾಟವಿದ್ದುದು ನಿಜ. ಬಾಲಕಿಯ ವಿವಾಹ ವಿಷಯದಲ್ಲಿ ಕಾರ್ಯಕರ್ತೆ ಯಾರಿಗೂ ಮಾಹಿತಿ ನೀಡಿಲ್ಲ ಮತ್ತು ಅವರನ್ನು ಅಧಿಕಾರಿಗಳು ಸ್ಥಳ ಪರಿಶೀಲನೆಗೂ ಕರೆದಿರಲಿಲ್ಲ. ಬಗರ್ ಹುಕುಂ ಜಮೀನು ಹಂಚಿಕೆ ವಿಷಯವಾಗಿ ಇದ್ದ ಮುನಿಸನ್ನು ಈ ರೀತಿ ಬಿಂಬಿಸಲಾಗಿದೆ ಎಂದು ತಿಳಿದು ಬಂದಿದೆ ಎಂದು ಹೇಳಲಾಗಿದೆ.
ಶಾಂತಿಸಭೆ ಉದ್ದೇಶಿಸಿ ಮಾತನಾಡಿದ ಬೀರೂರು ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಎನ್.ಶ್ರೀಕಾಂತ್, ಬಹಿಷ್ಕಾರ ಅಥವಾ ದಂಡ ವಿಧಿಸುವ ಅಧಿಕಾರ ಗ್ರಾಮಸ್ಥರಿಗೆ ಇಲ್ಲ ಹಾಗೂ ಇದು ಕಾನೂನು ವಿರೋಧಿ ಕೃತ್ಯವಾಗಿರುತ್ತದೆ. ಇಂತಹ ಪ್ರಕರಣಗಳು ಘಟಿಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಗ್ರಾಮಸ್ಥರಿಗೆ ಎಚ್ಚರಿಸಿದರು.ಸಿಡಿಪಿಒ ಶಿವಪ್ರಕಾಶ್, ಬಾಲ್ಯವಿವಾಹ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ತೀವ್ರತರವಾದ ಅಪರಾಧಗಳಾಗಿವೆ. ಇಂತಹ ವಿಷಯಗಳನ್ನು ಗ್ರಾಮಸ್ಥರು, ಸಾರ್ವಜನಿಕರು ಇಲಾಖೆಯ ಗಮನಕ್ಕೆ ತರಬೇಕು ಎಂದರು. ಕಾರ್ಯಕರ್ತೆಯನ್ನು ಘಟನೆಯ ವಿಷಯವಾಗಿ ವಿಚಾರಿಸಿದರು. ತಮ್ಮನ್ನು ಬಾಲ್ಯವಿವಾಹದ ಪ್ರಕರಣದಲ್ಲಿ ಯಾರನ್ನೂ ಗುರುತಿಸಲು ಕರೆದೊಯ್ದಿರಲಿಲ್ಲ ಮತ್ತು ತಾವು ಈ ವಿಷಯವಾಗಿ ಯಾರಿಗೂ ಮಾಹಿತಿ ನೀಡಿಲ್ಲ ಎಂದು ತೇಜಸ್ವಿನಿ ತಿಳಿಸಿದರು.
ಗ್ರಾಮಸ್ಥರಾದ ವೆಂಕಟೇಶ್ ಮತ್ತು ಲೋಕೇಶ್ ಮಾತನಾಡಿ, ಇಲ್ಲಿ ಯಾರಿಗೂ ಬಹಿಷ್ಕಾರ ಹಾಕಿಲ್ಲ, ಕಾರ್ಯಕರ್ತೆ ಮತ್ತು ಅವರ ಕುಟುಂಬದವರೇ ಸುಳ್ಳು ಹೇಳಿಕೆ ನೀಡಿದ್ದಾರೆ. ಅವರ ಪತಿಯ ವಿರುದ್ಧವೇ ಹಲ್ಲೆ ಪ್ರಕರಣ ದಾಖಲಾಗಿದೆ, ಅತ್ತೆ ಸೋಮಮ್ಮ ಜಮೀನು ವಿಚಾರವಾಗಿ ಇದ್ದ ವಿಷಯಕ್ಕೆ ಬಹಿಷ್ಕಾರದ ಬಣ್ಣ ಹಚ್ಚಿದ್ದಾರೆ. ಅಗತ್ಯವಿದ್ದರೆ ಅಧಿಕಾರಿಗಳು ಅವರ ಮನೆ ಬಳಿ ಪರಿಶೀಲನೆ ನಡೆಸಲಿ, ನಾವು ಅವರಿಗೆ ತೊಂದರೆ ನೀಡಿದ್ದರೆ ಕ್ರಮವಹಿಸಲಿ ಎಂದರು.ಬೀರೂರು ಪಿಎಸ್ಐ ತಿಪ್ಪೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಚೇರಿಯ ಅನಿತಾ, ಗ್ರಾಮಸ್ಥರು ಇದ್ದರು.