ಸಾರಾಂಶ
ಮೀನುಗಾರರು ಬಂದರು ಕಾಮಗಾರಿ ಕೈ ಬಿಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಹೊನ್ನಾವರ: ಬಂದರು ಕಾಮಗಾರಿ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಕಾಸರಕೋಡ ಟೊಂಕಾ ಮೀನುಗಾರು ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ ಹಿನ್ನೆಲೆ ಗ್ರಾಮಕ್ಕೆ ಡಿಸಿ ಗಂಗೂಬಾಯಿ ಮಾನಕರ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮೀನುಗಾರರು ಮತದಾನ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ಗುರುವಾರ ಕಾಸರಕೋಡ ಗ್ರಾಮಕ್ಕೆ ಭೇಟಿ ನೀಡಿ ಮತದಾನ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಜಿಲ್ಲಾಧಿಕಾರಿಗಳು ಮೀನುಗಾರರ ಮನವೊಲಿಸಲು ಪ್ರಯತ್ನಿಸಿದರು. ಇಲ್ಲಿನ ಮಲ್ಲುಕುರ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ಮತ್ತು ಮೀನುಗಾರರ ಜತೆ ಡಿಸಿಯವರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮೀನುಗಾರರು ಬಂದರು ಕಾಮಗಾರಿ ಕೈ ಬಿಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಡಿಸಿ ಗಂಗೂಬಾಯಿ ಮಾನಕರ ಮಾತನಾಡಿ, ಸರ್ಕಾರದ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ವ್ಯಾಪ್ತಿಯಲ್ಲಿ ಆಗಬಹುದಾದ ಸಹಾಯವನ್ನು ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು.ಸದ್ಯದಲ್ಲೇ ಮಾತುಕತೆಯನ್ನು ನಡೆಸೋಣ. ಅಲ್ಲಿಯವರೆಗೆ ಬಂದರು ನಿರ್ಮಾಣ ಕಂಪನಿಯವರು ಯಾವುದೇ ಕಾಮಗಾರಿ ನಡೆಸದಂತೆ ಕ್ರಮ ವಹಿಸಲಾಗುವುದು ಎಂದು ಡಿಸಿಯವರು ಭರವಸೆ ನೀಡಿದರು.
ಇದಕ್ಕೆ ಮೀನುಗಾರರಾದ ರಾಜೇಶ್ ತಾಂಡೇಲ್, ಜಗ್ಗು ತಾಂಡೇಲ್, ರಾಜು ತಾಂಡೇಲ್, ಹಮ್ಜಾ ಸಾಬ್ ಮತ್ತಿತರರು ಮಾತನಾಡಿ, ಮೀನುಗಾರರ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಮತ್ತು ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡಬೇಕು. ಮೀನುಗಾರರು ಈಗ ವಾಸವಿರುವ ಮತ್ತು ಹಿಂದೆ ತಮ್ಮ ಪೂರ್ವಜರು ವಾಸವಾಗಿದ್ದ ಸ್ಥಳದ ಜಮೀನಿಯ ಹಕ್ಕುಗಳನ್ನು ಗ್ರಾಮ ನಕ್ಷೆ ಮತ್ತು ದಾಖಲೆಗಳಲ್ಲಿ ಅಡಕಗೊಳಿಸುವುದು ಕೆಲಸಗಳನ್ನು ಜಿಲ್ಲಾಡಳಿತದಿಂದ ಆಗಬೇಕು ಎಂದು ಆಗ್ರಹಿಸಿದರು.ಮೀನುಗಾರ ಮುಖಂಡ ರಾಜು ತಾಂಡೇಲ್ ಅವರು, ನಮಗೆ ನ್ಯಾಯ ಕೊಡಲಾಗದಿದ್ದರೆ ದಯಾಮರಣ ನೀಡಿ ಎಂದು ಅಳಲು ತೋಡಿಕೊಂಡರು. ಕೊನೆಗೆ ಡಿಸಿ ಗಂಗೂಬಾಯಿ ಮಾನಕರ ಅವರು, ನಿಮ್ಮ ಬೇಡಿಕೆಗಳನ್ನು ಟಿಪ್ಪಣಿ ಮಾಡಿ ತಹಸೀಲ್ದಾರರಿಗೆ ಹಾಗೂ ತಮ್ಮ ಕಚೇರಿಗೆ ನೀಡಿ ಎಂದು ಮೀನುಗಾರರಿಗೆ ಹೇಳಿದರು.ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗ ಸಹಾಯಕ ಆಯುಕ್ತೆ ಡಾ. ನಯನಾ, ಡಿವೈಎಸ್‌ಪಿ ಮಹೇಶ್ ಎಂ.ಕೆ., ತಹಸೀಲ್ದಾರ್ ರವಿರಾಜ್ ದೀಕ್ಷಿತ್, ಎಇಒ ಆನಂದ್, ಪಿಡಿಒ ಉದಯ್, ನೂರಾರು ಸಂಖ್ಯೆಯಲ್ಲಿ ಮೀನುಗಾರರು ಉಪಸ್ಥಿತರಿದ್ದರು.
ಯೋಗ್ಯ ಪರಿಹಾರ: ನ್ಯಾಷನಲ್ ಗ್ರಿನ್ ಟ್ರಿಬ್ಯೂನಲ್‌ನಿಂದ ಬಂದರು ಕೆಲಸಕ್ಕೆ ಕ್ಲಿಯರೆನ್ಸ್ ನೀಡಿದ್ದಾರೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಾಗಿದೆ. ಸರ್ಕಾರದ ವತಿಯಿಂದ ರಸ್ತೆ ಮಾಡಬೇಕಾಗಿದೆ. ರಸ್ತೆ ಮಾರ್ಗಕ್ಕೊಳಪಡುವ ಜಮೀನಿನ ಮಾಲೀಕರಿಗೆ ಯೋಗ್ಯ ಪರಿಹಾರ ಸರ್ಕಾರದಿಂದ ನೀಡಲಾಗುತ್ತದೆ. ಅಭಿವೃದ್ಧಿ ವಿಚಾರಕ್ಕೆ ಎಲ್ಲರೂ ಕೈಜೋಡಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.