ತುಳಿಸಿಕೆರಯಲ್ಲಿ ಬಹಿಷ್ಕಾರ, ಇಂಡಿಗನತ್ತದಲ್ಲಿ ಇವಿಎಂ ದ್ವಂಸ

| Published : Apr 27 2024, 01:15 AM IST

ಸಾರಾಂಶ

ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪಿಯ ತುಳಸಿಕೆರೆಯಲ್ಲಿ ಚುನಾವಣಾ ಬಹಿಷ್ಕಾರ ನಡೆದಿದ್ದು, ಇಂಡಿಗನತ್ತದಲ್ಲಿ ಗಲಾಟೆ ನಡೆದು ಇವಿಎಂ ದ್ವಂಸ ಮಾಡಲಾಗಿದೆ. ಉ‍ಳಿದಡೆ ಶಾಂತಿಯುತ ಮತದಾನ ನಡೆದಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪಿಯ ತುಳಸಿಕೆರೆಯಲ್ಲಿ ಚುನಾವಣಾ ಬಹಿಷ್ಕಾರ ನಡೆದಿದ್ದು, ಇಂಡಿಗನತ್ತದಲ್ಲಿ ಗಲಾಟೆ ನಡೆದು ಇವಿಎಂ ದ್ವಂಸ ಮಾಡಲಾಗಿದೆ. ಉ‍ಳಿದಡೆ ಶಾಂತಿಯುತ ಮತದಾನ ನಡೆದಿದೆ.ಜಿಲ್ಲಾದ್ಯಂತ ಬೆಳಗ್ಗೆ 7ರಿಂದ ಆರಂಭವಾದ ಮತದಾನ ಬಿರುಬಿಸಿಲಿನ ನಡುವೆಯೂ ಜಿಲ್ಲಾದ್ಯಂತ ಶಾಂತಿಯುತವಾಗಿ ನಡೆಯಿತು. ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹುಂಡಿ ಮತ್ತು ಹನೂರು ವಿಧಾನಸಭಾ ಕ್ಷೇತ್ರದ ಕೊಂಗರಹಳ್ಳಿಯಲ್ಲಿ ಮಾತ್ರ ಮತಯಂತ್ರದಲ್ಲಿ ತಾಂತ್ರಿಕ ದೋಷಕಾಣಿಸಿಕೊಂಡಿತು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪಿಯ ತುಳಸಿಕೆರೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಚುನಾವಣಾ ಬಹಿಷ್ಕಾರ ನಡೆಯಿತು. ಇಂಡಿಗನತ್ತ ಮತಗಟ್ಟೆಯಲ್ಲಿ ಬಹಿಷ್ಕಾರ ಮಾಡಲು ಮೊದಲೇ ತೀರ್ಮಾನ ಮಾಡಲಾಗಿತ್ತು. ಕೆಲವರು ಮತದಾನ ಮಾಡಿದ್ದರಿಂದ ಆಕ್ರೋಶಗೊಂಡ ಕೆಲವರು ಮತಗಟ್ಟೆ ಬಾಗಿಲು, ಮೇಜು, ಕಿಟಕಿ, ಕುರ್ಚಿ ಮತ್ತು ಮತ ಯಂತ್ರ ಪರಿಕರಗಳನ್ನು ದ್ವಂಸ ಮಾಡಿ, ಮತ ಕೇಂದ್ರದ ಕಾಂಪೌಂಡ್ ಸಹ ವಿರೂಪಗೊಳಿಸಿ ಚುನಾವಣೆಗೆ ಬಳಸಿಕೊಳ್ಳಲಾಗಿದ್ದ ಮೂರು ಸರ್ಕಾರಿ ವಾಹನಗಳನ್ನು ಸಹ ಜಖಂಗೊಳಿಸಿದ ಅಹಿತಕಾರಿ ಘಟನೆ ನಡೆಯಿತು. ಜಿಲ್ಲಾಡಳಿತ, ಜಿಪಂ ನಗರಸಭೆ ವತಿಯಿಂದ ಲೋಕಸಭೆ ಚುನಾವಣೆಯ ಪ್ರಯುಕ್ತ ಸ್ಥಾಪಿಸಲಾಗಿದ್ದ ಸಾಮನ್ಯ ಮತಗಟ್ಟೆ ಹಾಗೂ ಯುವ ಮತದಾರರ ಯುವ ಸೌರಭ, ಮಹಿಳಾ ಮತದಾರ ಪಿಂಕ್‌ ಮತಗಟ್ಟೆ, ಲಿಂಗತ್ವ ಅಲ್ಪಾಸಂಖ್ಯಾತರ ವಿಶೇಷ ಮತಗಟ್ಟೆಗಳಿಗೆ ಮತದಾರರು ಆಗಮಿಸಿ ಬೆಳೆಗ್ಗೆಯಿಂದಲೇ ಉತ್ಸಾಹದಿಂದ ಮತ ಚಲಾಯಿಸಿದರು.ಚಾಮರಾಜನಗರದ ರಾಮಸಮುದ್ರ ಬಡಾವಣೆಯ ಬಾಲರಪಟ್ಟಣ ಶಾಲೆಯ ಎದುರು ಇರುವ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಸ್ಥಾಪಿಸಲಾಗಿರುವ ಸಾಂಪ್ರಾದಾಯಿಕ ಮತಗಟ್ಟೆಯಲ್ಲಿ ಇಡಲಾಗಿದ್ದ ಕಲಾವಿದರು ಬಳಸುವ ಡೊಳ್ಳು, ತಮಟೆ, ನಗಾರಿ ವಾಲಗ, ಹಾರ್ಮೋನಿಯಂ, ಇತರೆ ವಾದ್ಯ ಪರಿಕರಗಳು ಮತದಾರರ ಗಮನ ಸೆಳೆಯಿತು. ಮತದಾನ ಮಾಡಿದ ಕೆಲವರು ಅಲ್ಲೇ ನಿರ್ಮಿಸಿದ್ದ ಸೆಲ್ಫಿ ಸ್ಪಾಟ್‌ಗಳಿಗೆ ತೆರಳಿ ಸೆಲ್ಫಿ ತೆಗೆದುಕೊಂಡು ನಗೆ ಬೀರಿದರು.ಜಿಲ್ಲೆಯಲ್ಲಿ 18 ವರ್ಷ ತುಂಬಿದ ನೂತನ ಯುವ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ನಗರದ ಅಂಬೇಡ್ಕರ್‌ ಬಡಾವಣೆಯಲ್ಲಿ ಸ್ಥಾಪಿಸಿದ್ದ ಯುವಸೌರಭ ಮತಗಟ್ಟೆ ಹಾಗೂ ಮಹಿ‍ಳ‍ೆಯರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಯಲ್ಲಿ ಸ್ಥಾಪಿಸಿದ್ದ ಪಿಂಕ್‌ ಮತಗಟ್ಟೆಗಳು ವಿಶೇಷ ಆಕರ್ಷಣೆಯಾಗಿತ್ತು.ಗಣ್ಯರ ಮತದಾನ:ನಗರಸಭೆ ವ್ಯಾಪ್ತಿಯಲ್ಲಿರುವ ಪಿಡಬ್ಲ್ಯೂಡಿ ಶಾಲೆಯಲ್ಲಿ ಚುನಾವಣಾಧಿಕಾರಿ ಶಿಲ್ಪಾನಾಗ್‌, ಮೂಡ್ಲೂಪುರ ಗ್ರಾಮದ ಮತಗಟ್ಟೆಯಲ್ಲಿ ಕೆಂಡಸಂಪಿಗೆ ಚಲನಚಿತ್ರ ನಟ ವಿಕ್ಕಿ ವರುಣ್, ಟಗರಪುರದಲ್ಲಿ ನಟ ನಾಗಭೂಷಣ್‌, ಶಾಸಕರಾದ ಎ.ಆರ್‌.ಕೃಷ್ಣಮೂರ್ತಿ ಆಲೂರಿನಲ್ಲಿ, ಎಚ್‌.ಎಂ.ಗಣೇಶ್‌ ಪ್ರಸಾದ್‌ ಹಾಲಹಳ್ಳಿಯಲ್ಲಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಉಪ್ಪಿನ ಮೊಳೆಯಲ್ಲಿ , ಬಿಜೆಪಿ ಅಭ್ಯರ್ಥಿ ಎಸ್‌. ಬಾಲರಾಜು ಮದ್ದೂರಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು.