ಚಿತ್ರದುರ್ಗ ನಗರಸಭೆ ಸದಸ್ಯರಿಂದ ಅಧಿವೇಶನ ಬಹಿಷ್ಕಾರ

| Published : Oct 01 2024, 01:15 AM IST

ಸಾರಾಂಶ

ಚಿತ್ರದುರ್ಗ ನಗರಸಭೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿವೇಶನವನ್ನು ಬಹಿಷ್ಕರಿಸಿ ಹೊರ ನಡೆದ ಸದಸ್ಯರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಮಯ ಪಾಲನೆ ಮಾಡದೆ ಜನಪ್ರತಿನಿಧಿಗಳಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ನಗರಸಭೆ ಸದಸ್ಯರು ಅಧಿವೇಶನವನ್ನೇ ಬಹಿಷ್ಕರಿಸಿದ ಘಟನೆ ಸೋಮವಾರ ಜರುಗಿತು.

ಸಭೆಗೆ ತಡವಾಗಿ ಆಗಮಿಸಿದುದಕ್ಕೆ ಪೌರಾಯುಕ್ತೆ ರೇಣುಕಾ ಕ್ಷಮೆಯಾಚಿಸಿದರೂ ಕೂಡ ಸದಸ್ಯರು ಕಿವಿಗೊಡದೆ ಸಭೆಯಿಂದ ಎದ್ದು ಹೊರ ನಡೆದು, ಮತ್ತೊಂದು ದಿನ ನಿಗಧಿ ಮಾಡುವಂತೆ ಆಗ್ರಹಿಸಿದರು.

ಇಲ್ಲಿನ ನಗರಸಭೆ ಕಚೇರಿಯಲ್ಲಿ 16 ತಿಂಗಳ ನಂತರ ಸಾಮಾನ್ಯ ಸಭೆ ಆಯೋಜಿಸಲಾಗಿದ್ದು, ಕೆಲ ಗಂಭೀರ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತವೆ ಎಂದು ಭಾವಿಸಲಾಗಿತ್ತು. 11ಗಂಟೆಗೆ ಆರಂಭವಾಗಬೇಕಿದ್ದ ಸಭೆ ತುಸು ತಡವಾಗಿದ್ದು, 11-10ಕ್ಕೆ ಅಧ್ಯಕ್ಷೆ ಸುಮಿತ ರಾಘು ಹಾಗೂ ಉಪಾಧ್ಯಕ್ಷೆ ಶ್ರೀದೇವಿ ಆಗಮಿಸಿ ಸಭಾಂಗಣದಲ್ಲಿ ಆಸೀನರಾದರು. ಅದರೆ ಪೌರಾಯುಕ್ತೆ ರೇಣುಕಾ 11-30ಕ್ಕೆ ಆಗಮಿಸಿದ್ದು, ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ಸಭೆಯ ಆರಂಭದಲ್ಲಿ ನಾಡಗೀತೆಗೂ ಅವಕಾಶ ಕೊಡದೆ ಏರು ದನಿಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಗೊಪ್ಪೆ ಮಂಜುನಾಥ್, ನಗರಸಭೆ ಸಾಮಾನ್ಯ ಅಧಿವೇಶನವೆಂದರೆ ಸ್ಥಳೀಯ ಅಸೆಂಬ್ಲಿ ಇದ್ದಂತೆ. ಸಭೆ ಆರಂಭವಾಗುವ ಹದಿನೈದು ನಿಮಿಷ ಮುಂಚೆ ಎಲ್ಲ ಅಧಿಕಾರಿಗಳು ಸಭಾಂಗಣದಲ್ಲಿ ಇರಬೇಕು. ಆದರೆ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಬಂದರೂ ಸಹಿತ ಪೌರಾಯುಕ್ತರು ತಡವಾಗಿ ಬರುತ್ತಾರೆ ಎಂದರೆ ಏನರ್ಥ. ಪೌರಾಯುಕ್ತರಿಗಾಗಿ ಅಧ್ಯಕ್ಷರು ಕಾದು ಕುಳಿತುಕೊಳ್ಳಬೇಕೇ. ಅಧಿವೇಶನ ನಡೆಸಲು ಮುಖ್ಯಮಂತ್ರಿಗಳು ಎಂದಾದರೂ ಅಧಿಕಾರಿಗಳಿಗಾಗಿ ಕಾದು ಕುಳಿತಿದ್ದದ್ದು ನೋಡಿದಿರಾ ಎಂದು ಪ್ರಶ್ನಿಸಿದರು.

ಸದಸ್ಯ ಅಂಗಡಿ ಮಂಜುನಾಥ್ ಅವರು ಮೆಟ್ಟಿಲು ಹತ್ತುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಲಿಫ್ಟ್ ಮೂಲಕ ಕರೆದುಕೊಂಡು ಬರೋಣವೆಂದು ಅವರ ಜೊತೆಯಲ್ಲಿ ಇದ್ದೆ. ಹಾಗಾಗಿ ತುಸು ತಡವಾಯಿತು. ತಡವಾಗಿದ್ದಕ್ಕ ಕ್ಷಮೆ ಕೋರುವುದಾಗಿ ಪೌರಾಯುಕ್ತೆ ರೇಣು ಹೇಳಿದರೂ ಕೂಡ ಸದಸ್ಯರು ಕಿವಿ ಗೊಡಲಿಲ್ಲ. ಲಿಫ್ಟ್ ಕೆಟ್ಟಿದ್ದರೆ ಮೊದಲೇ ದುರಸ್ತಿ ಮಾಡಿಸಬೇಕಿತ್ತು. ಲಿಫ್ಟ್ ಅಳವಡಿಸಿದ ಗುತ್ತಿಗೆದಾರನ ಕಪ್ಪು ಪಟ್ಟಿಗೆ ಸೇರಿಸುವಂತೆ ಸದಸ್ಯ ಮಂಜುನಾಥ ಗೊಪ್ಪೆ ಆಗ್ರಹಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಪೌರಾಯುಕ್ತೆ ರೇಣುಕಾ, ಮೊದಲು ನಾಡಗೀತೆ ಹಾಗೂ ಅಸು ನೀಗಿದ ಸದಸ್ಯರಿಗೆ ಗೌರವ ಸಲ್ಲಿಸಿದ ನಂತರ ಚರ್ಚಿಸೋಣ ಎಂದಾಗ ಸಭೆಗೆ ಸಮ್ಮತಿಸಿತಾದರೂ ನಾಡಗೀತೆ ನಂತರ ಸದಸ್ಯರು ಸಭೆ ನಡೆಸದೇ ಇರುವ ತೀರ್ಮಾನಕ್ಕೆ ಬಂದಂತೆ ಕಂಡಿತು.

ಸಭೆಯಲ್ಲಿ ಉತ್ತರಿಸಲು ಎಂಜಿನಿಯರ್‌ಗಳೆ ಇಲ್ಲ. ಇನ್ನೂ ಯಾರನ್ನು ಮುಂದಿಟ್ಟುಕೊಂಡು ಸಭೆ ನಡೆಸುತ್ತೀರಿ. ಅಧಿಕಾರಿಗಳಿಗೆ ಸಭೆಗೆ ಹಾಜರಿರಬೇಕು ಎಂಬ ಪರಿಜ್ಞಾನ ಬೇಡವೇ ಎಂದು ಗೊಪ್ಪೆ ಮಂಜುನಾಥ್ ಪ್ರಶ್ನಿಸಿದರು.

ಈ ಮಾತಿಗೆ ದನಿ ಗೂಡಿಸಿದ ಸರ್ದಾರ್ ಅಹಮದ್ ಪಾಷಾ, ಸಭೆಯಲ್ಲಿ ಸಿಬ್ಬಂದಿ ಹಾಜರಿರುವಂತೆ ನೋಡಿಕೊಳ್ಳುವುದು ಪೌರಾಯುಕ್ತರ ಕರ್ತವ್ಯ. ಇದು ನೀವು ಬಿಗಿಯಾಗಿಲ್ಲವೆಂಬುದನ್ನು ತೋರಿಸುತ್ತದೆ ಎಂದರು.

ಸದಸ್ಯ ಶ್ರೀನಿವಾಸ್ ಮಾತನಾಡಿ, ಅಧ್ಯಕ್ಷರು, ಪೌರಾಯುಕ್ತರ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ಆಡಳಿತದಲ್ಲಿ ಬಿಗಿ ಇಲ್ಲದಿದ್ದರೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ದೂರಿದರು.

ಅಧಿಕಾರಿಗಳ ಬೇಜವಾಬ್ದಾರಿ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಹಳೇ ನಿಲುವಿಗೆ ಬದ್ಧರಾದ ಸದಸ್ಯ ಗೊಪ್ಪೆ ಮಂಜುನಾಥ್ ಸಭೆ ಬಹಿಷ್ಕರಿಸಿ ಹೋಗೋಣ. ಮತ್ತೊಂದು ದಿನ ಸಭೆ ಕರೆಯಲಿ ಎಂದಾಗ ಅಧ್ಯಕ್ಷೆ ಸುಮಿತಾ, ಉಪಾಧ್ಯಕ್ಷೆ ಶ್ರೀದೇವಿ ಆಸನದಿಂದ ಮೇಲೆದ್ದು ಹೊರ ನಡೆದರು.