ರಸ್ತೆ ದುರಸ್ತಿ ಮಾಡದಿದ್ದರೆ ಚುನಾವಣೆ ಬಹಿಷ್ಕಾರ

| Published : Apr 23 2024, 12:45 AM IST

ಸಾರಾಂಶ

ಒಂದು ಕಿಮೀ ಅಧಿಕ ದೂರವಿರವ ಈ ಮಾರ್ಗದ ತುಂಬಾ ಕಲ್ಲುಗಳ ರಾಶಿ ಬಿದ್ದಿದ್ದು, ನಡೆದುಕೊಂಡು ತೆರಳಲು ತೊಂದರೆಯಾಗುತ್ತಿದೆ.

ಗೋಕರ್ಣ: ಹಿರೇಗುತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಧ್ಯ ಹರಿಜನಕೇರಿಯಿಂದ ಕುಂಬಾರಗದ್ದೆ ಮೂಲಕ ಕೋಳಿಮಂಜುಗುಣಿ ಶಾಲೆಗೆ ತೆರಳುವ ರಸ್ತೆ ಹಾಳಾಗಿದ್ದು, ಹಲವು ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಸರಿಪಡಿಸದ ಕಾರಣ ಲೋಕಸಭಾ ಚುಣಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಜಟ್ಟಿ, ಹೊಸಬು ಪಟಗಾರ, ಈಶ್ವರ ಶಿವು ಪಡ್ತಿ, ಸೀತಾರಾಮ ನಾರಾಯಣ ಪಡ್ತಿ, ಸುಕ್ರು ನಾರಾಯಣ ಗೌಡ ಮುಂತಾದವರು ಲಿಖಿತವಾಗಿ ತಿಳಿಸಿದ್ದು, ಈ ಭಾಗದಲ್ಲಿ ಒಟ್ಟು 95 ಮನೆಗಳಿವೆ. 450ಕ್ಕೂ ಹೆಚ್ಚು ಜನರಿದ್ದಾರೆ. ನಿತ್ಯ ಕೆಲಸ, ಕಾರ್ಯಗಳಿಗೆ ಕಚ್ಚಾ ರಸ್ತೆಯನ್ನೆ ಅವಲಂಬಿಸಿದ್ದಾರೆ. ಇಲ್ಲಿನ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾದರೆ ಹೊತ್ತು ಸಾಗುವ ಪರಿಸ್ಥಿತಿ ಇದೆ. ಒಂದು ಕಿಮೀ ಅಧಿಕ ದೂರವಿರವ ಈ ಮಾರ್ಗದ ತುಂಬಾ ಕಲ್ಲುಗಳ ರಾಶಿ ಬಿದ್ದಿದ್ದು, ನಡೆದುಕೊಂಡು ತೆರಳಲು ತೊಂದರೆಯಾಗುತ್ತಿದೆ. ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ಸಹ ಇಲ್ಲೆ ಇದ್ದು, ವಿದ್ಯಾರ್ಥಿಗಳು ಪರದಾಡಬೇಕಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಶಾಸಕರ ಬಳಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನಾವಗಿಲ್ಲ. ಇದರಿಂದ ಬೇಸತ್ತು ಚುನಾವಣೆ ಬಹಿಷ್ಕಾರ ನಿರ್ಧಾರಕ್ಕೆ ಬಂದಿದ್ದೇವೆ ಎಂದಿದ್ದಾರೆ.

ಹೊಸ ಸೇತುವೆ ನಿರ್ಮಾಣವಾಗದಿದ್ದರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಕಾರವಾರ: ಹೊನ್ನಾವರ ತಾಲೂಕಿನ ಪಾವಿನಕುರ್ವಾ ತೂಗು ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಹೊಸದಾಗಿ ಕಾಂಕ್ರೀಟ್ ಸೇತುವೆ ನಿರ್ಮಿಸಿಕೊಡಬೇಕು. ಈ ಕಾಮಗಾರಿ ಆರಂಭಿಸದೇ ಇದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ಶನಿವಾರ ಮನವಿ ನೀಡಿದರು.ಕೂಲಿ, ಮೀನುಗಾರಿಕೆ, ಕೃಷಿ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದು, ಸ್ಥಳೀಯರ ಪ್ರತಿನಿತ್ಯದ ಸಂಚಾರಕ್ಕೆ ಪಾವಿನಕುರ್ವಾದಲ್ಲಿರುವ ತೂಗು ಸೇತುವೆಯನ್ನು ದಾಟಬೇಕಾಗಿರುವ ಅನಿವಾರ್ಯತೆ ಇದೆ. ಪಾವಿನಕುರ್ವಾ ಮಜರೆಯಿಂದ ಶಾಲೆ, ಕಾಲೇಜಿಗೆ ಪ್ರತಿನಿತ್ಯ ೭೦-೮೦ ವಿದ್ಯಾರ್ಥಿಗಳು ಇದೇ ಸೇತುವೆಯ ಮೂಲಕ ಸಂಚರಿಸುತ್ತಾರೆ. ಈ ತೂಗು ಸೇತುವೆಯು ಒಂದು ಪ್ರವಾಸಿ ತಾಣವಾಗಿದ್ದು, ಪ್ರತಿನಿತ್ಯ ನೂರಾರು ಪ್ರವಾಸಿಗರು ಇಲ್ಲಿಯ ಪ್ರೇಕ್ಷಣಿಯ ಸ್ಥಳವನ್ನು ವೀಕ್ಷಿಸಲು ಆಗಮಿಸುತ್ತಿದ್ದು, ಇದೇ ಸೇತುವೆಯ ಮೂಲಕ ಸಂಚಾರ ಮಾಡುತ್ತಾರೆ. ಆದರೆ ಸೇತುವೆಯ ಸರಿಯಾದ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಗೆ ತಲುಪಿದೆ.೨೦-೨೫ ವರ್ಷಗಳ ಹಳೆಯದಾಗಿದ್ದು, ಈ ಸೇತುವೆಗೆ ಅಳವಡಿಸಿರುವ ಕಬ್ಬಿಣದ ಸರಳು, ಕಬ್ಬಿಣದ ರೋಪ್, ಸೇತುವೆಯ ಎರಡು ಬದಿಗಳಲ್ಲಿ ಅಳವಡಿಸಿರುವ ಜಾಳಿಗೆ ಹಾಗೂ ಕೆಳಭಾಗದಲ್ಲಿ ಅಳವಡಿಸಿರುವ ಸಿಮೆಂಟ್ ಹಲಿಗೆಗಳು ಬಿಸಿಲು ಹಾಗೂ ಮಳೆಗಾಲದ ನೀರಿನಿಂದ ಸವೆದು ಶಿಥಿಲಾವಸ್ಥೆಗೆ ಬಂದಿದೆ. ಹೀಗಾಗಿ ಅಪಾಯಕಾರಿಯಾಗಿದ್ದು, ಈ ಸೇತುವೆ ಬದಲಾಗಿ ಹೊಸದಾದ ಕಾಂಕ್ರೀಟ್ ಸೇತುವೆ ನಿರ್ಮಿಸಿಕೊಡಬೇಕು. ಸೇತುವೆ ಬಗ್ಗೆ ಜಿಲ್ಲಾಡಳಿತ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹರೀಶ ನಾಯ್ಕ, ವಿಶ್ವನಾಥ ಖಾರ್ವಿ, ಮಂಜುನಾಥ ಮೇಸ್ತ, ಶಿವಪ್ಪ ಖಾರ್ವಿ, ನಾಗೇಶ ಖಾರ್ವಿ ಮೊದಲಾದವರು ಇದ್ದರು.