ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಶಿಗ್ಗಾಂವಿ ಉಪಚುನಾವಣೆ ಮತದಾನ ಬಹಿಷ್ಕಾರ

| Published : Nov 14 2024, 12:47 AM IST

ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಶಿಗ್ಗಾಂವಿ ಉಪಚುನಾವಣೆ ಮತದಾನ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಬಹಿಷ್ಕರಿಸಿ ಸವಣೂರ ಪಟ್ಟಣದ ದಂಡಿನಪೇಟೆ ನಿವಾಸಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಹಾವೇರಿ (ಶಿಗ್ಗಾಂವಿ): ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಬಹಿಷ್ಕರಿಸಿ ಸವಣೂರ ಪಟ್ಟಣದ ದಂಡಿನಪೇಟೆ ನಿವಾಸಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ದಂಡಿನಪೇಟೆ ನಿವಾಸಿಗಳು ತಮ್ಮ ಮನೆಯ ಮೇಲೆ ಮತದಾನ ಬಹಿಷ್ಕಾರ ಮಾಡಿದ್ದೇವೆ ಎಂಬ ಫಲಕ ಅಳವಡಿಸಿಕೊಂಡಿದ್ದರು. ನಮಗೆ ಹಕ್ಕುಪತ್ರ ಕೊಟ್ಟರೆ ಮಾತ್ರ ಮತಚಲಾಯಿಸುತ್ತೇವೆ ಎಂದು ಪಟ್ಟುಹಿಡಿದಿದ್ದರು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ಕೊಟ್ಟು ಮನವೊಲಿಸುವ ಪ್ರಯತ್ನ ಮಾಡಿದರು. ಅದಕ್ಕೆ ಮಣಿದು ಕೆಲವರು ಮತ ಹಾಕಿದರೆ, ಕೆಲವರು ಗೈರಾಗಿದ್ದರು.ಕಳೆದ 60-70 ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದೇವೆ. ಇಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು 500ಕ್ಕೂ ಹೆಚ್ಚು ಮತದಾರರಿದ್ದಾರೆ. ನಾವು ವಾಸವಿರುವ ಈ ಪ್ರದೇಶ ಮೂಲತಃ ಕಂದಾಯ ಭೂಮಿಯಾಗಿದ್ದು, ಕಳೆದ 20 ವರ್ಷಗಳಿಂದ ಕಂದಾಯ ಹಕ್ಕುಪತ್ರಕ್ಕಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರೂ ಹೇಳಿಕೆಗೆ ಮಾತ್ರ ಸರಿಪಡಿಸುವ ಭರವಸೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸತ್ತು ಈ ಬಾರಿ ಹಕ್ಕುಪತ್ರ ನೀಡುವವರೆಗೂ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದೇವೆ ಎಂದು ಲಕ್ಷ್ಮಿ ಕುಂದಗೋಳ, ಮಾಲತೇಶ ಕುಂದಗೋಳ, ರಜಾಕ ಮಕಾನದಾರ, ರಫೀಕಸಾಬ ಆಕ್ರೋಶ ವ್ಯಕ್ತಪಡಿಸಿದರು.ದಂಡಿನಪೇಟೆಯ ಸುಮಾರು 42 ಕುಟುಂಬಗಳಲ್ಲಿ 12 ಕುಟುಂಬದವರು ಮತದಾನ ಬಹಿಷ್ಕರಿಸಿದ್ದರು. ಸವಣೂರು ತಹಸೀಲ್ದಾರ್ ಅವರ ಮನವೊಲಿಸಿದ್ದು, ಅದರಲ್ಲಿ ಕೆಲವರು ಮತದಾನ ಮಾಡಿದ್ದಾರೆ. ಈ ವಿಷಯ ಕೋರ್ಟ್‌ನಲ್ಲಿ ಇರುವ ಕಾರಣ ಕೋರ್ಟ್ ನಿರ್ಧರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.