ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ ಆರಂಭ

| Published : Mar 02 2024, 01:50 AM IST

ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜಿನಲ್ಲಿ ಮಂಗಳೂರು ವಿ.ವಿ.ಯ ಅಡಿಯಲ್ಲಿ ಸುಮಾರು 45ಕ್ಕೂ ಅಧಿಕ ಮಂದಿ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಆದರೆ ಕಳೆದ ಐದು ತಿಂಗಳಿನಿಂದ ಉಪನ್ಯಾಸಕರಿಗೆ ವೇತನ ಆಗಿಲ್ಲ. ಇದರಿಂದ ಬೇಸತ್ತ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಕಾಲೇಜಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕಳೆದ ಐದು ತಿಂಗಳಿಂದ ವೇತನ ದೊರಕದ ಕಾರಣ ತರಗತಿ ಬಹಿಷ್ಕರಿಸಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾಲೇಜಿನಲ್ಲಿ ಮಂಗಳೂರು ವಿ.ವಿ.ಯ ಅಡಿಯಲ್ಲಿ ಸುಮಾರು 45ಕ್ಕೂ ಅಧಿಕ ಮಂದಿ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಆದರೆ ಕಳೆದ ಐದು ತಿಂಗಳಿನಿಂದ ಉಪನ್ಯಾಸಕರಿಗೆ ವೇತನ ಆಗಿಲ್ಲ. ಇದರಿಂದ ಬೇಸತ್ತ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಕಾಲೇಜಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು.ನಮಗೆ ವರ್ಷದಲ್ಲಿ ಹತ್ತು ತಿಂಗಳು ಮಾತ್ರ ಕೆಲಸ ಮಾಡಲು ಅವಕಾಶವಿದೆ. ಪ್ರತಿ ವರ್ಷ ಕೂಡ ನಮಗೆ ಸಂದರ್ಶನ ಮಾಡಿ ನೇಮಕ ಮಾಡಿಕೊಳ್ಳಲಾಗುತ್ತದೆ. 25 ವರ್ಷ ಕೆಲಸ ಮಾಡುತ್ತಿರುವವರೂ ಕೂಡ ಇದ್ದೇವೆ. ಆದರೆ ನಮಗೆ ಸೂಕ್ತ ಕಾಲಕ್ಕೆ ವೇತನ ದೊರಕುತ್ತಿಲ್ಲ. ಇದರಿಂದ ನಮ್ಮ ಜೀವನ ನಿರ್ವಹಣೆ ತೀರಾ ಕಷ್ಟವಾಗಿದೆ ಎಂದು ಅತಿಥಿ ಉಪನ್ಯಾಸಕರು ತಮ್ಮ ಅಳಲು ತೋಡಿಕೊಂಡರು.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ಡಾ. ಸೋಮಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಐದು ತಿಂಗಳಿಂದ ನಮಗೆ ವೇತನ ದೊರಕಿಲ್ಲ. ಕೊರೋನಾ ಅವಧಿಯ ಸಂಬಳ ಕೂಡ ಈ ವರೆಗೆ ನೀಡಿಲ್ಲ. ನಾವು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪರೀಕ್ಷೆ, ಮೌಲ್ಯಮಾಪನ, ಮೇಲ್ವಿಚಾರಣೆ ಸೇರಿದಂತೆ ಹಲವು ಕೆಲಸ ಮಾಡಿದ್ದೇವೆ. ಆದರೂ ನಮಗೆ ವೇತನ ನೀಡದೆ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು. ವೇತನ ನೀಡುವಂತೆ ಈಗಾಗಲೇ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಸಾವಿರಾರು ರುಪಾಯಿ ಖರ್ಚು ಮಾಡಿ ತೆರಳಿ ಸಂಬಂಧಿಸಿದವರಿಗೆ ಮನವಿ ಮಾಡಿಕೊಂಡರು ಕೂಡ ನಮಗೆ ಯಾವುದೇ ಸ್ಪಂದನೆ ದೊರಕಿಲ್ಲ. ಆದ್ದರಿಂದ ನಾವು ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ವೇತನ ದೊರಕಿಲ್ಲದಿದ್ದರೆ ನಮ್ಮ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ವಿಶ್ವ ವಿದ್ಯಾನಿಲಯ ಹಾಗೂ ಕಾಲೇಜಿಗೆ ಅಗೌರವ ತರುವ ಕೆಲಸ ಮಾಡುತ್ತಿಲ್ಲ. ಬದಲಾಗಿ ನಮ್ಮ ದುಡಿಮೆಯ ವೇತನವನ್ನು ಮಾತ್ರ ಮೌನ ರೀತಿಯಲ್ಲಿ ಪ್ರತಿಭಟಿಸುವ ಮೂಲಕ ಕೇಳುತ್ತಿದ್ದೇವೆ. ನಮಗೆ ವೇತನ ದೊರಕುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದರು. ಅತಿಥಿ ಉಪನ್ಯಾಸಕ ಮಧುಕರ್ ಮಾತನಾಡಿ ಎನ್ ಇಟಿ, ಸ್ಲಟ್, ಪಿಎಚ್‌ಡಿ ಪಡೆದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೂ ನಮಗೆ ವಿಶ್ವ ವಿದ್ಯಾನಿಲಯದಿಂದ ವೇತನ ನೀಡದೆ ದುಡಿಸಿಕೊಳ್ಳಲಾಗುತ್ತಿದೆ. ಇದೀಗ ಅಕ್ಟೋಬರ್ ಒಂದು ತಿಂಗಳ ಸಂಬಳ ಮಾತ್ರ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ನಮಗೆ ಪೂರ್ತಿ ವೇತನ ನೀಡುವ ವರೆಗೆ ನಾವು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

ಪ್ರತಿಕ್ರಿಯೆ ನೀಡದ ವಿ.ವಿ.: ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಸುಮಾರು 45ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಈ ಬಗ್ಗೆ ಮಂಗಳೂರು ವಿಶ್ವ ವಿದ್ಯಾನಿಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ಇಲ್ಲಿನ ಉಪನ್ಯಾಸಕರು ತಮ್ಮ ಸಮಸ್ಯೆಗಳ ಬಗ್ಗೆ ಮಂಗಳೂರು ವಿವಿಗೆ ತೆರಳಿ ಮನವಿ ಮಾಡಿಕೊಂಡರೂ ಕೂಡ ಅದಕ್ಕೆ ಸೂಕ್ತ ಸ್ಪಂದನೆ ದೊರಕಿಲ್ಲ

ವಿದ್ಯಾರ್ಥಿಗಳಿಗೆ ಪಾಠವಿಲ್ಲ!ಸುಮಾರು 45ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಒಂದೆರೆಡು ತರಗತಿ ಕುಳಿತು ಮತ್ತೆ ಮನೆಗೆ ಹಿಂತಿರುಗುವ ಪರಿಸ್ಥಿತಿ ಉಂಟಾಗಿದೆ.